ಎ.12ರವರೆಗೆ 'ದಿ ವೈರ್' ವಿರುದ್ಧದ ವಿಚಾರಣೆ ಮುಂದುವರಿಸಬೇಡಿ: ಗುಜರಾತ್ ಹೈಕೋರ್ಟಿಗೆ ತಿಳಿಸಿದ ಸುಪ್ರೀಂ

Update: 2018-03-15 10:32 GMT

ಹೊಸದಿಲ್ಲಿ, ಮಾ.15: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ವಜಾಗೊಳಿಸುವಂತೆ thewire.in ಮಾಡಿರುವ ಅಪೀಲಿನ ಮೇಲಿನ ವಿಚಾರಣೆಯನ್ನು ತಾನು ಎಪ್ರಿಲ್ 12ರಂದು ನಡೆಸುವ ತನಕ  ಪತ್ರಿಕೆಯ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ನಡೆಸಂತೆ ಸುಪ್ರೀಂ ಕೋರ್ಟ್ ಗುಜರಾತ್ ವಿಚಾರಣಾ ನ್ಯಾಯಾಲಯಕ್ಕೆ ಗುರುವಾರ ತಿಳಿಸಿದೆ.

thewire.in ಅಪೀಲಿನ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಎರಡು ವಾರಗಳೊಳಗಾಗಿ ಸಲ್ಲಿಸುವಂತೆ  ಸುಪ್ರೀಂ ಕೋರ್ಟ್ ಜಯ್ ಶಾ ಮತ್ತಿತರರಿಗೆ ಸೂಚಿಸಿದೆ. ಈ ಪ್ರಕರಣದ ಬಗ್ಗೆ 'ಬೇಜವಾಬ್ದಾರಿಯುತ ವರದಿಗಾರಿಕೆ' ಮಾಡಿದೆ ಎಂದು ಸುಪ್ರೀಂ ಕೋರ್ಟ್ ಮಾಧ್ಯಮವನ್ನು ತರಾಟೆಗೆ ತೆಗೆದುಕೊಂಡಿದೆ.

ಮಾಧ್ಯಮಕ್ಕೆ ಮೂಗುದಾರ ಹಾಕುವುದಕ್ಕೆ ತನ್ನ ವಿರೋಧವಿದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅದೇ ಸಮಯ "ಮಾಧ್ಯಮ ಜವಾಬ್ದಾರಿಯುತವಾಗಿರಬೇಕು, ಎಲೆಕ್ಟ್ರಾನಿಕ್ ಮಾಧ್ಯಮ ಇನ್ನೂ ಹೆಚ್ಚು ಜವಾಬ್ದಾರಿಯುತವಾಗಬೇಕು ಎಂದು ನಾವು ನಿರೀಕ್ಷಿಸುತ್ತೇವೆ'' ಎಂದರು.

"thewire.in ಪ್ರಕಟಿಸಿದ ವರದಿ ಕಪೋಲಕಲ್ಪಿತ  ಹಾಗೂ ಅದು ಶಾ ಅವರ ಗೌರವಕ್ಕೆ ಚ್ಯುತಿ ತರುವ ಉದ್ದೇಶ ಹೊಂದಿತ್ತು,'' ಎಂದು ಜಯ್ ಶಾ ಪರ ವಕೀಲ ಎನ್ ಕೆ ಕೌಲ್ ನ್ಯಾಯಾಲಯಕ್ಕೆ ತಿಳಿಸಿದರು.

thewire.in ಪರ ವಕೀಲ ಕಪಿಲ್ ಸಿಬಲ್ ತಮ್ಮ ವಾದ ಮಂಡಿಸುತ್ತಾ ವೆಬ್ ತಾಣ thewire.in ಶಾ ಅವರಿಗೆ ಕೇವಲ ಪ್ರಶ್ನೆಗಳನ್ನು ಕೇಳಿದೆ. ಪತ್ರಿಕೋದ್ಯಮದ ಕತ್ತನ್ನು ಈ ರೀತಿ ಹಿಚುಕಲಾಗುತ್ತಿದ್ದರೆ ಯಾವುದೇ ಪತ್ರಕರ್ತ ಪ್ರಶ್ನೆ ಕೇಳುವ ಹಾಗಿರುವುದಿಲ್ಲ,'' ಎಂದು ಹೇಳಿದರು.

thewire.in ಪತ್ರಿಕೆ ಶಾ ಅವರ ಸಂಸ್ಥೆ ಮತ್ತು ಅದರ ವ್ಯವಹಾರಗಳ ಬಗ್ಗೆ ಯಾವುದೇ ವರದಿ ಪ್ರಕಟಿಸದಂತೆ ನಿರ್ಬಂಧವನ್ನು ಗುಜರಾತ್ ಹೈಕೋರ್ಟ್ ಫೆಬ್ರವರಿಯಲ್ಲಿ ಪುನಃ ಹೇರಿತ್ತು. ಶಾ ಅವರಿಗೆ ಸೇರಿದ ಸಂಸ್ಥೆಯ ವ್ಯವಹಾರ ನರೇಂದ್ರ ಮೋದಿ ಪ್ರಧಾನಿಯಾದ ನಂತರ  ವ್ಯವಹಾರ 16,000 ಪಟ್ಟು ಅಧಿಕಗೊಂಡಿತ್ತು ಎಂದು thewire.in ವರದಿ ತಿಳಿಸಿದ್ದು ದೊಡ್ಡ ವಿವಾದಕ್ಕೀಡಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News