×
Ad

ಚಾಮರಾಜನಗರ: ಜಿಲ್ಲೆಯ ಮೊದಲ ಇಂದಿರಾ ಕ್ಯಾಂಟೀನ್ ಉದ್ಘಾಟನೆ

Update: 2018-03-12 23:25 IST

ಚಾಮರಾಜನಗರ, ಮಾ.12 : ಕಡಿಮೆ ವೆಚ್ಚದಲ್ಲಿ ಜನರಿಗೆ ತಿಂಡಿ, ಊಟ ಪೂರೈಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಜಿಲ್ಲಾ ಕೇಂದ್ರದಲ್ಲಿ ಇಂದು ಆರಂಭವಾಗಿದೆ. 

ನಗರದ ಬಿ. ರಾಚಯ್ಯ ಜೋಡಿರಸ್ತೆಯ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಇಂದಿರಾ ಕ್ಯಾಂಟೀನನ್ನು ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉದ್ಘಾಟಿಸಿದರು.

ಇಂದಿರಾ ಕ್ಯಾಂಟೀನ್‍ಗೆ ಚಾಲನೆ ನೀಡಿದ ಬಳಿಕ ಉಸ್ತುವಾರಿ ಸಚಿವರಾದ ಗೀತ ಮಹದೇವಪ್ರಸಾದ್ ಅವರು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ನಗರಸಭೆ ಅಧ್ಯಕ್ಷರಾದ ಶೋಭ, ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ ಇತರೆ ಗಣ್ಯರು ಅಧಿಕಾರಿಗಳೊಂದಿಗೆ ಇಂದಿರಾ ಕ್ಯಾಂಟೀನ್‍ನಲ್ಲಿ ಉಪ್ಪಿಟ್ಟು, ಕೇಸರಿಬಾತ್ ಸವಿದರು.

ಬಳಿಕ ಮಾತನಾಡಿದ ಉಸ್ತುವಾರಿ ಸಚಿವರಾದ ಗೀತ ಮಹದೇವಪ್ರಸಾದ್, ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‍ಗೆ ಇಂದು ಚಾಲನೆ ಸಿಕ್ಕಿದೆ. ಜಿಲ್ಲೆಯ ಮೊಟ್ಟಮೊದಲ ಇಂದಿರಾ ಕ್ಯಾಂಟೀನ್ ನಗರದಲ್ಲಿ ಆರಂಭವಾಗಿದೆ. ಇದನ್ನು ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು.

ಇಂದಿರಾ ಕ್ಯಾಂಟೀನ್‍ನಲ್ಲಿ ಪ್ರತಿದಿನ ಬೆಳಿಗ್ಗೆ 500 ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ತಲಾ 500 ಊಟ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಅತಿ ಕಡಿಮೆ ದರದಲ್ಲಿ ಶುಚಿ ರುಚಿಯಾದ ಊಟ ಉಪಾಹಾರ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.
ಇಂದಿರಾ ಕ್ಯಾಂಟೀನ್‍ಗೆ 88 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಎಲ್ಲ ವ್ಯವಸ್ಥೆಗಳನ್ನು ಸಹ ಸಮರ್ಪಕವಾಗಿ  ನಿರ್ವಹಿಸಲಾಗುತ್ತದೆ. ಈ ಪ್ರಮುಖ ಯೋಜನೆ ಜಿಲ್ಲೆಯಲ್ಲೂ ಸಂಪೂರ್ಣವಾಗಿ ಯಶಸ್ವಿಯಾಗಲಿದೆ ಎಂದು ಉಸ್ತುವಾರಿ ಸಚಿವರು ಆಶಿಸಿದರು.

ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಹಾಗೂ ಚಾಮರಾಜನಗರಸಭೆ ಪ್ರಭಾರ ಆಯುಕ್ತರೂ ಆದ ಫೌಜಿಯಾ ತರನಂ, ನಗರಾಭಿವೃದ್ಧಿ ಕೋಶದ ನಿರ್ದೇಶಕರಾದ ಸುರೇಶ್, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News