ಮಡಿಕೇರಿ: ಉಚಿತ ಆರೋಗ್ಯ ತಪಾಸಣಾ ಮತ್ತು ಔಷಧ ವಿತರಣಾ ಶಿಬಿರ
ಮಡಿಕೇರಿ, ಮಾ.11: ಆರೋಗ್ಯದ ಸಂರಕ್ಷಣೆಯ ಚಿಂತನೆಯಡಿ ಆಯೋಜಿಸುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸುವುದು ಉಪಯುಕ್ತವೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ವೈದ್ಯಕೀಯ ಘಟಕದ ವತಿಯಿಂದ, ಕೊಡಗು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ, ಮಂಗಳೂರಿನ ಇಂಡಿಯಾನ ಅಸ್ಪತ್ರೆ ಮತ್ತು ಬೆಂಗಳೂರಿನ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿಯವರ ಸಹಕಾರದೊಂದಿಗೆ ನಗರದ ರೋಟರಿ ಸಭಾಂಗಣದಲ್ಲಿ ‘ಉಚಿತ ಆರೋಗ್ಯ ತಪಾಸಣಾ ಮತ್ತು ಔಷಧ ವಿತರಣ ಶಿಬಿರ’ ನಡೆಯಿತು. ಕಾಂಗ್ರೆಸ್ ನಗರಾಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾಕ್ ಅವರಿಗೆ ಔಷಧಿ ಕಿಟ್ ನೀಡುವ ಮೂಲಕ ಶಿಬಿರವನ್ನು ಉದ್ಘಾಟಿಸಿ ವೀಣಾ ಅಚ್ಚಯ್ಯ ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ನೆಲೆಸಿರುವ ಸಾಕಷ್ಟು ಮಂದಿಗೆ ತಮ್ಮ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪಟ್ಟಣ ಪ್ರದೇಶದ ಆಸ್ಪತ್ರೆಗಳಿಗೆ ಬರಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಪಟ್ಟಣ ಪ್ರದೇಶಗಳಲ್ಲಿ ನಡೆಸುವ ಇಂತಹ ಆರೋಗ್ಯ ಶಿಬಿರಗಳು ಗ್ರಾಮಾಂತರ ಭಾಗಗಳಲ್ಲು ಆಯೋಜನೆಗೊಳ್ಳುವುದು ಉಪಯುಕ್ತ. ಸಾಕಷ್ಟು ಗ್ರಾಮೀಣ ಮಹಿಳೆಯರು ಅನಾರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದರೂ, ಅದನ್ನು ಬಹಿರಂಗ ಪಡಿಸದೆ ನೋವನ್ನು ನುಂಗಿಕೊಂಡು ಸಂಕಷ್ಟದ ಬದುಕನ್ನು ಎದುರಿಸುತ್ತಿದ್ದಾರೆ. ಅಂತಹವರಿಗೆ ಗ್ರಾಮಿಣ ಭಾಗದ ಆರೋಗ್ಯ ಶಿಬಿರಗಳು ವರದಾನವಾಗಬಲ್ಲುದೆಂದು ಅಭಿಪ್ರಾಯಪಟ್ಟರು.
ಇಲ್ಲಿನ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಈ ಶಿಬಿರದಲ್ಲಿ ಹೃದಯ, ಮೂತ್ರ ಪಿಂಡ, ನರ ಮತ್ತು ಕರುಳು ರೋಗದ ಬಗ್ಗೆ ತಪಾಸಣೆ ನಡೆಸಿ, ಔಷಧಿಗಳನ್ನು ನೀಡುತ್ತಿರುವುದು ಅತ್ಯಂತ ಉತ್ತಮವಾದ ವಿಚಾರ. ಸಾರ್ವಜನಿಕರು ಇಂತಹ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕೆಂದರು.
ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಆರೋಗ್ಯವನ್ನು ಜತನದಿಂದ ಕಾಪಾಡಿಕೊಂಡಲ್ಲಿ ಕುಟುಂಬ ಚೆನ್ನಾಗಿದ್ದಂತೆ. ಕುಟುಂಬ ಉತ್ತಮವಾಗಿದ್ದಲ್ಲಿ ನಾಗರಿಕ ಸಮಾಜ ಚೆನ್ನಾಗಿರುತ್ತದೆಂದು ತಿಳಿಸಿ, ಇಂತಹ ಶಿಬಿರಗಳ ಮೂಲಕ ನಮ್ಮಲ್ಲಿನ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೆ ಗುರುತಿಸಿಕೊಂಡು ಯೋಗ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುವುದೆ ಆಗಿದೆಯೆಂದರು.
ಪ್ರಸ್ತುತ ವ್ಯವಸ್ಥೆಯಡಿ ಆರೋಗ್ಯ ಸಮಸ್ಯೆಗಳನ್ನು ಕಂಡುಕೊಳ್ಳಲು ಆಸ್ಪತ್ರೆಗಳಿಗೆ ತೆರಳುವುದು ಮತ್ತು ಚಿಕಿತ್ಸೆಯನ್ನು ಪಡೆಯುವುದೆ ಒಂದು ದುಬಾರಿ ಕಾರ್ಯವೆಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಉಚಿತ ಶಿಬಿರಗಳು ಜನ ಸಾಮಾನ್ಯರ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ನೆರವನ್ನು ನೀಡುತ್ತದೆ ಎಂದರು.
ವೈದ್ಯರುಗಳೇ ಇಲ್ಲ
ಇಂಡಿಯಾನ ಆಸ್ಪತ್ರೆಯ ಪ್ರಮುಖರಾದ ಡಾ. ಯೂಸೂಫ್ ಕುಂಬ್ಳೆ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹೃದ್ರೋಗ, ನರ, ಮೂತ್ರಪಿಂಡ, ಮೂಳೆ ರೋಗಗಳಿಗೆ ಸಂಬಂಧಿಸಿದ ವೈದ್ಯರುಗಳೆ ಇಲ್ಲ. ಈ ಯಾವುದೇ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ದೂರದ ಮಂಗಳೂರು, ಮೈಸೂರಿನತ್ತ ಮುಖಮಾಡಬೇಕಾದ ಪರಿಸ್ಥಿತಿ ಇರುವುದಾಗಿ ವಿಷಾದಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ವೈದ್ಯಕೀಯ ಘಟಕದ ಜಿಲ್ಲಾಧ್ಯಕ್ಷ ಕೊಡ್ಲಿಪೇಟೆಯ ಡಾ.ಉದಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೂಡಾ ಅಧ್ಯಕ್ಷ ಎ.ಸಿ. ಚುಮ್ಮಿ ದೇವಯ್ಯ, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಕಾಂಗ್ರೆಸ್ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಎ.ಯಾಕೂಬ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ಉಪಸ್ಥಿತರಿದ್ದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ತೆನ್ನೀರ ಮೈನಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಡಿಕೇರಿ ಬ್ಲಾಕ್ ಕಾಂಗ್ರೆಸ್‍ನ ಜಾನ್ಸನ್ ಪಿಂಟೋ ವಂದಿಸಿದರು.