ಆರ್ ಬಿಐ ಅಧಿಕಾರ ದುರ್ಬಲಗೊಳಿಸಿದ್ದೇ ವಂಚನೆಗೆ ಕಾರಣ

Update: 2018-03-15 06:56 GMT

ಮುಂಬೈ, ಮಾ.15: ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹು ಕೋಟಿ ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದತ್ತ ಬೊಟ್ಟು ಮಾಡಿದ್ದರೆ, ಇದೀಗ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿಕೆಯೊಂದನ್ನು ನೀಡಿ  ಸಾರ್ವಜನಿಕ ರಂಗದ ಬ್ಯಾಂಕುಗಳ ಮೇಲಿದ್ದ ಆರ್ ಬಿಐ ಅಧಿಕಾರವನ್ನು ಮೊಟಕುಗೊಳಿಸಿರುವುದರಿಂದ ಅದು ಬ್ಯಾಂಕುಗಳ ಮೇಲೆ ಬಹಳ ಸೀಮಿತ ಅಧಿಕಾರ ಹೊಂದಿದೆ ಎಂದು ಹೇಳಿದ್ದಾರೆ.

ಗಾಂಧಿನಗರದಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ಆರ್ ಬಿಐ ನಿಸ್ಸಹಾಯಕ ಎಂಬುದನ್ನು ಸೂಚಿಸಿದ್ದಾರೆ. ಕೇಂದ್ರವು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಂದಿರುವ ಸರಣಿ ತಿದ್ದುಪಡಿಗಳ ಮೂಲಕ ಬ್ಯಾಂಕುಗಳ ಮೇಲೆ ರಿಸರ್ವ್ ಬ್ಯಾಂಕ್ ಹೊಂದಿದ್ದ ಎಲ್ಲಾ ನಿಯಂತ್ರಣವನ್ನೂ ಕಸಿದುಕೊಂಡಿರುವುದರಿಂದ ಅದು ಸಾರ್ವಜನಿಕ ರಂಗದ ಬ್ಯಾಂಕುಗಳ ಮಂಡಳಿಯನ್ನು ಬದಲಾಯಿಸಲು ಅಥವಾ ವಿಲೀನಗೊಳಿಸಲು ಯಾ  ಯಾವುದೇ ಕಾರಣಕ್ಕೂ ಬ್ಯಾಂಕ್ ಒಂದರ ಪರವಾನಿಗೆಯನ್ನು ರದ್ದುಗೊಳಿಸುವ ಅಧಿಕಾರ ಹೊಂದಿಲ್ಲವೆಂಬುದನ್ನು ಪಟೇಲ್ ಸೂಚ್ಯವಾಗಿ ತಿಳಿಸಿದ್ದಾರೆ.

"ಬ್ಯಾಂಕಿಂಗ್ ನಿಯಂತ್ರಣ ಅಧಿಕಾರಗಳು ಯಾರೊಬ್ಬರ ಕೈಯಲ್ಲೇ ಇರಬೇಕೆಂಬುದೇನೂ ನಮ್ಮ ದೇಶದಲ್ಲಿ ಇಲ್ಲ ಎಂದು ಹೇಳಿದ ಅವರು, ಹಲವಾರು ಶಾಸಕಾಂಗ ಕ್ರಮಗಳಿಂದ ಬ್ಯಾಂಕಿಂಗ್ ನಿಯಂತ್ರಣ ಕ್ಷೇತ್ರ ಬಾಧಿತವಾಗಿದೆ. ಆರ್ ಬಿಐ ಹೊರತಾಗಿ ವಿತ್ತ ಸಚಿವಾಲಯವೂ  ಬ್ಯಾಂಕುಗಳನ್ನು ನಿಯಂತ್ರಿಸುತ್ತಿರುವುದರಿಂದ  ಇಂತಹ ಸಮಸ್ಯೆಗಳುಂಟಾಗಿ ಇತ್ತೀಚಿಗಿನ  ವಂಚನೆಯಂತಹ  ಕಂಪನಗಳಿಗೆ ಕಾರಣವಾಗುವುದು'' ಎಂದು ಹೇಳುವ ಮೂಲಕ ಆರ್ ಬಿಐ ಎಚ್ಚರಿಕೆಯಿಂದಿಲ್ಲದೇ ಇದ್ದ ಕಾರಣ ಈ ಪಿಎನ್‍ಬಿ ಹಗರಣ ನಡೆಯಿತೆಂಬ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಆರ್ ಬಿಐಗೆ ಸಾರ್ವಜನಿಕ  ರಂಗದ ಬ್ಯಾಂಕುಗಳ ಮೇಲಿಗಿಂತ ಖಾಸಗಿ ರಂಗದ ಬ್ಯಾಂಕುಗಳ ಮೇಲೆ ಹೆಚ್ಚಿನ ನಿಯಂತ್ರಣವಿದೆ ಹಾಗೂ ಸಾರ್ವಜನಿಕ ರಂಗದ ಬ್ಯಾಂಕುಗಳ ಮುಖ್ಯಸ್ಥರು ಆರ್ ಬಿಐ ಅಧಿಕಾರ ಹೊಂದಿಲ್ಲದೇ ಇರುವುದನ್ನೂ ಅರಿತಿದ್ದಾರೆ. ಈ ಬ್ಯಾಂಕುಗಳಲ್ಲಿ ಏನೇ ನಡೆದರೂ ಕೊನೆಗೆ ನಿರ್ಧಾರ ಕೈಗೊಳ್ಳುವ ಎಲ್ಲಾ ಅಧಿಕಾರ ಸರಕಾರಕ್ಕಿದೆಯೇ ಹೊರತು ಆರ್ ಬಿಐಗಿಲ್ಲ  ಎಂಬುದು ಬ್ಯಾಂಕುಗಳ ಎಂಡಿಗಳಿಗೂ ತಿಳಿದಿದೆ ಎಂದು ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News