ಶಿವಮೊಗ್ಗ: ಕುವೆಂಪು ವಿವಿಯಲ್ಲಿ ಭ್ರಷ್ಟಾಚಾರ ಆರೋಪ; ಉನ್ನತ ತನಿಖೆಗೆ ಆಗ್ರಹಿಸಿ ಎನ್‍ಎಸ್‍ಯುಐ ಪ್ರತಿಭಟನೆ

Update: 2018-03-12 16:44 GMT

ಶಿವಮೊಗ್ಗ, ಮಾ. 13: ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಎನ್‍ಎಸ್‍ಯುಐ ಸಂಘಟನೆಯ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಪತ್ರ ಅರ್ಪಿಸಿದರು. 

ವಿವಿಯಲ್ಲಿ ಸರ್ಕಾರದ ನಿಯಾಮಾವಳಿಗಳ ಸ್ಪಷ್ಟ ಉಲ್ಲಂಘನೆ ಮಾಡಲಾಗುತ್ತಿದೆ. ಬೇಕಾಬಿಟ್ಟಿಯಾಗಿ ಹಣದ ವ್ಯವಹಾರ ನಡೆಸಲಾಗುತ್ತಿದೆ. ವಿವಿಯ ಯಾವುದೇ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ನಗದು ರೂಪದಲ್ಲಿ ವ್ಯವಹಾರ ನಡೆಸುವುದಾಗಲಿ, ಪಾವತಿ ಮಾಡುವಂತಿಲ್ಲ. ಆದರೆ 2014-15 ನೇ ಸಾಲಿನಲ್ಲಿ ಸುಮಾರು 7 ಕೋಟಿ ರೂ. ಗಳನ್ನು ನಗದು ರೂಪದಲ್ಲಿ ವ್ಯವಹರಿಸಲಾಗಿದೆ. ವಿವಿಯಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಇದು ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ಈ ಕುರಿತಂತೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ 2016 ರಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿದೆ. ಈ ಬಗ್ಗೆ ವಿವಿಯ ಹಣಕಾಸು ಅಧಿಕಾರಿಗೆ ನೋಟೀಸ್ ಜಾರಿಗೊಳಿಸಿ, ವಿವರಣೆ ಕೋರಿದೆ. ವಿವಿಯ ಪ್ರತಿ ಹಂತದ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಕೆಟಿಪಿಪಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಮಾಡಲಾಗುತ್ತಿದ್ದು, ಹೇಳುವವರು ಕೇಳುವವರ್ಯಾರು ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕುವೆಂಪು ವಿವಿಯ ಆಡಳಿತದ ಕಾರ್ಯವೈಖರಿಯು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಪನಂಬಿಕೆ ಸೃಷ್ಟಿಸುತ್ತಿದೆ. ತತ್‍ಕ್ಷಣವೇ ಉನ್ನತ ಶಿಕ್ಷಣ ಇಲಾಖೆಯು, ವಿವಿಯಲ್ಲಿ ನಡೆದಿರುವ ಅಕ್ರಮ-ಅವ್ಯವಹಾರಗಳ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಭ್ರಷ್ಟಾಚಾರಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು. ಆಡಳಿತದಲ್ಲಿ ಪಾರದರ್ಶಕತೆ ತರಬೇಕು. ಅವ್ಯವಹಾರ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿವಿಯ ವಿರುದ್ದ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು. ವಿವಿ ಬಂದ್‍ಗೆ ಕರೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆಗೆ ಎನ್‍ಎಸ್‍ಯುಐ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಪ್ರಮುಖರಾದ ಸಿ.ಜೆ.ಮಧುಸೂಧನ್, ಕೆ. ಚೇತನ್, ಜಿಲ್ಲಾಧ್ಯಕ್ಷ ಎಸ್.ಹೆಚ್.ಬಾಲಾಜಿ, ಮುಖಂಡರಾದ ವಿಕಾಸ್ ನಾಡಿಗ್, ವಿಜಯ್, ಪ್ರಮೋದ್ ಸೇರಿದಂತೆ ಮೊದಲಾದವರಿದ್ದರು. 

ಪರೀಕ್ಷಾ ಶುಲ್ಕ ಇಳಿಕೆಗೆ ಆಗ್ರಹ
ಕುವೆಂಪು ವಿವಿಯಲ್ಲಿ ಒಂದೆಡೆ ಮಿತಿಮೀರಿದ ಭ್ರಷ್ಟಾಚಾರ ನಡೆಯುತ್ತಿದ್ದರೆ, ಮತ್ತೊಂದೆಡೆ ಪರೀಕ್ಷಾ ಶುಲ್ಕದಲ್ಲಿ ಯದ್ವಾತದ್ವಾ ಹೆಚ್ಚಳ ಮಾಡಲಾಗುತ್ತಿದೆ. ವಿದ್ಯಾರ್ಥಿ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ. ಎಲ್ಲ ವಿಶ್ವ ವಿದ್ಯಾಲಯಗಳಲ್ಲಿಯೂ ಪರೀಕ್ಷಾ ಶುಲ್ಕ ಮತ್ತು ಪ್ರವೇಶ ಶುಲ್ಕದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಆದರೆ ಕುವೆಂಪು ವಿವಿಯಲ್ಲಿ ಪರೀಕ್ಷಾ ಶುಲ್ಕವನ್ನು ಪ್ರತಿ ವರ್ಷ ಶೇ. 10 ರಷ್ಟು ಹೆಚ್ಚಳ ಮಾಡುತ್ತಿದೆ. ಜೊತೆಗೆ ಘಟಿಕೋತ್ಸವ ಶುಲ್ಕ, ಬ್ಲೂ ಬುಕ್, ಪಿಪಿಸಿ ಸೇರಿದಂತೆ ನಾನಾ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಎಸ್‍ಎಸ್‍ಯುಐ ಕಾರ್ಯಕರ್ತರು ಆರೋಪಿಸಿದ್ದಾರೆ. 

ಈ ಹಿಂದೆ ಕೇವಲ 250 ರೂ.ಗಳಿದ್ದ ಘಟಿಕೋತ್ಸವ ಶುಲ್ಕ ಪ್ರಸ್ತುತ 630 ಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ ಅಂಕಪಟ್ಟಿ ಶುಲ್ಕ, ಪದವಿ ಪ್ರವೇಶ ಪಡೆಯಲು ನಿಗದಿ ಮಾಡಿರುವ ಶುಲ್ಕ, ಪರೀಕ್ಷಾ ಶುಲ್ಕಗಳಲ್ಲಿಯೂ ತೀವ್ರ ಹೆಚ್ಚಳ ಮಾಡಲಾಗಿದೆ. ತಕ್ಷಣವೇ ಶುಲ್ಕ ಇಳಿಕೆಗೆ ಕ್ರಮಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News