ಸಾಹಿತಿಗಳ ಸಮಾಧಿಗಳ ದುಃಸ್ಥಿತಿ!

Update: 2018-03-12 18:36 GMT

ಮಾನ್ಯರೇ,

ಆಧುನಿಕ ಕನ್ನಡದ ಸುಪ್ರಸಿದ್ಧ ಕವಿ ಸಾಹಿತಿ ವಿಮರ್ಶಕ ರಾಷ್ಟ್ರಕವಿ ದಿ. ಜಿ. ಎಸ್. ಶಿವರುದ್ರಪ್ಪಹಾಗೂ ಕನ್ನಡ ನವ್ಯ ಸಾಹಿತ್ಯವನ್ನು ಬೆಳೆಸಿ ಕನ್ನಡ ಭಾಷೆಗೆ ಮತ್ತು ಕನ್ನಡ ಸಾಹಿತ್ಯಕ್ಕೆ ವಿಶ್ವ ಮಾನ್ಯತೆ ತಂದು ಕೊಟ್ಟ ನಾಡಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿದ್ದ ಜ್ಞಾನಪೀಠ ಪುರಸ್ಕೃತರಾದ ದಿ.ಯು. ಆರ್. ಅನಂತಮೂರ್ತಿಯವರು. ಈ ಇಬ್ಬರು ಮಹನೀಯರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಈ ಇಬ್ಬರು ಮೇರು ಸಾಹಿತಿಗಳು ವಿಧಿವಶರಾಗಿ ನಾಲ್ಕೈದು ವರ್ಷಗಳೇ ಗತಿಸಿವೆ. ಆದರೆ ಕಲಾ ಗ್ರಾಮದ ಅಕ್ಕ ಪಕ್ಕದಲ್ಲಿರುವ ಈ ಸಾಹಿತಿಗಳ ಸಮಾಧಿಗಳು ಮಾತ್ರ ಸಂಬಂಧ ಪಟ್ಟ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಸೂಕ್ತ ನಿರ್ವಹಣೆ ಇಲ್ಲದೆ ಸಮಾಧಿಗಳ ಮೇಲೆ ಮತ್ತು ಸುತ್ತಮುತ್ತಲು ಹುಲ್ಲು ಗಿಡಗಂಟಿಗಳು ಬೆಳೆದು ದುಃಸ್ಥಿತಿಗೆ ತಲುಪಿರುವುದು ನಿಜಕ್ಕೂ ದುರಂತದ ಸಂಗತಿ.

ಅಲ್ಲದೆ ಶಿಥಿಲಗೊಂಡಿರುವ ಈ ಸಮಾಧಿಗಳು ಪುಂಡ ಪೋಕರಿಗಳ ಮದ್ಯ ವ್ಯಸನಿಗಳ ತಾಣವಾಗಿದೆ. ಸಮಾಧಿಯ ಮೇಲೆ ಮತ್ತು ಸುತ್ತ ಮುತ್ತಲೂ ಮದ್ಯದ ಬಾಟಲಿಗಳು, ಸಿಗರೇಟ್ ತುಂಡುಗಳು ಕಾಣಿಸಿಕೊಳ್ಳುತ್ತಿವೆ. ಸಾಹಿತ್ಯದ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆ ಕ್ರಾಂತಿಯನ್ನುಂಟುಮಾಡಿದ ಹೆಮ್ಮ್ಮೆಯ ಸಾಹಿತಿಗಳ ಸಮಾಧಿಗಳು ಇಂದು ಇಂತಹ ಹೀನ ಸ್ಥಿತಿಗೆ ತಲುಪಿರುವುದು ವಿಪರ್ಯಾಸವೇ ಸರಿ. ಆದ್ದರಿಂದ ಇನ್ನಾದರೂ ಸಂಬಂಧ ಪಟ್ಟ ಇಲಾಖೆ ಈ ಇಬ್ಬರೂ ಸಾಹಿತಿಗಳ ಸಮಾಧಿಗಳನ್ನು ಅಭಿವೃದ್ಧಿ ಪಡಿಸಬೇಕು. ಅಲ್ಲದೆ ಹೆಚ್ಚೆಚ್ಚು ಪ್ರವಾಸಿಗರನ್ನು ಸೆಳೆಯುವ ಆಕರ್ಷಣೀಯ ಸ್ಮಾರಕ ಇಲ್ಲವೇ ಪ್ರೇಕ್ಷಣೀಯ ತಾಣವನ್ನಾಗಿ ಮಾಡುವ ಕುರಿತು ಸರಕಾರ ಗಂಭೀರವಾಗಿ ಚಿಂತಿಸಬೇಕಿದೆ.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News