×
Ad

ಇಂದು ರಾಜಕೀಯ ಕ್ಷೇತ್ರ ಕಲುಷಿತವಾಗಿದೆ: ಮಾಜಿ ಸಚಿವ ಎಂ.ಸಿ.ನಾಣಯ್ಯ

Update: 2018-03-15 23:46 IST

ಮಡಿಕೇರಿ, ಮಾ.15: ರಾಜಕೀಯದಲ್ಲಿರುವವರು ಅಧಿಕಾರವನ್ನು ಹುಡುಕಿಕೊಂಡು ಹೋಗಬಾರದು. ಆದರೆ ಇಂದು ರಾಜಕೀಯ ಕ್ಷೇತ್ರ ಕಲುಷಿತವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮಟ್ಟಕ್ಕೆ ಬೆಳೆದಿದೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ವಿಷಾದಿಸಿದ್ದಾರೆ.

ಟಿ.ಪಿ.ರಮೇಶ್ ಅಭಿನಂದನಾ ಸಮಿತಿ ವತಿಯಿಂದ ನಗರದ ಕೆಳಗಿನ ಗೌಡ ಸಮಾಜದಲ್ಲಿ ಆಯೋಜಿತ ಟಿ.ಪಿ. ರಮೇಶ್ ಅಭಿನಂದನಾ ಸಮಾರಂಭವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಜ್ಯೋತಿ ಬೆಳಗಿ ಉದ್ಘಾಟಿಸಿದರೆ, ಅಭಿನಂದನಾ ಗ್ರಂಥ ‘ಸಾಧನೆಯ ಹಾದಿಯಲ್ಲಿ’ ಗ್ರಂಥವನ್ನು ಖ್ಯಾತ ಇತಿಹಾಸ ತಜ್ಞರಾದ ಡಾ. ಎಂ.ಜಿ. ನಾಗರಾಜ್ ಅನಾವರಣಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಸಿ.ನಾಣಯ್ಯ, ಶಾಸಕರು, ಮಂತ್ರಿಗಳಾದವರು ತಮ್ಮ ಆಸ್ತಿಯನ್ನು 100-500 ಪಟ್ಟು ಹೆಚ್ಚಿಸಿಕೊಳ್ಳುತ್ತಿದ್ದು, ಭ್ರಷ್ಟಾಚಾರ ಮಾಡದೆ ಇದನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹವರ ನಡುವೆ ಬೆರಳೆಣಿಕೆಯ ಮಂದಿ ಪ್ರಾಮಾಣಿಕ ರಾಜಕಾರಣಿಗಳೂ ಇದ್ದರೂ, ಹಣದ ಮುಂದೆ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ರಾಜಕೀಯದಲ್ಲಿ ಕಾಲೆಳೆಯುವ ಪ್ರವೃತ್ತಿ ಹೊಸದೇನೂ ಅಲ್ಲ. ಆದರೆ ಇಂದಿನ ರಾಜಕೀಯ ಎತ್ತ ಸಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯದ ಕುಕೃತ್ಯಗಳನ್ನು ಬಯಲಿಗೆಳೆಯಬೇಕಾದ ಮಾಧ್ಯಮ ಕ್ಷೇತ್ರಗಳು ಕೂಡಾ ಇಂದು ರಾಜಕಾರಣಿಗಳ ಕೈಯ್ಯಲ್ಲಿದ್ದು, ಇಂದು ಅಗೋಚರವಾಗಿರುವ ಮತದಾರರಿಮದ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದೆ. ಈ ನಿಟ್ಟಿನಲ್ಲಿ ರಾಜಕಾರಣಿಗಳ ಕುಕೃತ್ಯಗಳನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಸಾಹಿತಿಗಳು, ವಿದ್ವಾಂಸರು, ಸಾಹಿತ್ಯ ಪರಿಷತ್‍ನಂತಹ ಸ್ವಾಯತ್ತ ಸಂಸ್ಥೆಗಳು ಒಟ್ಟಾಗಿ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದು ಎಂ.ಸಿ.ನಾಣಯ್ಯ ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲೂ ರಾಜಕೀಯ ನುಸುಳುತ್ತಿದ್ದು, ದಲಿತ ಸಾಹಿತ್ಯ, ಬ್ರಾಹ್ಮಣ ಸಾಹಿತ್ಯ ಸೇರಿದಂತೆ ಸಾಹಿತ್ಯದಲ್ಲೂ ಜಾತಿ ನುಸುಳುತ್ತಿದೆ. ಜಾತಿ ವ್ಯವಸ್ಥೆಯ ವಿರುದ್ಧ ಮಾತನಾಡುವವರೇ ಇಂದು ಜಾತಿಯ ಸುಳಿಯಲ್ಲಿ ಸಿಲುಕುತ್ತಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ನುಡಿದರು.

ಬಸವಣ್ಣ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಮೂಲಕ ವಿಶ್ವ ಮಾನವ ಸಂದೇಶವನ್ನು ಅವರ ವಚನಗಳನ್ನು ಸಾರಿದ್ದಾರೆ. ಅವರೆಂದೂ ವೀರಶೈವ, ಲಿಂಗಾಯತ ಧರ್ಮ ಕಟ್ಟುವಂತೆ ಹೇಳಿಲ್ಲ. ಆದರೆ ಇಂದು ಅಲ್ಲೂ ಜಾತಿ-ಉಪಜಾತಿಗಳಾಗುತ್ತಿದೆ ಎಂದು ನಾಣಯ್ಯ ವಿಷಾದಿಸಿದರು.

ವಿವಿಧ ಕ್ಷೇತ್ರಗಳ ಸಾಧಕ, ಸಮಾಜ ಸೇವಕ ಟಿ.ಪಿ.ರಮೇಶ್ ದಂಪತಿಗಳನ್ನು ಅವರ ಆತ್ಮೀಯ ಅಭಿಮಾನಿ ಬಳಗ ಮತ್ತು ಹಿತೈಷಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸುವುದರೊಂದಿಗೆ, ಅವರು ನಡೆದು ಬಂದ ಹಾದಿಯ ಕುರಿತ ‘ಸಾಧನೆಯ ಹಾದಿಯಲ್ಲಿ’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು.

ಗ್ರಂಥ ಬಿಡುಗಡೆ ಮಾಡಿದ ಡಾ.ಎಂ.ಜಿ. ನಾಗರಾಜ್ , ತಳ ಸಮುದಾಯದ ನೋವುಗಳನ್ನು ಅನುಭವಿಸಿ, ನೊಂದವರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಟಿ.ಪಿ. ರಮೇಶ್ ಸಾಧನೆಯ ಹಾದಿಯಲ್ಲಿ ಮುನ್ನಡೆದು ಬಂದಿದ್ದಾರೆ. ಟಿ.ಪಿ.ರಮೇಶ್ ತಮ್ಮ ಸಾಧನೆಯ ಮೂಲಕ  ಬಹುಶೃತ ನಾಯಕರಾಗಿ ರೂಪುಗೊಂಡಿದ್ದು, ಇವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಎಂ.ಸಿ. ನಾಣಯ್ಯ ಅವರ ಪಾತ್ರವೂ ಹಿರಿದೆಂದರು.

ಆಶಯ ನುಡಿಗಳನ್ನಾಡಿದ ಮೈಸೂರು ಮುಕ್ತ ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ. ಕವಿತಾ ರೈ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆ ತನ್ನೆರಡು ಕಣ್ಣಿನ ದೃಷ್ಟಿ ಎಂದು ಹೇಳಿಕೊಂಡಿರುವ ಟಿ.ಪಿ. ರಮೇಶ್ ಅವರು, ಅಹಿಂದ ಹಿನ್ನೆಲೆಯಿಂದ ಬರುವ ಮೂಲಕ, ಸಮಾಜದ ಎಲ್ಲರನ್ನೂ ಪ್ರೀತಿ ಸೌಹಾರ್ದತೆಗಳ ಮೂಲಕ ಬೆಳವಣಿಗೆಯ ಹಾದಿಯಲ್ಲಿ ಕೊಂಡೊಯ್ಯಲು ಪ್ರಯತ್ನಿಸಿದವರೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಮಾತನಾಡಿ, ಕೊಡಗಿನಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ ಎನ್ನುವ ಕಾಲ ಘಟ್ಟದಲ್ಲಿ ಕನ್ನಡ ಪರವಾದ ಚಟುವಟಿಕೆಗಳ ಮೂಲಕ ಜಿಲ್ಲೆಯಲ್ಲಿ ಕನ್ನಡ ಗಟ್ಟಿಯಾಗಿ ತಳವೂರಲು ಕಾರಣಕರ್ತರಾದವರು ಟಿ.ಪಿ. ರಮೇಶ್ ಅವರೆಂದು ಶ್ಲಾಘಿಸಿದರು.

ಮೈಸೂರು ವಿಶ್ವ ವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ನೀಲಗಿರಿ ತಳವಾರ್ ಮಾತನಾಡಿ, ಕನ್ನಡದ ತೇರನ್ನೆಳೆಯುವುದಕ್ಕೆ ತಮ್ಮನ್ನು ಮುಡಿಪಾಗಿರಿಸಿಕೊಂಡು ಶ್ರಮಿಸಿದವರು ಟಿ.ಪಿ.ರಮೇಶ್ ಅವರಾಗಿದ್ದಾರೆ. ಕನ್ನಡ ಅಭಿಮಾನಿಗಳು ಸಾಕಷ್ಟು ಇದ್ದರು, ಹೋರಾಟಗಾರರ ಕೊರತೆ ಇದ್ದ ಕಾಲ ಘಟ್ಟದಲ್ಲಿ ಅದನ್ನು ನೀಗಿದವರು ಟಿಪಿಆರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅತಿಥಿಗಳಾದ ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಎನ್.ಎ. ಜ್ಞಾನೇಶ್, ಜಾನಪದ ತಜ್ಞ ಬೆಸೂರು ಮೋಹನ್ ಪಾಳೇಗಾರ್ ಮಾತನಾಡಿದರು. ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಬಿ.ಎ. ಸಂಶುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಂ.ಪಿ. ಕೇಶವ ಕಾಮತ್ ಸ್ವಾಗತಿಸಿ, ಎಸ್.ಐ. ಮುನೀರ್ ಅಹಮ್ಮದ್ ಮತ್ತು ಬಳಗ ಕಾರ್ಯಕ್ರಮ ನಿರೂಪಿಸಿದರು. 

ಭಾಷೆಗಳ ಕಡೆಗಣನೆ ಬೇಡ
ಆತ್ಮವಿಮರ್ಶೆ ಇಲ್ಲದೆ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯವಾಗಲಾರದು ಮತ್ತು ವಿಮರ್ಶೆ ಇಲ್ಲದೆ ಬದುಕು ಪ್ರಸ್ತುತವಾಗಲಾಗಲಾರದೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅಭಿಪ್ರಾಯಿಸಿದ್ದಾರೆ. ಯಾವುದೇ ವ್ಯಕ್ತಿ ಸನ್ಮಾನಕ್ಕೆ ಒಳಪಡುವ ಹಂತದಲ್ಲಿ ಆತನ ಸಾಧನೆ ವಿಮರ್ಶೆಗೊಳಪಡಬೇಕಾದುದು ಅತ್ಯವಶ್ಯ. ಮುಖಸ್ತುತಿಯ ಹೊಗಳಿಕೆ ಮತ್ತು ವೈಭವೀಕರಣ ಆ ಕ್ಷಣಕ್ಕೆ ಮಾತ್ರ ಸೀಮಿತವಾಗಿ, ಬಳಿಕ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆಂದು ಸ್ಪಷ್ಟಪಡಿಸಿದರು.

‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ಮೂಲಕ ಅಖಂಡ ಭಾರತದ ಸಂಸ್ಕೃತಿ, ಭೌಗೋಳಿಕ ಆಶಯಗಳನ್ನು ಕರ್ನಾಟಕದ ನಾಡಗೀತೆ ತನ್ನ ಗರ್ಭದಲ್ಲರಿಸಿಕೊಂಡಿದ್ದು, ಇಂತಹ ಚಿಂತನೆಗಳನ್ನು ಹೊಂದಿದಾಗ ರಾಜ್ಯದೊಂದಿಗೆ ದೇಶವನ್ನು ಸರ್ವಸುಂದರವಾಗಿ ಕಟ್ಟಲು ಸಾಧ್ಯ. ರಾಜ್ಯದಲ್ಲಿ ಕನ್ನಡ ಪ್ರಧಾನ ಭಾಷೆಯಾಗಿದ್ದರು ಇದರೊಂದಿಗೆ ಇತರ ಪ್ರಾದೇಶಿಕ ಭಾಷೆಗಳ ಬೆಳವಣಿಗೆಗಳಿಗೆ ಒತ್ತು ನೀಡಿ ಅಕಾಡೆಮಿಗಳನ್ನು ರಚಿಸುವ ಮೂಲಕ ಅವುಗಳನ್ನು  ಸಮಾನವಾಗಿ ಕಾಣುವ ಪ್ರಯತ್ನಗಳು ನಡೆದಿದೆಯಾದರು ಪ್ರಾದೇಶಿಕ ಭಾಷೆಗಳ ಕಡೆಗಣನೆ ನಡೆಯುತ್ತಿದೆಯೆಂದು ಪ್ರೊ.ಎಸ್.ಜಿ. ಸಿದ್ದರಾಮಯ್ಯ ವಿಷಾದಿಸಿದರು.

‘ಎಚ್ಚರ ಪ್ರಜ್ಞೆ ಅವಶ್ಯ’- ಪ್ರಜಾಪರವಾದ ಚಿಂತನೆಗಳ ಬೀಜವನ್ನು ಟಿಪಿ.ರಮೇಶ್ ಅವರಲ್ಲಿ ಬಿತ್ತಿದವರು ಎಂಸಿ. ನಾಣಯ್ಯ ಅವರಾಗಿದ್ದು,  ಇಂತಹ ಸದಾ ಎಚ್ಚರದಿಂದಿರುವ, ಜನ ಪರವಾದ ಚಿಂತನೆಗಳು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾದ ಅಂಶಗಳೆಂದು ಅನಿಸಿಕೆ ವ್ಯಕ್ತಪಡಿಸಿ, ‘ಬಹುತ್ವ’ದ ಭಾರತವನ್ನು ಪ್ರೀತಿಸಿ ಬೆಳೆಸುವ ಯುವ ಸಮುದಾಯವನ್ನು ಬೆಳೆಸುವಂತಾಗಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದರು.

ಪ್ರಕೃತಿಯ ಮೇಲಿನ ಹಲ್ಲೆ ನೋವು ತಂದಿದೆ: ಕೊಡಗಿನ ಪ್ರಕೃತಿಯ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಲ್ಲೆ ತನಗೆ ನೋವನ್ನು ಉಂಟುಮಾಡಿದೆಯೆಂದು ತಿಳಿಸಿದ ಪ್ರೊ.ಸಿದ್ದರಾಮಯ್ಯ, ತಾವು ಮಡಿಕೇರಿಯ ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡರು. 1978 ರ ಆಸುಪಾಸಿನಲ್ಲಿ ಜಿಲ್ಲೆಯ ಯಾವುದೇ ಭಾಗ ಅತ್ಯಂತ ಪ್ರಶಾಂತ, ಸ್ವಚ್ಛವಾಗಿತ್ತು. ತಾನು ಇಲ್ಲಿ ಧೂಳನ್ನು ಕಂಡದ್ದು ಮುಖ್ಯ ಮಂತ್ರಿಯಾಗಿದ್ದ ಗುಂಡೂರಾವ್ ಅವರು ಹೆಲಿಕಾಪ್ಟರ್ ನಲ್ಲಿ ಬಂದಿಳಿಯುವಾಗ ಮಾತ್ರವೆಂದು ತಿಳಿಸಿ, ನಂತರದ ದಿನಗಳಲ್ಲಿ ಕೊಡಗಿನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಪ್ರಕೃತಿ ನಾಶ ನೋವನ್ನು ತಂದಿದೆಯೆಂದು ತಿಳಿಸಿದರು.

ಹೋಂಸ್ಟೇ ಸಂಸ್ಕೃತಿ ಬೇಡ
ಕುಡಿದು ಮಜಾ ಮಾಡಲು ಇರುವ ಹೋಂಸ್ಟೇಗಳನ್ನು ವಿರೋಧಿಸುವ ಕೆಲಸವನ್ನು ಪೌರುಷವುಳ್ಳ ಕೊಡಗಿನ ಜನತೆ ಏತಕ್ಕೆ ಮಾಡುತ್ತಿಲ್ಲವೆಂದು ಪ್ರಶ್ನಿಸಿದ ಹಿರಿಯ ಸಾಹಿತಿ ಹಾಗೂ ವಿದ್ವಾಂಸರಾದ ಡಾ. ಮಳಲಿ ವಸಂತ ಕುಮಾರ್, ಹೋಂ ಸ್ಟೇಗಳು ಕೊಡಗಿನ ಸಾಂಸ್ಕೃತಿಕ ಪರಂಪರೆಯನ್ನು ನಾಶ ಮಾಡುವ ನೆಲೆಗಳಾಗಿದೆಯೆಂದು ಕಳವಳ ವ್ಯಕ್ತಪಡಿಸಿದರು.

ಕೊಡಗಿನ ಜನತೆ ಇಲ್ಲಿನ ವಿಶಿಷ್ಟ ಸಂಸ್ಕೃತಿಯನ್ನು ಹಾಳು ಗೆಡಹುವ ಹೋಂ ಸ್ಟೇಗಳ ವಿರುದ್ಧ ಧ್ವನಿ ಎತ್ತಬೇಕು. ಇಂತಹ ಹೋರಾಟವನ್ನು ಟಿ.ಪಿ.ರಮೇಶ್, ಎಂ.ಸಿ. ನಾಣಯ್ಯ ಅವರು ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿದರು. ‘ವಚನ ಗಾಯನ ಸಂಸ್ಥೆ’ ರಚಿಸಿ- ಕನ್ನಡದ ಅತ್ಯಂತ ವಿಶಿಷ್ಟ ಸಾಹಿತ್ಯ ಪರಂಪರೆಯಾಗಿರುವ ವಚನ ಸಾಹಿತ್ಯವೆನ್ನುವುದು, ಆಧ್ಯಾತ್ಮಿಕತೆ ಮತ್ತು ವೈಚಾರಿಕತೆಯನ್ನು ಮೇಳೈಸಿಕೊಂಡಿರುವ ವಿಶಿಷ್ಟ ಸಾಹಿತ್ಯ. ಇಂತಹ ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ‘ವಚನ ಗಾಯನ ಸಂಸ್ಥೆ’ಯನ್ನು ರಚಿಸುವಂತೆ ಡಾ. ಮಳಲಿ ವಸಂತ ಕುಮಾರ್ ಸಲಹೆ ನೀಡಿದರು.

ವೈಚಾರಿಕತೆ ಮೂಡಿಸುವ ವಚನಗಳನ್ನು ಪ್ರತಿನಿತ್ಯ ಮಕ್ಕಳು ಓದುವಂತಾಗಬೇಕೆಂಬ ಆಶಯ ವ್ಯಕ್ತಪಡಿಸಿದ ಅವರು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಗಳು ದೊರಕುವುದಕ್ಕೆ ಇಲ್ಲಿನ ವಚನ ಸಾಹಿತ್ಯವೂ ಒಂದು ಕಾರಣವೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News