ಶಿವಮೊಗ್ಗ: ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ

Update: 2018-03-12 16:51 GMT

ಶಿವಮೊಗ್ಗ, ಮಾ.12: ಭದ್ರಾ ಜಲಾಯಶದಿಂದ ಗದಗ ಜಿಲ್ಲೆಯ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

ವಿವಿಧ ಜಿಲ್ಲೆಗಳ ಜಿಲ್ಲಾಡಳಿತದ ಕೋರಿಕೆಯಂತೆ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಸುವ ಉದ್ದೇಶಕ್ಕಾಗಿ ನದಿಗೆ ನೀರು ಹರಿಸುವ ಕುರಿತಾಗಿ ತೀರ್ಮಾನ ಕೈಗೊಳ್ಳಲು ಸೋಮವಾರ ಕರೆಯಲಾಗಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಭದ್ರಾ ಕಾಡಾ ಅಧ್ಯಕ್ಷ ಸುಂದರೇಶ್ ಅವರು ಮಾತನಾಡಿ, ಸಿಂಗಟಾಲೂರು ಕುಡಿಯುವ ನೀರಿನ ಯೋಜನೆಯನ್ನು ಮಾರ್ಚ್ 14ರಂದು ಉದ್ಘಾಟಿಸಲು ಮುಖ್ಯಮಂತ್ರಿ ಅವರು ಗದಗ ಜಿಲ್ಲೆಗೆ ಆಗಮಿಸಲಿದ್ದು, ಅಲ್ಲಿನ ಕುಡಿಯುವ ನೀರಿನ ಅಗತ್ಯತೆಯನ್ನು ಮನಗಂಡು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಾರ್ಚ್ 11ರ 10ಗಂಟೆಯಿಂದ ಭದ್ರಾ ಜಲಾಶಯದ ನದಿಪಾತ್ರಕ್ಕೆ 2ಟಿಎಂಸಿ ನೀರನ್ನು ಬಿಡುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶ ಮಾಡಿದ್ದಾರೆ. ಈ ಕುರಿತು ನಿರ್ಣಯ ಕೈಗೊಳ್ಳಲು ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.

2017ನೇ ಸಾಲಿನಲ್ಲಿ ಜೂನ್ 1ರಿಂದ ಮಾರ್ಚ್ 11ರವರೆಗೆ 2.325 ಟಿಎಂಸಿ ನೀರನ್ನು ಹರಿಸಲಾಗಿದೆ. ಒಟ್ಟು 125ದಿನಗಳ ಕಾಲ ನೀರು ಬಿಡಲು ನಿರ್ಧರಿಸಿದಂತೆ ಈವರೆಗೆ 66ದಿನಗಳ ಕಾಲ ನೀರು ಬಿಡಲಾಗಿದೆ. ಇನ್ನೂ 54 ದಿನಗಳ ಕಾಲ ನೀರು ಹರಿಸಬೇಕಾಗಿದ್ದು, 1.1ಟಿಎಂಸಿ ನೀರು ಬಿಡಬೇಕಾಗಿದೆ. ಈ ನೀರನ್ನು ಹರಿಸಲು ಮೇ ಕೊನೆಯವರೆಗೆ ಸಮಯವಕಾಶವಿದೆ. ಆದರೆ ಸರ್ಕಾರ ಈಗ ಹೆಚ್ಚುವರಿಯಾಗಿ 2 ಟಿಎಂಸಿ ನೀರು ಬಿಡುಗಡೆ ಮಾಡಲು ಆದೇಶಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬಿಡಲು ಸಾಧ್ಯವಿಲ್ಲ. ಸರ್ಕಾರದ ಆದೇಶದ ಸಾಧಕ ಬಾಧಕಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರು ಲಭ್ಯವಿಲ್ಲದ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಕೋರಿರುವ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಶಾಸಕರಾದ ಎಂ.ಜೆ.ಅಪ್ಪಾಜಿ, ಶಿವಶಂಕರ್, ಶ್ರೀನಿವಾಸ್, ರೈತ ನಾಯಕರು ಹಾಗೂ ಪ್ರತಿನಿಧಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News