ಚಾಮರಾಜನಗರ: ತಾಳವಾಡಿ ಕನ್ನಡಿಗರಿಂದ ನಿರ್ದೇಶಕ ಕೆ.ಎಸ್. ಭಗವಾನ್ ಗೆ ಸನ್ಮಾನ
ಚಾಮರಾಜನಗರ, ಮಾ.12: ಡಾ. ರಾಜ್‍ಕುಮಾರ್ ಅವರು ನಟಿಸಿದ ಚಿತ್ರಗಳನ್ನು ನಿರ್ದೇಶನ ಮಾಡಿರುವುದು ನನ್ನ ಭಾಗ್ಯ. ಅವರ ನಟನೆ ಮತ್ತು ಅಭಿಯಾನವನ್ನು ನೋಡಿದರೆ ಈಗಲೂ ಸಹ ನನ್ನ ಮೈ ರೋಮಾಂಚನವಾಗುತ್ತದೆ. ಇಂಥ ಅದ್ಬುತ ಕಲಾವಿದರನ್ನು ಕೊಟ್ಟ ಗಡಿನಾಡ ಕನ್ನಡಿಗರ ಬಗ್ಗೆ ಹೆಮ್ಮೆ ಎನ್ನಿಸುತ್ತದೆ ಎಂದು ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತಿ ನಿರ್ದೇಶಕ ಕೆ.ಎಸ್. ಭಗವಾನ್ ತಿಳಿಸಿದರು.
ಬೆಂಗಳೂರಿನ ಅವರ ನಿವಾಸದಲ್ಲಿ ತಾಳವಾಡಿಯ ಗಡಿನಾಡ ಕನ್ನಡಿಗರು ಹಾಗೂ ಡಾ. ರಾಜ್‍ಕುಮಾರ್ ಅಭಿಮಾನಿಗಳು 84 ವಸಂತಗಳನ್ನು ಪೂರೈಸಿದ ಭಗವಾನ್ ಅವರಿಗೆ 'ಕನ್ನಡ ಚಿತ್ರರಂಗ ಭೀಷ್ಮಾ' ಎಂಬ ಬಿರುದು ನೀಡಿ ಪೇಟಾ ತೊಡಿಸಿ, ಶಾಲು, ಹಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಡಾ. ರಾಜ್‍ಕುಮಾರ್ ಅವರ ಚಿತ್ರಗಳನ್ನು ನಿರ್ದೇಶನ ಮಾಡುವುದು ಎಂದರೆ ನಮಗೆಲ್ಲ ಸಂತೋಷವಾಗುತ್ತಿತ್ತು. ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳನ್ನು ನಟನೆ ಮಾಡುತ್ತಿದ್ದ ಡಾ. ರಾಜ್ ಅವರ 1966ರಲ್ಲಿ ಮೊಟ್ಟ ಮೊದಲ ಜೇಮ್ಸ್ ಬಾಂಡ್ ಚಿತ್ರವಾದ ಜೇಡರ ಬಲೆಯನ್ನು ನಿರ್ದೇಶನ ಮಾಡಿದೆವು. ಇದರು ಕರ್ನಾಟಕ ಚಿತ್ರರಂಗದಲ್ಲಿಯೇ ಐತಿಹಾಸಿಕ ದಾಖಲೆಯನ್ನು ಮಾಡಿತ್ತು. ಇಂಥ ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿದ್ದೇನೆ. ಅವರೊಂದಿಗೆ ಒಡನಾಡ ನನಗೆ ಇನ್ನೂ ಸಹ ಪ್ರಸಿದ್ದಿಯನ್ನು ತಂದು ಕೊಟ್ಟಿದೆ. ದೊರೆ ಭಗವಾನ್ ಎಂಬ ಹೆಸರಿನಲ್ಲಿ ಚಿತ್ರ ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿದ್ದ ಆ ಕಾಲವನ್ನು ನೆನಪು ಮಾಡಿಕೊಂಡರು.
ಡಾ. ರಾಜ್‍ಕುಮಾರ್ ಕನ್ನಡ ಚಿತ್ರರಂಗದ ಶಕ್ತಿ. ಇಂಥ ಮಹಾನ್ ನಟರ ಸ್ನೇಹ ಮತ್ತು ಚಿತ್ರ ನಿರ್ಮಾಣ ಅವಕಾಶ ಸಿಕ್ಕಿರುವುದು ನಮ್ಮ ಪೂರ್ವಜನ್ಮ ಪುಣ್ಯ. ಕಸ್ತೂರಿ ನಿವಾಸಿ, ಎರಡು ಕನಸು, ಜೀವನ ಚೈತ್ರ, ಹೊಸಬೆಳಕು, ಗೋವಾದಲ್ಲಿ ಸಿಎಡಿ 999 ಇಂಥ ಚಿತ್ರಗಳನ್ನು ಅಭಿಯಾನದ ಮಾಡಿರುವವ ಬಗ್ಗೆ ಹೆಮ್ಮ ಇದೆ. ನನಗೆ ದೊರೆತ ಎಲ್ಲ ಪ್ರಶಸ್ತಿಗಳೆಲ್ಲವು ರಾಜ್‍ಕುಮಾರ್ ಅವರಿಗೆ ಸಲ್ಲಿಬೇಕು. ಅವರ ಕುಟುಂಬದ ಬಗ್ಗೆ, ಕನ್ನಡಿಗರ ಬಗ್ಗೆ ಹೆಚ್ಚು ಅಭಿಮಾನ ಇದೆ. ರಾಜ್‍ರೊಂದಿಗೆ ದೊಡ್ಡ ಗಾಜನೂರಿಗೆ ಬಂದಿದ್ದ ನೆನಪು ಇನ್ನು ಸಹ ನೆನಪಿನಲ್ಲಿದೆ ಎಂದು ಮೆಲಕು ಹಾಕಿದರು.
ಭಗವಾನ್ ಅವರಿಗೆ ಅಭಿನಂದಿಸುವ ಗಡಿ ಕನ್ನಡಿಗರ ನೇತೃತ್ವ ವಹಿಸಿದ್ದ ಗಡಿನಾಡ ಅಭಿವೃದ್ದಿ ಹೋರಾಟಗಾರ ಎಲ್. ಸುರೇಶ್ ಸನ್ಮಾನಿಸಿ ಮಾತನಾಡಿ, ಡಾ. ರಾಜ್‍ಕುಮಾರ್, ಸಹೋದರ ವರದರಾಜು, ದೊರೆಭಗವಾನ್, ಚಿ. ಉದಯಶಂಕರ್, ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಇವರೆಲ್ಲ ಸಂಗಮದಿಂದ ಮೂಡಿ ಬಂದ ಕನ್ನಡ ಚಿತ್ರಗಳು ಸೂರ್ಯ ಚಂದ್ರ ಇರುವ ತನಕವು ಮರೆಯಲು ಸಾಧ್ಯವಾಗದ ಚಿತ್ರಗಳು ಎಂದು ತಿಳಿಸಿದರು.
ಇತ್ತೀಚಿನ ನಿರ್ದೇಶಕರು ಹಾಗೂ ಯುವ ನಟರು ತತ್ವ ಸಿದ್ದಾಂತಗಳನ್ನು ಬಳಸಿಕೊಂಡರೆ, ಕನ್ನಡ ಭಾಷೆ, ಚಿತ್ರರಂಗ ಇನ್ನು ಹೆಚ್ಚಿನ ಉನ್ನತ ಮಟ್ಟಕ್ಕೆ ಹೋಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಡಿನಾಡ ಅಭಿವೃದ್ದಿ ಹೋರಾಟ ಎಲ್. ಸುರೇಶ್, ತಾಳವಾಡಿ ಬಸವಣ್ಣ, ಮಲ್ಲೇಶ್, ಮಲ್ಲಣ್ಣ, ನಂಜಪ್ಪ, ಮಹದೇವಸ್ವಾಮಿ, ಸುಬ್ರಮಣ್ಯ, ನಂದಿಶ್, ಶ್ರೀಕಂಠಸ್ವಾಮಿ, ರಶ್ಮಿ, ಭಾಗ್ಯ, ಮಂಗಳಮ್ಮ, ನಾಗರತ್ನಮ್ಮ, ಕಲಾ, ಮಂಜುಳಾ ಇತರರು ಇದ್ದರು.