ಮಡಿಕೇರಿ: ಜನರಲ್ ತಿಮ್ಮಯ್ಯ ಸ್ಮಾರಕ ಭವನ; ಮಾ.20 ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ

Update: 2018-03-13 17:56 GMT

ಮಡಿಕೇರಿ, ಮಾ.13: ನಗರದ ಸನ್ನಿಸೈಡ್‍ನಲ್ಲಿ ನಿರ್ಮಾಣಗೊಳ್ಳುತ್ತಿರುವ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಭೇಟಿ ನೀಡಿ ಪರಿಶೀಲಿಸಿದರು. ಮಾ.31 ರಂದು ವೀರಸೇನಾನಿಯ ಜನ್ಮ ದಿನಾಚರಣೆ ಇರುವ ಕಾರಣ ಮಾ.20 ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನ ಸುತ್ತ ನಿರ್ಮಾಣವಾಗುತ್ತಿರುವ ಸುತ್ತುಗೋಡೆ, ಯುದ್ಧ ಸ್ಮಾರಕ, ಯುದ್ಧ ಟ್ಯಾಂಕ್, ಯುದ್ಧ ವಿಮಾನ ಇಡುವ ಸ್ಥಳ, ಸ್ವಾಗತ ಕಮಾನು ಮತ್ತಿತರ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. 

ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಹುಟ್ಟುಹಬ್ಬವು ಇದೇ ಮಾರ್ಚ್ 31 ರಂದು ಇರುವುದರಿಂದ ಯುದ್ಧ ಸ್ಮಾರಕ ಕೆಲಸವನ್ನು ಮಾರ್ಚ್ 20 ರೊಳಗೆ ಪೂರ್ಣಗೊಳಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಉತ್ತಮ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು, ಅನಗತ್ಯ ವೆಚ್ಚಗಳಿಗೆ ಅವಕಾಶ ನೀಡದೆ ಕಾಮಗಾರಿ ಕೈಗೊಳ್ಳುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಪಿ.ಐ.ಶ್ರೀವಿದ್ಯಾ ಅವರು ನಿರ್ದೇಶನ ನೀಡಿದರು.  

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷರಾದ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರು ಮಾತನಾಡಿ, ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಸಲಹೆ ಮಾಡಿದರು. 

ಮೇಜರ್ ಬಿದ್ದಂಡ ನಂಜಪ್ಪ ಅವರು ಜನರಲ್ ಕೆ.ಎಸ್.ತಿಮ್ಮಯ್ಯ, ಸ್ಮಾರಕ ಭವನ ಸುತ್ತ ಹಸಿರು ವಾತಾವಣರದಿಂದ ಕೂಡಿರಬೇಕು. ಯಾವುದೇ ಕಾರಣಕ್ಕೂ ಕಾಂಕ್ರೀಟ್ ಮಯವಾಗಬಾರದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಅವರು ಸಲಹೆ ಮಾಡಿದರು. 

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್ ಅವರು ಸ್ಮಾರಕ ಭವನದ ಸುತ್ತುಮುತ್ತ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ನಿರ್ಮಿತಿ ಕೇಂದ್ರದ ಎಂಜಿನಿಯರ್ ರಾಘವೇಂದ್ರ, ಕರಿಯಪ್ಪ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News