ಬ್ಯಾಂಕ್, ಎಟಿಎಂಗಳಲ್ಲಿ ಹಣವಿಲ್ಲದೆ ಜನರ ಪರದಾಟ

Update: 2018-03-12 18:36 GMT

ಸ್ವಾತಂತ್ರಾ ನಂತರದ ಏಳು ದಶಕಗಳಲ್ಲಿ ಈ ದೇಶವನ್ನಾಳಿದ ಯಾವ ಸರಕಾರಗಳೂ ಕೊಡದಷ್ಟು ಚಿತ್ರಹಿಂಸೆಯನ್ನು ಮೋದಿ ಸರಕಾರ ಈಗ ಜನರಿಗೆ ನೀಡುತ್ತಿದೆ. ಜನಸಾಮಾನ್ಯರ ಅರಿವಿಗೆ ಬಾರದಂತೆ ಅವರಿಗೆ ಚಿತ್ರಹಿಂಸೆ ನೀಡುವ ಕಲೆ ಈ ಸರಕಾರಕ್ಕೆ ಸಿದ್ಧಿಸಿದೆ. ಆಧಾರ್ ಕಡ್ಡಾಯದ ಹೆಸರಿನಲ್ಲಿ ಈಗಾಗಲೇ ನಾನಾ ಕಿರುಕುಳಗಳನ್ನು ಜನರಿಗೆ ನೀಡಲಾಗುತ್ತಿದೆ. ಆಧಾರ್ ಪತ್ರ ಇಲ್ಲದಿದ್ದರೆ ಪಡಿತರ ಅಂಗಡಿಗಳಲ್ಲಿ ರೇಶನ್ ಕೂಡಾ ನೀಡದಂತೆ ಜನರಿಗೆ ತೊಂದರೆ ಕೊಡಲಾಗುತ್ತಿದೆ. ಈಗ ಅದರ ಜೊತೆಗೆ ಇನ್ನೊಂದು ಚಿತ್ರಹಿಂಸೆ ಸೇರಿದೆ. ಬ್ಯಾಂಕ್‌ನಲ್ಲಿ ನಮ್ಮ ಖಾತೆಯಲ್ಲಿರುವ ಹಣವನ್ನು ನಾವು ನಮ್ಮ ಖರ್ಚಿಗಾಗಿ ಬಳಸಿಕೊಳ್ಳಲು ಕೂಡಾ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೋಟು ಅಮಾನ್ಯೀಕರಣ ಮಾಡಿದ ನಂತರ ಜನಸಾಮಾನ್ಯರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ವಾಪಸ್ ಪಡೆಯಲು ಬ್ಯಾಂಕ್‌ಗಳಿಗೆ ಮತ್ತು ಎಟಿಎಂಗಳಿಗೆ ಓಡಾಡಿದರು. ಅನೇಕ ಕಡೆ ಬ್ಯಾಂಕ್‌ನಲ್ಲಿ ಹಣ ಪಡೆಯಲು ಸರದಿಯ ಸಾಲಿನಲ್ಲಿ ನಿಂತು ಕೆಲ ವಯೋವೃದ್ಧರು ಪ್ರಾಣವನ್ನೇ ಕಳೆದುಕೊಂಡರು. ಈಗ ಅದೇನೋ ಸರಿಹೋಯಿತು ಎನ್ನುವಷ್ಟರಲ್ಲಿ ಈಗ ಮತ್ತೆ ಬ್ಯಾಂಕ್‌ಗಳಲ್ಲಿ ಕಿರಿಕಿರಿ ಆರಂಭವಾಗಿದೆ.

ನಮ್ಮ ಹಣ ಪಡೆಯಲು ಎಟಿಎಂಗಳಿಗೆ ಹೋದರೆ ಹಣವಿಲ್ಲ ಎಂಬ ಬೋರ್ಡ್ ಬಹುತೇಕ ಎಟಿಎಂಗಳ ಮುಂದೆ ನೇತಾಡುತ್ತಿರುತ್ತದೆ. ಇದು ಕರ್ನಾಟಕದ ಒಂದೆರಡು ಊರುಗಳ ಕಥೆಯಲ್ಲ. ಇಡೀ ದೇಶದ ಸಾವಿರಾರು ನಗರ ಪಟ್ಟಣಗಳಲ್ಲಿ ಯಾವುದೇ ಎಟಿಎಂಗಳಲ್ಲಿ ಹಣವಿಲ್ಲ. ಹೀಗಾಗಿ ಜನರ ಪರದಾಟ ಅಸಹನೀಯವಾಗಿದೆ. ದೈನಂದಿನ ಮನೆ ಖರ್ಚಿಗಾಗಿ, ದಿನಸಿ ಕೊಳ್ಳುವುದಕ್ಕಾಗಿ, ಔಷಧಿ ಖರೀದಿಸುವುದಕ್ಕಾಗಿ, ಹಾಲು ಕೊಳ್ಳುವುದಕ್ಕಾಗಿ ಚಿಲ್ಲರೆ ಕಾಸಿಗಾಗಿ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದ ನಗರಗಳಿಗೆ ಕಾಯಿಲೆ ಪೀಡಿತರಾದ ತಮ್ಮ ಸಂಬಂಧಿಕರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದವರ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಬ್ಯಾಂಕ್ ಖಾತೆಯಲ್ಲಿ ಹೇಗೋ ಹಣವಿದೆ ಎಂದು ಎಟಿಎಂ ಕಾರ್ಡ್ ಇಟ್ಟುಕೊಂಡು ಹೋದವರು ರೋಗಿಯನ್ನು ಆಸ್ಪತ್ರೆಯಲ್ಲಿ ಮಲಗಿಸಿ ದಿನವಿಡೀ ಹಣಪಡೆಯಲು ಎಟಿಎಂಗಳಿಗೆ ಓಡಾಡುವುದೇ ನಿತ್ಯದ ಕೆಲಸವಾಗಿದೆ. ಇಡೀ ನಗರವನ್ನು ಸುತ್ತಿದರೂ ಯಾವುದೇ ಎಟಿಎಂನಲ್ಲಿ ಹಣ ಸಿಗುವುದಿಲ್ಲ. ಒಂದೆರಡು ಎಟಿಎಂಗಳಲ್ಲಿ ಹಣವಿದ್ದರೂ ಅಲ್ಲಿ ಉದ್ದನೆಯ ಸರದಿಯ ಸಾಲು ಇರುತ್ತದೆ. ಆ ಸಾಲಿನಲ್ಲಿ ನಿಂತು ತಮ್ಮ ಪಾಳಿ ಬರುವಷ್ಟರಲ್ಲಿ ಎಟಿಎಂನಲ್ಲಿರುವ ಹಣ ಖಾಲಿಯಾಗಿರುತ್ತದೆ. ಇದು ಬ್ಯಾಂಕ್‌ನಲ್ಲಿ ನಮ್ಮ ಖಾತೆಯಲ್ಲಿರುವ ಹಣವನ್ನು ನಾವು ಪಡೆಯಲು ಪರದಾಡಬೇಕಾದ ಸ್ಥಿತಿ.

ಈ ದೇಶದ ಆರ್ಥಿಕತೆಯ ಜೀವನಾಡಿಯಾದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಬಹುತೇಕ ರಾಷ್ಟ್ರೀಕೃತ ಬ್ಯಾಂಕ್‌ಗಳು ಕರ್ನಾಟಕ ಮೂಲದ ಬ್ಯಾಂಕ್‌ಗಳಾಗಿವೆ. ಆದರೆ, ಇವತ್ತು ಆ ಬ್ಯಾಂಕ್‌ಗಳ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಬ್ಯಾಂಕಿಂಗ್ ಕ್ಷೇತ್ರದ ಪರಿಸ್ಥಿತಿ ಈ ರೀತಿ ಕೆಟ್ಟು ಹೋದರೆ ದೇಶದ ಜನಸಾಮಾನ್ಯರ ಬದುಕು ನಿರ್ವಹಣೆ ಹೇಗೆ ಸಾಧ್ಯವಾಗುತ್ತದೆ. ಎಟಿಎಂಗಳಲ್ಲಿ ಹಣವಿಲ್ಲ ಎಂದು ನೇರವಾಗಿ ಬ್ಯಾಂಕ್ ಶಾಖೆಗಳಿಗೆ ಹೋದರೆ ಅಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಬ್ಯಾಂಕ್‌ನೊಳಗೆ ಪ್ರವೇಶ ಮಾಡಲಾಗದಷ್ಟು ನೂಕುನುಗ್ಗಲು ಅಲ್ಲಿ ಇರುತ್ತದೆ. ಬಹುತೇಕ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಬ್ಬಂದಿಯ ಕೊರತೆ ವಿಪರೀತವಾಗಿದೆ. ಹಣಕ್ಕಾಗಿ ಚೆಕ್ ಹಿಡಿದು ಸಾಲಿನಲ್ಲಿ ನಿಂತರೆ 2-3 ಗಂಟೆ ನಿಂತಲ್ಲೇ ನಿಲ್ಲಬೇಕಾಗುತ್ತದೆ. ಇಷ್ಟೆಲ್ಲ ನಿಂತರೂ ನಾವು ಕೇಳಿದಷ್ಟು ಹಣವನ್ನು ನಮ್ಮ ಬ್ಯಾಂಕ್ ಖಾತೆಯಿಂದ ಪಡೆಯಲು ಸಾಧ್ಯವಾಗುವುದಿಲ್ಲ. ಇಷ್ಟೇ ಹಣ ಪಡೆಯಬೇಕೆಂದು ಬ್ಯಾಂಕ್‌ನವರು ಷರತ್ತು ವಿಧಿಸುತ್ತಾರೆ. ಅನೇಕ ಬ್ಯಾಂಕ್‌ಗಳಲ್ಲಿ 2,000 ರೂ.ಗಿಂತ ಜಾಸ್ತಿ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಕಾರಣವೇನೆಂದು ಕೇಳಿದರೆ ನೋಟುಗಳ ಕೊರತೆ ಕಾರಣವೆಂದು ಬ್ಯಾಂಕ್ ಸಿಬ್ಬಂದಿ ಹೇಳುತ್ತಾರೆ. ಬಹುತೇಕ ಬ್ಯಾಂಕ್‌ಗಳಲ್ಲಿ 2 ಸಾವಿರ ಮತ್ತು 500 ರೂ. ಮುಖಬೆಲೆಯ ನೋಟುಗಳು ಸಿಗುತ್ತಿಲ್ಲ. ಅದರ ಬದಲಾಗಿ ಹರಿದುಹೋದ 100 ಮತ್ತು 10 ರೂ. ಮುಖಬೆಲೆಯ ನೋಟುಗಳನ್ನು ಕೊಡುತ್ತಾರೆ. ಸಿಕ್ಕಿದ್ದೇ ಅದೃಷ್ಟವೆಂದು ನಾವು ತೆಗೆದುಕೊಂಡು ಬರಬೇಕಾಗಿದೆ. ಇದೇಕೆ ಹೀಗೆ ಎಂದು ಕೇಳಿದರೆ ರಿಸರ್ವ್ ಬ್ಯಾಂಕ್ ಹೊಸ ನೋಟುಗಳನ್ನು ಮುದ್ರಿಸುತ್ತಿಲ್ಲ. ನಾವು ಕೇಳಿದ ನೋಟುಗಳ ಪೂರೈಕೆ ಮಾಡುತ್ತಿಲ್ಲ ಎಂದು ಅವರು ಹೇಳುತ್ತಾರೆ.

ನೋಟು ಅಮಾನ್ಯೀಕರಣದ ನಂತರ ಬ್ಯಾಂಕ್‌ಗೆ ವಾಪಸಾದ ನೋಟುಗಳ ಲೆಕ್ಕ ಪೂರ್ತಿಯಾಗಿಲ್ಲ. ಆ ಲೆಕ್ಕ ಪೂರ್ತಿಯಾದ ನಂತರ ರಿಸರ್ವ್‌ಬ್ಯಾಂಕ್ ಹೊಸ ನೋಟುಗಳನ್ನು ಮುದ್ರಿಸುತ್ತದೆ. ಅಲ್ಲಿಯವರೆಗೆ ಇದೇ ಪರಿಸ್ಥಿತಿ ಎಂದು ಬ್ಯಾಂಕ್ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇನ್ನು ಸಣ್ಣಪುಟ್ಟ ಊರುಗಳ ಪರಿಸ್ಥಿತಿ ಇನ್ನೂ ಚಿಂತಾಜನಕವಿದೆ. ಅಲ್ಲಿರುವ ಒಂದೆರಡು ಎಟಿಎಂಗಳು ಮುಚ್ಚಿಹೋಗಿ ಎರಡು ತಿಂಗಳು ಗತಿಸುತ್ತಾ ಬಂದಿದೆ. ಜನ ಹಣಕ್ಕಾಗಿ ಪರದಾಡುತ್ತಿದ್ದಾರೆ. ಜಾಗತೀಕರಣದ ಶಕೆ ಆರಂಭವಾದ ನಂತರ ಬ್ಯಾಂಕ್‌ಗಳಲ್ಲಿ ಭಾರೀ ಪ್ರಮಾಣದ ಹಣವನ್ನು ಉದ್ಯಮಪತಿಗಳು ಮತ್ತು ವ್ಯಾಪಾರಸ್ಥರು ಸಾಲದ ರೂಪದಲ್ಲಿ ಪಡೆಯತೊಡಗಿದರು. ಸಾವಿರಾರು ಕೋಟಿ ರೂ. ಸಾಲವನ್ನು ಪಡೆದು ಉದ್ಯಮಗಳ ಸ್ಥಾಪನೆಗೆ ಇಲ್ಲವೇ ಅಭಿವೃದ್ಧಿಗೆ ಬಳಸಿಕೊಂಡರು. ಈ ರೀತಿ ಸಾಲ ಪಡೆದವರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಲಿಲ್ಲ. ಹೀಗಾಗಿ ಸಾಲ ಮತ್ತು ಬಡ್ಡಿ ಬೆಳೆಯುತ್ತಾ ಹೋಯಿತು. ಸರಕಾರ ಅವರ ಒತ್ತಡಕ್ಕೆ ಮಣಿದು ಅವರ ಸಾಲ ಮನ್ನಾ ಮಾಡುತ್ತಾ ಬಂತು. ಹೀಗೆ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದ ಉದ್ಯಮಪತಿಗಳು ಕೊನೆಗೆ ಪಡೆದ ಸಾಲವನ್ನು ವಾಪಸ್ ಮಾಡದೆ ವಿದೇಶಕ್ಕೆ ಪಲಾಯನ ಮಾಡತೊಡಗಿದರು. ಇತ್ತೀಚೆಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಿಂದ 11 ಸಾವಿರ ಕೋಟಿ ರೂ. ಸಾಲ ಪಡೆದ ನೀರವ್ ಮೋದಿ ವಿದೇಶಕ್ಕೆ ಪರಾರಿಯಾದ. ಆತನಿಗಿಂತ ಮುಂಚೆ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ಟೋಪಿ ಹಾಕಿದ ವಿಜಯ ಮಲ್ಯ ಬ್ರಿಟನ್‌ಗೆ ಓಡಿಹೋದ. ಹೀಗೆ ಬ್ಯಾಂಕ್‌ಗಳು ದಿವಾಳಿಯಾಗಲು ಬ್ಯಾಂಕ್‌ನಲ್ಲಿ ಮತ್ತು ಬ್ಯಾಂಕ್‌ನಲ್ಲಿ ಹಣಕಾಸಿನ ಅಭಾವ ಉಂಟಾಗಲು ಉದ್ಯಮಪತಿಗಳು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡದಿರುವುದೇ ಮುಖ್ಯಕಾರಣವಾಗಿದೆ. ಬಡವರ ಐದು ಸಾವಿರ ರೂ. ಸಾಲಕ್ಕೆ ಮನೆ ಜಪ್ತಿಗೇ ಬರುವ ಬ್ಯಾಂಕ್ ಅಧಿಕಾರಿಗಳು ಸಾವಿರಾರು ಕೋಟಿ ರೂ. ವಂಚನೆ ಮಾಡಿದ ಉದ್ಯಮಪತಿಗಳನ್ನು ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದ್ದೆಲ್ಲದರ ಪರಿಣಾಮವಾಗಿ ಜನಸಾಮಾನ್ಯರು ಇಂದು ತೊಂದರೆ ಅನುಭವಿಸಬೇಕಾಗಿ ಬಂದಿದೆ. ಎಟಿಎಂಗಳಲ್ಲಿ ಹಣವಿಲ್ಲದೆ ಜನ ಪರದಾಡುತ್ತಿದ್ದಾರೆ. ಸರಕಾರ ಇನ್ನಾದರೂ ಜನರ ತೊಂದರೆಗೆ ಸ್ಪಂದಿಸಿ ತಕ್ಷಣ ನೋಟು ಮುದ್ರಣ ಕಾರ್ಯ ಆರಂಭಿಸಿ ಬ್ಯಾಂಕ್‌ಗಳಿಗೆ ಮತ್ತು ಎಟಿಎಂಗಳಿಗೆ ನೋಟುಗಳನ್ನು ಪೂರೈಕೆ ಮಾಡುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News