ಮೈಸೂರು: ದಲಿತರಿಗೆ ಸೇರಿದ ಜಮೀನನ್ನು ನೀಡುವಂತೆ ಆಗ್ರಹಿಸಿ ದಸಂಸ ಪ್ರತಿಭಟನೆ

Update: 2018-03-16 15:49 GMT

ಮೈಸೂರು,ಮಾ.16: ಅನ್ಯಾಯಕ್ಕೊಳಗಾದ ಕೆ.ಮಾದನಹಳ್ಳಿ ಗ್ರಾಮದ ದಲಿತರಿಗೆ ಸೇರಿದ ಜಮೀನನ್ನು ದಲಿತರಿಗೆ ದೊರಕಿಸಿಕೊಡುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಶಾಖಾ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಮೈಸೂರು ತಾಲೂಕು ಜಯಪುರ ಹೋಬಳಿ,ಕೆ.ಮಾದಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬದವರು ವ್ಯವಸಾಯ ಮಾಡಿಕೊಂಡು ಬಂದಿದ್ದ ಕೆ.ಮಾದಹಳ್ಳಿ ಗ್ರಾಮದ ಸರ್ವೆ ನಂಬರ್ ಗಳ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಬಲವಂತವಾಗಿ ಒಕ್ಕಲೆಬ್ಬಿಸಲಾಗಿತ್ತು. ಜಿಲ್ಲಾಧಿಕಾರಿಗಳು ದಲಿತರಿಗಾದ ಅನ್ಯಾಯವನ್ನು ಮನಗಂಡು ಭುಮಿ ಹಂಚಿಕೆ ಮಾಡುವ  ಮೂಲಕ ಬದಲಿ ವ್ಯವಸ್ಥೆ ಕಲ್ಪಿಸಿದ್ದರು. ತಹಶೀಲ್ದಾರ್ ಅವರು ಎಲ್ಲರಿಗೂ ಖಾಯಂ ಸಾಗುವಳಿ ಪತ್ರ ವಿತರಿಸಿದ್ದಾರೆ.

ಈ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ದಲಿತರು ಖಾತೆಗಾಗಿ ಹಲವಾರು ಬಾರಿ ಲಿಖಿತ ಮನವಿ ನೀಡಿದ್ದಾರೆ. ನೀವು ಪದೇ ಪದೇ ಬರುವುದು ಬೇಡ. ನೋಟೀಸ್ ನೀಡಿ ನಾನೇ ಖಾತೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಸರ್ಕಾರ ದಲಿತರಿಗೆ ಕೊಟ್ಟಿದ್ದ ಸಾಗುವಳಿ ಚೀಟಿಯನ್ನು ರದ್ದುಗೊಳಿಸಿ 15-12-2017ರಲ್ಲಿ ಆದೇಶ ನೀಡಿದೆ. ತಹಶೀಲ್ದಾರ್ ರಮೇಶ್ ಬಾಬು ದಲಿತರಿಗೆ ಭೂಮಿ ನೀಡದೇ ವಂಚಿಸುತ್ತಿದ್ದಾರೆ. ಈಗಲಾದರೂ ಅನ್ಯಾಯಕ್ಕೊಳಗಾದ ಕೆ.ಮಾದಹಳ್ಳಿ ಗ್ರಾಮದ ದಲಿತರಿಗೆ ಸೇರಿದ ಜಮೀನನ್ನು ದಲಿತರಿಗೆ ದೊರಕಿಸಿಕೊಡುವ ಮುಖಾಂತರ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಕುಮಾರ್ ಕರಡೀಪುರ, ಕಿರಂಗೂರು ಸ್ವಾಮಿ, ಯಡದೊರೆ ಮಹದೇವಯ್ಯ, ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಕೆ.ವಿ.ಮಹೇಂದ್ರ, ಚಿಕ್ಕ ಜವರಯ್ಯ, ಸಣ್ಣಯ್ಯ, ಚೆಲುವರಾಜು, ಶಂಕರಯ್ಯ, ರೇಣುಕಮ್ಮ, ರೇಖಾ, ಸಿದ್ದರಾಜು, ಮಹದೇವು, ರಾಜಣ್ಣ,ಸೋಮನಾಯಕ ಮತ್ತಿತರರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News