ಮಾ.21ರಂದು ರಾಹುಲ್ ಗಾಂಧಿ ಚಿಕ್ಕಮಗಳೂರು ಪ್ರವಾಸ
ಚಿಕ್ಕಮಗಳೂರು, ಮಾ.11: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾ.21ರಂದು ಚಿಕ್ಕಮಗಳೂರು ಪ್ರವಾಸ ಕೈಗೊಳ್ಳಲಿದ್ದು, ಅಂದು ಶೃಂಗೇರಿ ಚಿಕ್ಕಮಗಳೂರು, ಕಡೂರು, ತರೀಕೆರೆಯಲ್ಲಿ ನಡೆಯಲಿರುವ ಜನಾಶೀರ್ವಾದ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ವಿಷ್ಣುನಂದನ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ, ಜಿಲ್ಲೆಯ ತರೀಕೆರೆ, ಕಡೂರು, ಶೃಂಗೇರಿಯಲ್ಲಿ ಸಮಾವೇಶ ನಡೆಯುವ ಸ್ಥಳದ ಪರಿಶೀಲನೆ ನಡೆಸಿ ಚಿಕ್ಕಮಗಳೂರು ನಗರದ ಸುಭಾಷ್‍ಚಂದ್ರಬೋಸ್ ಜಿಲ್ಲಾ ಆಟದ ಮೈದಾನ ವೀಕ್ಷಣೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‍ಗಾಂಧಿ ಮಾ.19 , 20ರಂದು ಮಂಗಳೂರು, ಉಡುಪಿ ಪ್ರವಾಸ ನಡೆಸಲಿದ್ದು, ಮಾ.21ರಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ಬರಲಿದ್ದಾರೆ. ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಪೂಜೆಯ ಬಳಿಕ ಜನಾಶೀರ್ವಾದ ಯಾತ್ರೆಯ ಮೂಲಕ ಚಿಕ್ಕಮಗಳೂರಿಗೆ ಆಗಮಿಸಿ ನಗರದ ಸುಭಾಷ್‍ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆಯುವ ಜನಾಶೀರ್ವಾದ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಹಾಸನಕ್ಕೆ ತೆರಳಲಿದ್ದಾರೆಂದು ಅವರು ತಿಳಿಸಿದರು.