ಭಾರತ ಕವಲು ದಾರಿಯಲ್ಲಿ ಸಾಗುತ್ತಿದೆ: ಸಾಹಿತಿ ಕೆ.ಮರುಳಸಿದ್ದಪ್ಪ

Update: 2018-03-11 16:55 GMT

ತುಮಕೂರು,ಮಾ.11: ಭಾರತ ದೇಶ ಕವಲುದಾರಿಯಲ್ಲಿ ಸಾಗುತ್ತಿದೆ ಎಂದು ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. 

ತುಮಕೂರಿನ ಕನ್ನಡ ಭವನದಲ್ಲಿ ವೀಚಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಭಾರತದಲ್ಲಿ ಮತ್ತು ವಿಶ್ವದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಗಾಬರಿ ಹುಟ್ಟಿಸುತ್ತದೆ. ಇನ್ನೈದು ವರ್ಷಗಳಲ್ಲಿ ಊಹಿಸಲು ಸಾಧ್ಯವಾಗದಂತಹ ಪರಿಸ್ಥಿತಿಗೆ ತಲುಪುತ್ತದೆ. ಇಂತಹ ಸಂದರ್ಭದಲ್ಲಿ ಕವಿಗಳು, ಕಲಾವಿದರು, ಲೇಖಕರು ಮತ್ತು ಪತ್ರಕರ್ತರು ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದರು.

ಕವಿ ವೀಚಿ ಅವರಲ್ಲಿ ತುಮಕೂರು ಜಿಲ್ಲೆಯ ಸಾಂಸ್ಕೃತಿಕ ವ್ಯಕ್ತಿತ್ವ ಕಂಡು ಬರುತ್ತದೆ. ಅವರು ಕಾವ್ಯವನ್ನು ಗಂಭೀರವಾಗಿ ಪರಿಗಣಿಸಿದರು. ವೀಚಿ ಅವರ ಕಾವ್ಯವು ಸೇರಿದಂತೆ ಯಾವುದೇ ಕಾವ್ಯ ಒಂದು ಒಂದಲ್ಲ, ಹಲವರ ದ್ವನಿ. ಕೆಲವು ಲೇಖಕರು ಅಬ್ಬರದಿಂದ ಮಾತನಾಡಿದರೆ ಮತ್ತೆ ಆಶಾದೇವಿ, ಸುಗತ ಶ್ರೀನಿವಾಸರಾಜು ಅವರಂಥವರು ಮೆಲುದನಿಯಲ್ಲಿ ಬರೆಯುತ್ತಿದ್ದಾರೆ. ಇಂತಹ ಸಮತೋಲನ ಅಗತ್ಯ ಎಂದು ತಿಳಿಸಿದರು.

ಸಂಸ್ಕೃತಿ ಚಿಂತಕ ಡಾ.ಅಮರೇಶ್ ನುಗಡೋಣಿ ಮಾತನಾಡಿ, ಯಾವುದೇ ಸಾಂಸ್ಕೃತಿಕ ಚಳವಳಿಗಳಿಲ್ಲದ ಕಾಲದಲ್ಲಿ ಸ್ತ್ರೀವಾದಿ ಚಳವಳಿ ಆರಂಭವಾಯಿತು. ಅದು ಇಂದು ಅಗಾಧವಾಗಿ ಬೆಳೆದಿದೆ. ಇಂದು ಮಾರ್ಕ್ಸ್ ವಾದ, ಸಮತಾವಾದ, ಅಂಬೇಡ್ಕರ್ ವಾದ ಮಸುಕಾದಂತೆ ಮಹಿಳಾ ವಾದವೂ ಮಸುಕಾಗಬಹುದು. ಆಶಾದೇವಿ ಹಲವು ಗ್ರಂಥಗಳ ಮಹಿಳಾ ಪಾತ್ರಗಳನ್ನು ಮಹಿಳೆಯರನ್ನಾಗಿಯೇ ನೋಡಿದ್ದಾರೆ. ನಾರೀಕೇಳಾದಲ್ಲಿ ಅಂತಹ ಧ್ವನಿ ಇರುವುದು ಕಂಡುಬರುತ್ತದೆ ಎಂದರು.

ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರ ಕಿತ್ತಳೆ, ನೇರಳೆ ಮತ್ತು ಪೇರಳೆ ಕೃತಿಯ ಹೆಸರೇ ಒಂದೊಂದು ವಿಭಿನ್ನ ರುಚಿಯನ್ನು ತೋರಿಸುತ್ತದೆ. ಸುಗತ ಅವರು ಸಮಸ್ಯೆಗಳನ್ನು ಅವಾಹಿಸಿಕೊಂಡು ಪ್ರತಿಯೊಂದು ಮಗ್ಗುಲನ್ನು ವಿಮರ್ಶಿಸಿ ಒಂದು ತೀರ್ಮಾನಕ್ಕೆ ಬರುತ್ತಾರೆ. ಈ ಕೃತಿಯನ್ನು ರಾಜಕಾಣಿಗಳು, ಸಾಹಿತಿಗಳು ಮತ್ತು ಪತ್ರಕರ್ತರು ಓದಲೇಬೇಕು. ಮಾಧ್ಯಮಗಳು ಹುಟ್ಟುಹಾಕುತ್ತಿರುವ ಸಂಗತಿಗಳ ಕುರಿತು ಇದರಲ್ಲಿ ಹೇಳಿದ್ದಾರೆ ಎಂದು ವಿವರಿಸಿದರು.

ವೀಚಿ ಪ್ರಶಸ್ತಿ ಪುರಸ್ಕೃತ ಸುಗತ ಶ್ರೀನಿವಾಸರಾಜು ಮಾತನಾಡಿ, ಸರಕಾರಿ ಪ್ರಶಸ್ತಿ ಸ್ವೀಕರಿಸಲು ಭಯವಾಗುತ್ತದೆ. ಔಟ್‍ಲುಕ್ ಪತ್ರಿಕೆಯ ಸಂಪಾದಕರಾಗಿದ್ದ ವಿನೋದ್ ಮೆಹ್ತ ನನಗೆ ಆಗಾಗ ಎಚ್ಚರಿಸುತ್ತಲೇ ಇದ್ದರು. ಯಾವುದೇ ಕಾರಣಕ್ಕೂ ಪತ್ರಕರ್ತ ಪ್ರಶಸ್ತಿಗಳ ಬೆನ್ನತ್ತಬಾರದು. ಪ್ರಶಸ್ತಿ ಸ್ವೀಕರಿಸುತ್ತಾ ಹೋದಂತೆ ಆತ ಎಲ್ಲರೊಂದಿಗೂ ಹೊಂದಾಣಿಕೆಯಾಗುತ್ತಾನೆ. ಆ ಕಾರಣಕ್ಕಾಗಿ ನಾನು ಹಲವು ಪ್ರಶಸ್ತಿಗಳನ್ನು ನಯವಾಗಿಯೇ ತಿರಸ್ಕರಿಸಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟನೆಗೂ ಮೊದಲು ನಾರೀಕೇಳಾ ಕೃತಿಯ ಲೇಖಕಿ ಡಾ.ಎಂ.ಎಸ್. ಆಶಾದೇವಿ, ಕಿತ್ತಳೆ, ನೇರಳೆ ಪೇರಳೆ ಕೃತಿಯ ಕರ್ತೃ ಸುಗತ ಶ್ರೀನಿವಾಸರಾಜು ಅವರಿಗೆ ವೀಚಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಬಾರಿಗೆ ಪಾದ ಕೃತಿಯ ಲೇಖಕ ಬಸವರಾಜ ಹೃತ್ಸಾಕ್ಷಿ ಅವರಿಗೆ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಮತ್ತು ಜಾನಪದ ಕಲಾವಿದೆ ವಡ್ಡಗೆರೆ ಕದಿರಮ್ಮ ಅವರಿಗೆ ವೀಚಿ ಜಾನಪದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಾನಾಗಭೂಷಣ ಬಗ್ಗನಡು, ವೀಚಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಸವಯ್ಯ,ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News