×
Ad

ಕಪಿಲಾ ನದಿ ಮರುಜೋಡಣೆ, ಸೋಪಾನಕಟ್ಟೆ ನಿರ್ಮಾಣ: ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2018-03-12 21:37 IST

ಮೈಸೂರು,ಮಾ.12: ಕಪಿಲಾ ನದಿ ಸೋಪಾನಕಟ್ಟೆ ಮರುಜೋಡಣೆ, ಅಕ್ಕಪಕ್ಕದ ರಸ್ತೆಗೆ ತಡೆಗೋಡೆ ನಿರ್ಮಾಣಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ನಂಜನಗೂಡಿನ ಕಪಿಲಾ ನದಿ ಬಳಿ ಸೋಮವಾರ ಬೆಳಿಗ್ಗೆ 69 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ 150 ಕ್ಕೆ ಸೇರಿದ 1500 ಕಿಲೋ ಮೀಟರ್ ಉದ್ದದ ಜೇವರ್ಗಿಯಿಂದ ಚಾಮರಾಜನಗರ ತನಕ ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ರಸ್ತೆ ಸಂಚಾರ ಹಾಗೂ ಇನ್ನಿತರೆ ಸಾಗಾಣಿಕೆಗೆ ಒಳ್ಳೆಯದಾಗುತ್ತದೆ ಎಂದರು.

ದಕ್ಷಿಣ ಕಾಶಿಯೆಂದೇ ಪ್ರಸಿದ್ಧವಾಗಿರುವ ನಂಜನಗೂಡಿಗೆ ಪ್ರತಿ ನಿತ್ಯ ಸಹಸ್ರಾರು ಮಂದಿ ಭಕ್ತರು ಬರುವುದಲ್ಲದೇ ಜಾತ್ರೆ ಹಾಗೂ ವಿಶೇಷ ಸಂದರ್ಭದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸುತ್ತಾರೆ. ಪವಿತ್ರ ಕಪಿಲ ನದಿಯಲ್ಲಿ ಸ್ನಾನ ಮಾಡಿ ಶ್ರೀಕಂಠೇಶ್ವರನ ದರ್ಶನ ಪಡೆಯುತ್ತಾರೆ. ಕಪಿಲ ನದಿಯ ದಂಡೆಯಲ್ಲಿ ಸೋಪಾನ ಕಟ್ಟೆ ಹಾಕಲಾಗಿರುವ ಕಲ್ಲುಗಳು ಏರು ಪೇರಾಗಿದ್ದು, ಕೆಲವು ಒಡೆದು ಹೋಗಿವೆ. ಹಾಗಾಗಿ ಭಕ್ತರ ಹಿತದೃಷ್ಟಿಯಿಂದ ಸುಮಾರು 300ಮೀ. ವಿಸ್ತೀರ್ಣದ ಸೋಪಾನ ಕಟ್ಟೆಗೆ ಮರು ಜೋಡಣೆ ಮಾಡಲಾಗುವುದಲ್ಲದೆ ನದಿಯ ಪಕ್ಕದ ರಸ್ತೆಗಳಿಗೆ ತಡೆ ಗೋಡೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಹೆಜ್ಜಿಗೆ ಗ್ರಾಮದ ರಸ್ತೆ, ಸೋಪಾನ ಕಟ್ಟೆ ನಿರ್ಮಾಣಕ್ಕೆ 20 ಕೋಟಿ, ನಂಜನಗೂಡು ನಗರದಲ್ಲಿ 3 ಸೇತುವೆಗಳು ನಿರ್ಮಾಣವಾಗಲಿವೆ. ನನ್ನ ಕನಸಿನಂತೆ ನಂಜನಗೂಡಿಗೆ ಹೆಲಿಪ್ಯಾಡ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದ್ದು, 2018ಕ್ಕೆ ನಂಜನಗೂಡಿನ ಚಿತ್ರಣವೇ ಬದಲಾಗಲಿದೆ. ಇದಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಧ್ರುವನಾರಾಯಣ್, ಶಾಸಕ ಕಳಲೆ ಕೇಶವಮೂರ್ತಿ, ಡಾ.ಯತೀಂದ್ರ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News