×
Ad

ಪರಮೇಶ್ವರ್ ರನ್ನು ಕುತಂತ್ರದಿಂದ ಸೋಲಿಸಿದ್ದು ಸಿದ್ದರಾಮಯ್ಯ: ಬಿಎಸ್ ಯಡಿಯೂರಪ್ಪ

Update: 2018-03-12 19:01 IST

ತುಮಕೂರು.ಮಾ.12: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುತಂತ್ರ ಮಾಡಿ ಮುಖ್ಯಮಂತ್ರಿ ರೇಸ್‍ನಲ್ಲಿದ್ದ ಡಾ.ಜಿ, ಪರಮೇಶ್ವರ್ ಅವರನ್ನು ಸೋಲಿಸಿದ ಸಿದ್ದರಾಮಯ್ಯ, ಯಾವ ನೈತಿಕತೆ ಇಟ್ಟುಕೊಂಡು ಅವರ ಪರ ಪ್ರಚಾರ ಮಾಡುತ್ತಿದ್ದಾರೆ? ಅವರಿಗೆ ಪಾಪಪ್ರಜ್ಞೆ ಕಾಡುತ್ತಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ ಹೋಬಳಿಯ ಹೊಳಕಲ್ಲು ಗ್ರಾಮದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ 'ಮುಷ್ಠಿಧಾನ್ಯ' ಸಂಗ್ರಹಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ರಾಜ್ಯ ಸರಕಾರವು ನಂಬರ್ 1 ಎಂದು ಬೊಗಳೆ ಬಿಡುತ್ತಿದೆ. ನೀರಾವರಿ ಯೋಜನೆಗಳ ಬಗ್ಗೆ ಪ್ರತಿನಿತ್ಯ ಪುಟಗಟ್ಟಲೆ ಜಾಹೀರಾತು ನೀಡಿ ರಾಜ್ಯ ಸರಕಾರದ ಬೊಕ್ಕಸಕ್ಕೆ ನಷ್ಟದ ಜೊತೆಗೆ, ನಾಡಿನ ಜನತೆಯ ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದೆ ಎಂದು ದೂರಿದರು.

ಜಾನುವಾರುಗಳು ಮೃತಪಟ್ಟರೆ ಹತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ಕೇಂದ್ರ ಸರಕಾರ ನೀಡಲಿದೆ. ಜಾನುವಾರುಗಳ ಸಾವು ಸ್ವಾಭಾವಿಕವಾಗಲಿ, ಅಸ್ವಾಭಾವಿಕವಾಗಲಿ, ಯಾವುದೇ ವಿಮೆ ಇಲ್ಲದಿದ್ದರೂ ಸಹ ಈ ಯೋಜನೆಯನ್ನು ರೈತರು ಪಡೆಯಬಹುದಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರಕಾರ ಅನ್ನಭಾಗ್ಯ ಯೋಜನೆಗೆ 29 ರೂ ಸಹಾಯಧನ ನೀಡುತ್ತಿದೆ. ರಾಜ್ಯ ಸರಕಾರವು ಕೇವಲ 3 ರೂ ಸಹಾಯಧನ ನೀಡುತ್ತಿದೆ. ಇಷ್ಟು ದಿನ 3ಕೆ.ಜಿ ಅಕ್ಕಿ ನೀಡುತ್ತಿದ್ದ ರಾಜ್ಯ ಸರಕಾರ, ಚುನಾವಣೆಗೋಸ್ಕರ 7ಕೆ.ಜಿ.ಅಕ್ಕಿ ನೀಡುತ್ತಿದೆ. ಒಂದು ತಿಂಗಳಲ್ಲಿ ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆ ನಿಲ್ಲಿಸಲಿದ್ದಾರೆ. ರಾಜ್ಯದಲ್ಲಿ ನನ್ನ ನೇತೃತ್ವದ ಸರಕಾರ ಅಧಿಕಾರ ಬಂದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೂ ಜೊತೆಗೂಡಿ ಕಲ್ಯಾಣ ಕರ್ನಾಟಕದ ಕನಸನ್ನು ನನಸು ಮಾಡುವ ಕೆಲಸಕ್ಕೆ ಭದ್ರ ಬುನಾದಿ ಹಾಕುತ್ತೇವೆ ಎಂದು ಬಿ.ಎಸ್.ವೈ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್, ಮಾಜಿ ವಿಧಾನ ಪರಿಷತ್ತು ಸದಸ್ಯ ಹುಲಿನಾಯ್ಕರ್,ಜಿ.ಪಂ.ಸದಸ್ಯ ಶಿವಕುಮಾರ್, ನರಸಿಂಹಮೂರ್ತಿ, ಅನಿತಾಸಿದ್ದೇಗೌಡ, ತಾ.ಪಂ, ಉಪಾಧ್ಯಕ್ಷ, ಶಾಂತಕುಮಾರ್, ತಾ.ಪಂ, ಸದಸ್ಯೆ ಅಶಾ ನೀಲಕಂಠಪ್ಪ ರೈತ ಮೋರ್ಚಾ ಅಧ್ಯಕ್ಷ ಸ್ನೇಕ್ ನಂದೀಶ್, ಪ್ರ.ಕಾರ್ಯದರ್ಶಿ ತರಕಾರಿ ಮಹೇಶ್, ಇತರ ಪದಾಧಿಕಾರಿಗಳು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News