×
Ad

ದಾವಣಗೆರೆ: ಬೈಲಾ ತಿದ್ದುಪಡಿ ತೀರ್ಮಾನ ವಿರೋಧಿಸಿ ಕಸಾಪದಿಂದ ಸತ್ಯಾಗ್ರಹ

Update: 2018-03-11 22:39 IST

ದಾವಣಗೆರೆ,ಮಾ.11: ಕನ್ನಡ ಸಾಹಿತ್ಯ ಪರಿಷತ್‍ನ ಅಧಿಕಾರ ಅವಧಿಯ ಬೈಲಾ ತಿದ್ದುಪಡಿ ತೀರ್ಮಾನ ವಿರೋಧಿಸಿ ಕಸಾಪದ ಅಜೀವ ಸದಸ್ಯರು ನಗರದಲ್ಲಿ ಸತ್ಯಾಗ್ರಹ ನಡೆಸಿದರು.

ನಗರದ ಕುವೆಂಪು ಕನ್ನಡ ಭವನದ ಎದುರು ಧರಣಿ ನಡೆಸಿದ ಅಜೀವ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ಆಂದೋಲನ ಮೂಲಕ ಕಸಾಪ ಬೈಲಾ ತಿದ್ದುಪಡಿಗೆ ವಿರೋಧಿಸಿದರು.

ಕನ್ನಡ ಸಾಹಿತ್ಯ ಪರಿಷತ್‍ನ ಅಜೀವ ಸದಸ್ಯ ಆರ್.ಶಿವಕುಮಾರ್ ಕುರ್ಕಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ 3 ಲಕ್ಷಕ್ಕೂ ಅಧಿಕ ಅಜೀವ ಸದಸ್ಯರು ಇದ್ದು, ಅವರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಕಚೇರಿಯಲ್ಲಿ ವಿಶೇಷ ಸಭೆ ಕರೆದು ನಿರ್ಣಯ ಕೈಗೊಳ್ಳಬೇಕು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಗ್ರಾಮವಾದ ಕೋಟದಲ್ಲಿ ಮಾ.15ರಂದು ಸಭೆ ಕರೆದಿರುವುದರ ಹಿಂದೆ ಕುತಂತ್ರ ಅಡಗಿದೆ ಎಂದು ಆರೋಪಿಸಿದರು.

ಸಾಹಿತ್ಯ ಪರಿಷತ್ ಪ್ರಸ್ತುತ ಬೈಲಾದ ಪ್ರಕಾರ ಮೂರು ವರ್ಷಕ್ಕೊಮ್ಮೆ ಸಮಿತಿಗಳ ಅಧಿಕಾರ ಬದಲಾಗಬೇಕೆಂಬ ನಿಯಮ ಇದೆ. ಆದರೆ ಹಾಲಿ ಅಧ್ಯಕ್ಷ ಡಾ.ಮನು ಬಳಿಗಾರ ತಮ್ಮ ಅಧಿಕಾರ ಅವಧಿಯಿಂದಲೇ ಅನ್ವಯವಾಗುವಂತೆ ತಿದ್ದುಪಡಿ ಮಾಡಿಕೊಂಡು ಐದು ವರ್ಷದವರೆಗೆ ವಿಸ್ತರಿಸಿಕೊಳ್ಳಲು ಹೊರಟಿರುವುದು ಖಂಡನೀಯ, ಅಕ್ಷಮ್ಯ ಅಪರಾಧವಾಗಿದೆ ಎಂದರು.

ರಾಜ್ಯದ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿಗಳಿಗಿರುವ ಮೂರು ವರ್ಷದ ಅಧಿಕಾರವಾಧಿ ಇವರಿಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು. ಈಗ ಇರುವ ಮೂರು ವರ್ಷಗಳ ಅಧಿಕಾರ ಸಾಕು. ಕಸಾಪ ಬೈಲಾದ ನಿಯಮ ತಾವೇ ತಿದ್ದಿಕೊಂಡು ತಮ್ಮ ಅಧಿಕಾರಾವಧಿಯಿಂದಲೇ ಅನ್ವಯವಾಗುವಂತೆ ನಿರ್ಣಯ ತಂದುಕೊಳ್ಳುವ ಸರ್ವಾಧಿಕಾರ ಧೋರಣೆ ನಾಚಿಕೆಗೇಡಿನ ಸಂಗತಿ. ಇದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಡಿ.ಶಿವಕುಮಾರ್, ವಿಜಯ ಕುಮಾರ್, ರೇವಣ್ಣ ಬಳ್ಳಾರಿ, ರಾಜಶೇಖರ್ ಗೂಂಡಗಟ್ಟಿ, ಬಂಕಾಪುರದ ಚನ್ನಬಸಪ್ಪ, ಎಚ್.ಕೆ. ಕೊಟ್ರಪ್ಪ, ಸಿದ್ದಲಿಂಗಪ್ಪ, ಶಿವಯೋಗಿ ಹಿರೇಮಠ್, ಎಂ.ಎ. ಖತೀಬ್, ವೀಣಾ ಕೃಷ್ಣಮೂರ್ತಿ, ಓಂಕಾರಮ್ಮ ರುದ್ರಮುನಿಸ್ವಾಮಿ, ರಾಜೇಂದ್ರ ಪ್ರಸಾದ್ ನೀಲಗುಂದ್, ಎಂ. ಮುರುಗೇಂದ್ರಯ್ಯ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News