ಕರ್ನಾಟಕದ ಕಾಂಗ್ರೆಸ್ ಎಟಿಎಂ ಅಸ್ತಿತ್ವ ಕಳೆದುಕೊಳ್ಳಲಿದೆ: ಡಿ.ವಿ.ಸದಾನಂದ ಗೌಡ

Update: 2018-03-16 14:16 GMT

ಮಡಿಕೇರಿ, ಮಾ.16: ದೇಶದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಎಟಿಎಂ ಉಳಿದುಕೊಂಡಿದ್ದು, ಇದು ಕೂಡ ಕೊನೆಯ ದಿನಗಳನ್ನು ಎಣಿಸುತ್ತಿದೆಯೆಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.

ಮಡಿಕೇರಿ ತಾಲೂಕು ಬಿಜೆಪಿ ಹಾಗೂ ನಗರ ಬಿಜೆಪಿ ಮಂಡಲದ ಸಂಯುಕ್ತಾಶ್ರಯದಲ್ಲಿ ನಗರದ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಬಿಜೆಪಿ ಬೂತ್ ನವಶಕ್ತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿಯೆ ಅಧಃಪತನ ಕಂಡಿರುವ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕದಲ್ಲಿರುವ ಸರ್ಕಾರವನ್ನು ಎಟಿಎಂನಂತೆ ಬಳಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಇದಕ್ಕಾಗಿಯೇ ಖಜಾನೆ ಲೂಟಿ, ಗೂಂಡಾಗಿರಿ, ರಿಯಲ್ ಎಸ್ಟೇಟ್ ಮಾಫಿಯಾದಲ್ಲಿ ತೊಡಗಿದೆಯೆಂದು ಆರೋಪಿಸಿದರು

ಕರ್ನಾಟಕ ಅಭಿವೃದ್ಧಿಯಲ್ಲಿ ನಂಬರ್ 1 ಎಂದು ಮುಖ್ಯಮಂತ್ರಿಗಳು ತಪ್ಪಾಗಿ ಹೇಳಿಕೆ ನೀಡಿದ್ದು, ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ 1 ಎನ್ನುವುದು ಈಗಾಗಲೆ ಸರ್ವೇಯಿಂದ ಸಾಬೀತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾವುಗಳು ಓಡಿಸುವುದು ಬೇಡ. ಅವರು ಅವರಾಗಿಯೇ ಓಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ತುಷ್ಟೀಕರಣ ಮತ್ತು ಕುಟುಂಬ ರಾಜಕಾರಣಕ್ಕಾಗಿ ದೇಶವನ್ನು ಬಲಿಕೊಟ್ಟ ಕಾಂಗ್ರೆಸ್ ಎಲ್ಲವೂ ಮುಗಿದು ಹೋಯಿತು ಎನ್ನುವ ಸಂದರ್ಭದಲ್ಲಿ ಸಣ್ಣ ಪುಟ್ಟ ಪಕ್ಷಗಳೊಂದಿಗೆ ಒಗ್ಗಟ್ಟಿನ ಪ್ರದರ್ಶನ ಮಾಡುತ್ತಿದೆ. ಆದರೆ, ಕಮ್ಯೂನಿಸ್ಟ್ ಪಕ್ಷ ಸೇರಿದಂತೆ ಸಣ್ಣ ಪುಟ್ಟ ಪಕ್ಷಗಳು ಈಗಾಗಲೆ ನಾಶವಾಗುತ್ತಿವೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳು ನಿಯಂತ್ರಣಗೊಳ್ಳುತ್ತಿರುವುದರಿಂದ ಕಂಗಾಲಾದವರು ಈಗ ಒಗ್ಗೂಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಣ್ಣ ರೀತಿಯಲ್ಲಿ ಮೈಮರೆತರು ದೊಡ್ಡ ಹಿನ್ನಡೆಗೆ ಕಾರಣವಾಗಬಹುದೆಂದು ಸದಾನಂದ ಗೌಡ ಎಚ್ಚರಿಕೆ ನಿಡಿದರು.

ರಾಜ್ಯದಲ್ಲಿ ಕೊಲೆ, ಲೂಟಿ, ಅತ್ಯಾಚಾರ ಹೆಚ್ಚಾಗುತ್ತಿದ್ದು, ಲೋಕಾಯುಕ್ತರಿಗೆ ರಕ್ಷಣೆ ನೀಡಲಾಗದ ಸರ್ಕಾರ ಮತ್ತೆ ಬರಬೇಕೆ ಎನ್ನುವುದನ್ನು ಜನರು ತೀರ್ಮಾನ ಮಾಡಬೇಕಾಗಿದೆ. ರಾಜ್ಯದಲ್ಲಿ ಲೋಕಾಯುಕ್ತರ ಜೀವಕ್ಕೆ ರಕ್ಷಣೆ ನೀಡಲಾಗದ ದುಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಶಾಸಕ ಹಾರೀಸ್ ತಮ್ಮ ಕ್ಷೇತ್ರದಲ್ಲೆ ದಾವುದ್ ಇಬ್ರಾಹಿಂನನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಜನ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ಪ್ರತಿ ಬೂತ್‍ಗಳು ಅತ್ಯಂತ ಚಟುವಟಿಕೆಯ ಕೇಂದ್ರಗಳಾಗಿದ್ದು, ಪದಾಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಸದಾನಂದ ಗೌಡ ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ದೇಶದಲ್ಲಿ ಉದ್ದೇಶ ಆಧಾರಿತ ರಾಜಕಾರಣವನ್ನು ಮಾಡುತ್ತಿದ್ದಾರೆ. ದೇಶದ ಲೂಟಿಯನ್ನು ತಡೆಯುತ್ತಿದ್ದಾರೆ, ಓಟಿನ ಬೇಟೆಗಾಗಿ ಲೂಟಿ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಸದಾನಂದ ಗೌಡ ಅಭಿಪ್ರಾಯಪಟ್ಟರು.

ಕೇಂದ್ರದ ಮತ್ತೊಬ್ಬ ಸಚಿವ ಮನ್ಸುಕ್ ಎಲ್.ಮಾಂಡವ್ಯ ಮಾತನಾಡಿ, ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಕಾರ್ಯಕರ್ತರ ಶಕ್ತಿ ಬಳಕೆಯಾಗಬೇಕಾಗಿದೆ ಎಂದು ಕರೆ ನೀಡಿದರು. ಬಿಜೆಪಿ ಪಕ್ಷ ಕಾರ್ಯಕರ್ತರ ಆಧಾರದಲ್ಲಿ ಚುನಾವಣೆಯನ್ನು ಎದುರಿಸಲಿದ್ದು, ಜಿಲ್ಲೆಯ 266 ಬೂತ್‍ಗಳ ಅಧ್ಯಕ್ಷರು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಬೂತ್ ಗೆದ್ದರೆ ಶಕ್ತಿ ಕೇಂದ್ರ ಗೆದ್ದಂತೆ, ಶಕ್ತಿ ಕೇಂದ್ರ ಗೆದ್ದರೆ ತಾಲೂಕು, ವಿಧಾನಸಭಾ ಕ್ಷೇತ್ರ ಹಾಗೂ ವಿಧಾನ ಸಭೆಯನ್ನೆ ಗೆದ್ದಂತೆ ಎಂದು ವಿಶ್ಲೇಷಿಸಿದ ಸಚಿವ ಮಾಂಡವ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆ ಸಲಹೆ ನೀಡಿದರು.

ಉಚಿತ ಅಡುಗೆ ಅನಿಲ, ಆರೋಗ್ಯ ಸೌಲಭ್ಯ, ಜನ್ ಧನ್ ಖಾತೆ ಸೇರಿದಂತೆ ಕೇಂದ್ರದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದ ಸಚಿವರು ಪ್ರತಿ ಬೂತ್ ಪದಾಧಿಕಾರಿಗಳಿಗೆ ತಾವು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಮನದಟ್ಟು ಮಾಡಿಕೊಟ್ಟರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕಾಂಗ್ರೆಸ್ ಮುಕ್ತ ಕೊಡಗು ಎನ್ನುವ ಹೆಗ್ಗಳಿಕೆ ನಮ್ಮ ಜಿಲ್ಲೆಗೆ ಇದ್ದು, ಇದನ್ನು ಮತ್ತಷ್ಟು ಬಲಪಡಿಸಲು ಒಗ್ಗಟ್ಟಿನಿಂದ ಗೆಲುವಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು. ಮಾಡು ಇಲ್ಲವೆ ಮಡಿ ಎನ್ನುವ ಸೂತ್ರದ ಮೂಲಕ ಹಂತ ಹಂತವಾಗಿ ಚುನಾವಣೆಗಳನ್ನು ಎದುರಿಸುತ್ತಾ ಬಂದಿದ್ದೇವೆ. ಕಾರ್ಯಕರ್ತರ ಪಕ್ಷವಾಗಿರುವ ಬಿಜೆಪಿ ಬೂತ್ ಮಟ್ಟದಲ್ಲಿ ಶಕ್ತಿಯುತವಾಗಿರಬೇಕು. ಇದೇ ಪ್ರಕಾರವಾಗಿ ಮೇಘಾಲಯ, ತ್ರಿಪುರದಂತಹ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆಯೆಂದು ಅಭಿಪ್ರಾಯಪಟ್ಟ ಬೋಪಯ್ಯ, ಅತೀ ವಿಶ್ವಾಸ ಬೇಡವೆಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಕಾಂಗ್ರೆಸ್ಸಿಗರು ನಮ್ಮ ಕಾರ್ಯಕ್ರಮಗಳನ್ನು ಕಾಪಿ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಕಾಮಗಾರಿ ಪೂರ್ಣಗೊಳ್ಳದ ಯೋಜನೆಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೊಡಗು ಬಿಜೆಪಿಯ ಭದ್ರ ಕೋಟೆ ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕಾಂಗ್ರೆಸ್ಸಿಗರದ್ದು ಇದು ಕೊನೆಯ ಆಟವೆಂದು ಟೀಕಿಸಿದರು. ಅನೇಕ ಹಗರಣಗಳಲ್ಲಿ ತೊಡಗಿರುವ ರಾಜ್ಯ ಸರ್ಕಾರ, ಅಮಾಯಕರ ಹತ್ಯೆಗಳನ್ನು ಮುಚ್ಚಿ ಹಾಕಲು ಮಂತ್ರಿಗಳನ್ನು ರಕ್ಷಣೆಯಾಗಿ ಬಳಸಿಕೊಳ್ಳುತ್ತಿದೆಯೆಂದು ಆರೋಪಿಸಿದರು. ಇದೊಂದು ಕೊಲೆಗಡುಕ ಸರ್ಕಾರವೆಂದು ಟೀಕಿಸಿದ ಅವರು, ಇತ್ತೀಚೆಗೆ ಕೊಡ್ಲಿಪೇಟೆಯಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ಕತ್ತಿ ಝಳಪಿಸಿದ್ದಾನೆಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಎರಡೂ ಕ್ಷೇತ್ರಗಳು ಸೇರಿದಂತೆ ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆಯೆಂದು ಅಪ್ಪಚ್ಚು ರಂಜನ್ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಮನ್ಸುಕ್ ಎಲ್. ಮಾಂಡವ್ಯ ಅವರು ರಾಜ್ಯ ಸಭಾ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕೊಡಗು ಬಿಜೆಪಿ ವತಿಯಿಂದ ವಡಿಕತ್ತಿ ನೀಡಿ ಸನ್ಮಾನಿಸಲಾಯಿತು. 

ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಕೊಡಗು ಬಿಜೆಪಿ ಉಸ್ತುವಾರಿ ಕೇರಳದ ರಂಜಿತ್, ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ನಗರ ಅಧ್ಯಕ್ಷ ಮಹೇಶ್ ಜೈನಿ, ಸೋಮವಾರಪೇಟೆ ಅಧ್ಯಕ್ಷ ಕೊಮಾರಪ್ಪ, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಜಪ್ಪಣ್ಣ ಹಾಗೂ ಹಿರಿಯರಾದ ಎಂ.ಬಿ. ದೇವಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News