×
Ad

ಮಡಿಕೇರಿ: ಗಣಿಗಾರಿಕೆಗೆ ಅವಕಾಶ ನೀಡಲು ಆಗ್ರಹಿಸಿ ಭೋವಿ ಸಂಘಟನೆಯಿಂದ ಧರಣಿ

Update: 2018-03-13 23:23 IST

ಮಡಿಕೇರಿ, ಮಾ.13: ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿಯಲ್ಲಿ ಭೋವಿ ಜನಾಂಗಕ್ಕೆ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಕ್ರಾಂತಿ ಸಂಘಟನೆಯ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿತು. 

ಭೋವಿ ಜನಾಂಗಕ್ಕೆ ಗಣಿಗಾರಿಕೆಯಲ್ಲಿ ಶೇ.25 ರಷ್ಟು ಅವಕಾಶ ನೀಡಬೇಕೆನ್ನುವ ನಿಯಮವಿದ್ದರೂ ಕೊಡಗು ಜಿಲ್ಲೆಯಲ್ಲಿ ಇದು ಪಾಲನೆಯಾಗುತ್ತಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು. ಭೋವಿ ಜನಾಂಗ ನಡೆಸುತ್ತಿರುವ ಗೊಂದಿಬಸವನಹಳ್ಳಿಯ ಗಣಿಗಾರಿಕೆಗೆ ಮಾತ್ರ ಅರಣ್ಯ ಇಲಾಖೆ ತಡೆಯೊಡ್ಡುತ್ತಿದ್ದು, ರಾಜ್ಯದ ಇತರ ಭಾಗಗಳಲ್ಲಿ ಅರಣ್ಯ ವ್ಯಾಪ್ತಿಯಲ್ಲೆ ಗಣಿಗಾರಿಕೆ ನಡೆಯುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಭೋವಿ ಜನಾಂಗಕ್ಕೆ ಮಾತ್ರ ಯಾಕೆ ಈ ರೀತಿಯ ಅಡೆತಡೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷರಾದ ಡಿ.ಸುಜಿತ್ ಪ್ರಶ್ನಿಸಿದರು.

ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದ ಅವರು, ಗಣಿಗಾರಿಕೆಗೆ ಅವಕಾಶ ನೀಡದೆ ಇರುವುದರಿಂದ ಭೋವಿ ಜನಾಂಗ ಉದ್ಯೋಗದಿಂದ ವಂಚಿತರಾಗಿ ಜಿಲ್ಲೆಯಿಂದ ವಲಸೆ ಹೋಗುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಈ ಹಿಂದೆ ಜಿಲ್ಲೆಯಲ್ಲಿ ಸುಮಾರು 20 ಸಾವಿರದಷ್ಟು ಜನಸಂಖ್ಯೆ ಹೊಂದಿದ್ದ ಭೋವಿ ಜನಾಂಗ ಇಂದು 7 ರಿಂದ 8 ಸಾವಿರಕ್ಕೆ ಕುಸಿದಿದೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಗೊಂದಿಬಸವನಹಳ್ಳಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದು ಸುಜಿತ್ ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಹಾಗೂ ರಸ್ತೆ ತಡೆ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಸುಜಿತ್ ಎಚ್ಚರಿಕೆ ನೀಡಿದರು. 

ಜಾತಿ ದೃಢೀಕರಣ ಪತ್ರದಲ್ಲಿ ಭೋವಿ ಬದಲಿಗೆ ನಾಯಕ ಎಂದು ನಮೂದಿಸುತ್ತಿರುವುದರಿಂದ ಭೋವಿ ನಿಗಮದ ಮೂಲಕ ಬಿಡುಗಡೆಯಾಗುತ್ತಿರುವ ಅನುದಾನ ಸದ್ಬಳಕೆಯಾಗುತ್ತಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಬೇಡಿಕೆಗಳು 
ಭೋವಿ ಸಮುದಾಯ ಭವನಕ್ಕೆ 2 ಏಕರೆ ಭೂಮಿ, 1 ಕೊಟಿ ರೂ. ಅನುದಾನ, ಸ್ಮಶಾನಕ್ಕೆ ಜಾಗ ಮಂಜೂರು ಮಾಡಬೇಕು, ಭೋವಿ ನಿಗಮದಿಂದ ಅನುದಾನ ನೀಡಬೇಕು, ಜಾತಿ ದೃಢೀಕರಣ ಪತ್ರದಲ್ಲಿ ಭೋವಿ ಎಂದು ನಮೂದಿಸಬೇಕು, ಗೊಂದಿಬಸವನಹಳ್ಳಿಯ ಭೋವಿ ಜನಾಂಗದ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು, ಭೋವಿ ಜನಾಂಗದ ಮಂದಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ತಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘಟನೆಯ ಗೌರವ ಅಧ್ಯಕ್ಷರಾದ ಆರ್.ಸಿ.ವಿಜಯ, ಸೋಮವಾರಪೇಟೆ ಉಪಾಧ್ಯಕ್ಷರಾದ ಎಂ.ಕೆ.ಸುಬ್ರಮಣಿ, ಸಂಘಟನಾ ಕಾರ್ಯದರ್ಶಿ ಶಿವ ಕುಮಾರ್, ಪ್ರಧಾನ ಕಾರ್ಯದರ್ಶಿ ವಿನಾಯಕ, ಸಂಚಾಲಕ ಕಾರ್ತಿಕ್ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಪ್ರತಿಭಟನಾಕಾರರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News