ಮದ್ದೂರು: ಅಸಮರ್ಪಕ ವಿದ್ಯುತ್ ಪೂರೈಕೆ; ಸೆಸ್ಕ್ ಗೆ ಮುತ್ತಿಗೆ
ಮದ್ದೂರು, ಮಾ.12: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ತಾಲೂಕಿನ ಕ್ಯಾತಘಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮಸ್ಥರು ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕಚೇರಿಯ ಮುಂದೆ ಜಮಾಯಿಸಿದ ಗ್ರಾಮಸ್ಥರು, ಸಮರ್ಪಕವಾಗಿ ವಿದ್ಯುತ್ ನೀಡದ ನಿಗಮದ ಅಧಿಕಾರಿ ಸಿಬ್ಬಂದಿ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಶಿವನಂಜಯ್ಯ ಮಾತಾನಾಡಿ, ಸಮರ್ಪಕವಾದ ವಿದ್ಯುತ್ ನೀಡದ ಪರಿಣಾಮ ಪಂಪ್‍ಸೆಟ್ ಆಧಾರಿತ ಬೆಳೆಗಳು ಒಣಗುತ್ತಿದ್ದು, ಕುಡಿಯುವ ನೀರಿಗೂ ತೊಂದರೆಯಾಗಿದೆ. ಜತೆಗೆ ಟ್ರಾನ್ಸ್‍ಫಾರ್ಮರ್ ಸುಟ್ಟುಹೋಗಿದ್ದು ಅದನ್ನು ಬದಲಿಸಲು ಅರ್ಜಿ ನೀಡಿದ್ದರೂ ಸ್ಥಳೀಯ ಜೂನಿಯರ್ ಇಂಜಿನಿಯರ್ ಬಸವರಾಜು ನಿರ್ಲಕ್ಷ್ಯ, ಮಾಡಿದ್ದು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಎಇಇ ಮಂಜುನಾಥ್, ಶೀಘ್ರವಾಗಿ ವಿದ್ಯುತ್ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಲಿಂಗೇಗೌಡ, ಶಿವಮಾದೇಗೌಡ, ಕರಣ್, ನಾಗರಾಜು, ಸಿದ್ದರಾಜು, ಶಶಿಧರ್, ಬೋರೇಗೌಡ, ಗಿರೀಶ್, ರಾಜೇಶ್, ಮಲ್ಲೇಶ್ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.