ಶಿವಮೊಗ್ಗ ನಗರ ಕ್ಷೇತ್ರ: ಬಿಜೆಪಿ ಟಿಕೆಟ್ ಕೋರಿ ವರಿಷ್ಠರಿಗೆ ಮನವಿ ಅರ್ಪಿಸಿದ ಎಸ್.ಎಸ್.ಜ್ಯೋತಿಪ್ರಕಾಶ್

Update: 2018-03-13 16:24 GMT

ಶಿವಮೊಗ್ಗ, ಮಾ. 13: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸುವ ಕುರಿತಂತೆ, ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಬಣಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಕೆ.ಎಸ್.ಈಶ್ವರಪ್ಪ ಹಾಗೂ ಎಸ್.ರುದ್ರೇಗೌಡ ನಡುವೆ ಟಿಕೆಟ್‍ಗೆ ತೀವ್ರ ಹಣಾಹಣಿ ಕಂಡುಬರುತ್ತಿದ್ದು, ಕೆ.ಎಸ್.ಈಶ್ವರಪ್ಪ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗುತ್ತಿವೆ. 

ಈ ನಡುವೆ ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ, ಸ್ಥಳೀಯ ವೀರಶೈವ - ಲಿಂಗಾಯತ ಸಮುದಾಯದ ನಾಯಕ, ಬಿ.ಎಸ್.ವೈ. ಆಪ್ತ ಎಸ್.ಎಸ್.ಜ್ಯೋತಿಪ್ರಕಾಶ್‍ರವರು ಕೂಡ ಟಿಕೆಟ್ ರೇಸ್‍ಗೆ ಧುಮುಕಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ಪ್ರಮುಖರನ್ನು ಭೇಟಿಯಾಗಿ ಮನವಿ ಕೂಡ ಅರ್ಪಿಸಿದ್ದಾರೆ. 

ಎಸ್.ಎಸ್.ಜ್ಯೋತಿಪ್ರಕಾಶ್‍ರವರು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿರುವುದು ಸ್ಥಳೀಯ ಬಿಜೆಪಿ ಪಾಳೇಯದಲ್ಲಿ ವಿಭಿನ್ನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಪ್ರಸ್ತುತ ಟಿಕೆಟ್ ಆಕಾಂಕ್ಷಿಯಾಗಿರುವ ಪಕ್ಷದ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಹಾಗೂ ಎಸ್.ಎಸ್.ಜ್ಯೋತಿಪ್ರಕಾಶ್ ಇಬ್ಬರೂ ಬಿ.ಎಸ್.ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಅದರಲ್ಲಿಯೂ ಎಸ್.ಎಸ್.ಜ್ಯೋತಿಪ್ರಕಾಶ್‍ರವರು ಕಳೆದ ಹಲವು ದಶಕಗಳಿಂದ ಬಿ.ಎಸ್.ವೈ.ರವರ ಹತ್ತಿರದ ಒಡನಾಟ ಹೊಂದಿದವರಾಗಿದ್ದಾರೆ. 

ಗೆಲುವು ಖಚಿತ: ಟಿಕೆಟ್ ಕೋರಿಮನವಿ ಸಲ್ಲಿಸಿರುವ ವಿಷಯವನ್ನು ಎಸ್.ಎಸ್.ಜ್ಯೋತಿಪ್ರಕಾಶ್ ಖಚಿತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ತಾನು ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್  ಆಕಾಂಕ್ಷಿಯಾಗಿದ್ದೇನೆ. ಈ ಬಗ್ಗೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮನವಿ ಅರ್ಪಿಸಿದ್ದೇನೆ. ಸರ್ವೇ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸುವುದಾಗಿ ವರಿಷ್ಠರು ತಿಳಿಸಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ. 

'ಕಳೆದ ಹಲವು ದಶಕಗಳಿಂದ ತಾವು ರಾಜಕೀಯ ಕ್ಷೇತ್ರದಲ್ಲಿದ್ದೇನೆ. ಹಾಗೆಯೇ ಹಲವು ಸಮಾಜಮುಖಿ ಸಂಘಟನೆಗಳ ಜೊತೆಯೂ ಗುರುತಿಸಿಕೊಂಡು ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಪ್ರಸ್ತುತ ಎಪಿಎಂಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ. ಪಕ್ಷ ತಮಗೆ ಟಿಕೆಟ್ ನೀಡಿದರೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ತಮ್ಮ ಗೆಲುವು ನಿಶ್ಚಿತವಾಗಿದೆ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ದವಾಗಿರುತ್ತೆನೆ' ಎಂದು ತಿಳಿಸಿದ್ದಾರೆ. 

ಯಾರಿಗೆ?: ಇತ್ತೀಚೆಗೆ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್‍ಗೆ ಸಂಬಂಧಿಸಿದಂತೆ ಆ ಪಕ್ಷದಲ್ಲಿ ಇತ್ತೀಚೆಗೆ, ದೊಡ್ಡ ಹೈಡ್ರಾಮಾವೇ ನಡೆದಿತ್ತು. ನಗರದ ಬಿ.ಎಸ್.ವೈ. ನಿವಾಸದಲ್ಲಿ ನಡೆದ ಸಭೆಯಲ್ಲಿ ಕೆ.ಎಸ್.ಇ.ಗೆ ಟಿಕೆಟ್ ನೀಡದೆ, ಎಸ್.ರುದ್ರೇಗೌಡರನ್ನೇ ಅಖಾಡಕ್ಕಿಳಿಸಬೇಕೆಂಬ ಒತ್ತಾಯವನ್ನು ಕೆಲ ನಾಯಕರು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕೆ.ಎಸ್.ಇ. ಬೆಂಬಲಿಗರು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ಕೂಡ ನಡೆಸಿದ್ದರು. 

ಈ ವಿಷಯವು ಬಿ.ಎಸ್.ವೈ. ಹಾಗೂ ಕೆ.ಎಸ್.ಇ. ನಡುವೆ ಮತ್ತೊಂದು ಸುತ್ತಿನ ಕಾದಾಟಕ್ಕೂ ವೇದಿಕೆಯಾಗುವ ಲಕ್ಷಣಗಳು ಗೋಚರವಾಗಿದ್ದವು. ಮತ್ತೊಂದೆಡೆ ಆ ಪಕ್ಷದ ಕೇಂದ್ರ ವರಿಷ್ಠರು ಕೆ.ಎಸ್.ಇ. ಜೊತೆ ಸಮಾಲೋಚನೆ ನಡೆಸಿ, ಅವರನ್ನು ಸಮಾಧಾನಗೊಳಿಸುವ ಕೆಲಸ ಮಾಡಿದ್ದರು. ಟಿಕೆಟ್ ನೀಡುವ ಭರವಸೆ ನೀಡಿದ್ದರು ಎಂಬ ಮಾತು ಕೇಳಿಬಂದಿತ್ತು. ಇದೆಲ್ಲದರ ನಡುವೆಯೇ ಬಿ.ಎಸ್.ವೈ.ರವರ ಮತ್ತೋರ್ವ ಬೆಂಬಲಿಗ ಎಸ್.ಎಸ್.ಜ್ಯೋತಿಪ್ರಕಾಶ್ ಟಿಕೆಟ್ ರೇಸ್‍ಗಿಳಿದಿರುವುದು ಸಾಕಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News