ಶಿವಮೊಗ್ಗ: ಭೂಮಿ ಅತಿಕ್ರಮಣಕ್ಕಾಗಿ ಅರಣ್ಯಕ್ಕೆ ಬೆಂಕಿ

Update: 2018-03-12 16:39 GMT

ಶಿವಮೊಗ್ಗ, ಮಾ. 12: ಭೂ ಅತಿಕ್ರಮಣ ಮಾಡಿಕೊಳ್ಳುವ ಉದ್ದೇಶದಿಂದ ಅರಣ್ಯಕ್ಕೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಗವಟೂರು ಗ್ರಾಮದಲ್ಲಿ ನಡೆದಿದೆ.

ಗವಟೂರು ಗ್ರಾಮದ ಸರ್ವೇ ನಂಬರ್ 50 ರ ಮೀಸಲು ಅರಣ್ಯಕ್ಕೆ ಅತಿಕ್ರಮಣಕಾರರು ಬೆಂಕಿ ಹಚ್ಚಿದ ಪರಿಣಾಮ, ಸುಮಾರು 25 ಎಕರೆಗೂ ಹೆಚ್ಚು ಅರಣ್ಯ ಭೂಮಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಸಂಪೂರ್ಣ ಭಸ್ಮವಾಗಿದೆ ಎಂದು ತಿಳಿದುಬಂದಿದೆ. 

ಕಾರಣವೇನು?: ಗವಟೂರು ಗ್ರಾಮದ ರೈತನೋರ್ವನ ವಿರುದ್ದ ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪ ಕೇಳಿ ಬಂದಿದೆ. ಶುಂಠಿ ಬೆಳೆಯುವ ಉದ್ದೇಶದಿಂದ ಅರಣ್ಯಕ್ಕೆ ಬೆಂಕಿ ಹಚ್ಚಿ, ಮರಗಿಡಗಳನ್ನು ಕಡಿದು ಹಾಕಿ ಭೂ ಅತಿಕ್ರಮಣ ಮಾಡಿಕೊಳ್ಳುವ ಹುನ್ನಾರ ಇದಾಗಿದೆ ಎಂದು ಹೇಳಲಾಗಿದೆ. 

ಅಡಿಕೆ ಗರಿಗಳನ್ನು ಬಳಸಿ ಅರಣ್ಯಕ್ಕೆ ಬೆಂಕಿ ಹಚ್ಚಲಾಗಿದೆ. ಉರಿ ಬಿಸಿಲು, ಗಾಳಿ ಹಾಗೂ ಒಣಗಿದ ಗಿಡಗಂಟೆಗಳ ಕಾರಣದಿಂದ ಬೆಂಕಿಯು ಕೆನ್ನಾಲಿಗೆ ಕಾಡೆಲ್ಲಾ ಆವರಿಸಿದೆ. ಈ ನಡುವೆ ಬೆಲೆಬಾಳುವ ಮರಗಳನ್ನು ಮನಸೋ ಇಚ್ಛೆ ಕಡಿದಿರುವುದು ಬೆಳಕಿಗೆ ಬಂದಿದೆ. ಬೆಲೆಬಾಳುವ ನಂದಿ, ಹುನಾಲು ಮರಗಳು ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಅರಣ್ಯ ಸಂಪತ್ತು ನಾಶವಾಗಿದೆ. ವನ್ಯಜೀವಿಗಳು ಸುಟ್ಟು ಕರಕಲಾಗಿ, ಜೀವವೈವಿದ್ಯತೆಗೆ ಧಕ್ಕೆ ಉಂಟಾಗಿದೆ. 

ಅರಣ್ಯಕ್ಕೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಹಾಗೆಯೇ ಅರಣ್ಯಕ್ಕೆ ಬೆಂಕಿ ಹಾಕಿದ ಪ್ರಕರಣದ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದಾರೆ. 

ಹೆಚ್ಚುತ್ತಿದೆ ದುಷ್ಕೃತ್ಯ: ಪಶ್ಚಿಮಘಟ್ಟದ ಅರಣ್ಯ ಪ್ರದೇಶದಲ್ಲಿ ರಬ್ಬರ್, ಶುಂಠಿ, ಅಡಿಕೆ ತೋಟ ಸೇರಿದಂತೆ ಕೃಷಿ ಉದ್ದೇಶಕ್ಕಾಗಿ ಬೇಸಿಗೆಯ ವೇಳೆ ಅರಣ್ಯಕ್ಕೆ ಬೆಂಕಿ ಹಚ್ಚಿ ತದನಂತರ ಭೂಮಿ ಅತಿಕ್ರಮಿಸುವುದು ಸರ್ವೇಸಾಮಾನ್ಯ ಎಂಬಂತಾಗಿ ಪರಿಣಮಿಸಿದೆ. ಇದರಿಂದ ಭಾರೀ ಪ್ರಮಾಣದ ಅರಣ್ಯ ಕಣ್ಮರೆಯಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸುತ್ತಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News