×
Ad

ಸೊರಬ: ಬಿಜೆಪಿಯ ಕಮಲ ಜಾತ್ರೆ ಉದ್ಘಾಟನೆ

Update: 2018-03-16 21:53 IST

ಸೊರಬ,ಮಾ.16: ಹುಟ್ಟಿದ ಶಿಶುವಿನಿಂದ ವಯೋವೃದ್ಧರ ವರೆಗೆ ಎಲ್ಲಾ ಜನಾಂಗ ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ವರೆಗೆ ಮೋದಿ ನೇತೃತ್ವದ ಕೇಂದ್ರ ಹಾಗೂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಸೌಲಭ್ಯಗಳು ದೊರಕಿವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದರು. 

ಗುರುವಾರ ಆನವಟ್ಟಿ ಬಳಿಯ ಕುಬಟೂರು ಕೆರೆ ಅಂಗಳದಲ್ಲಿ ಬದಲಾವಣೆಯ ಅಲೆಯೊಂದಿಗೆ ನಿಮ್ಮ ನಗರಕ್ಕೆ ಕಮಲ ಜಾತ್ರೆ ಆಗಮನ ಎಂಬ ಘೋಷಣೆಯಡಿ ಬಿ.ಜೆ.ಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಮಲ ಜಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಜಾತ್ರೆಗಳು ನಮ್ಮ ನೆಲ, ಸಂಸ್ಕೃತಿ, ಪರಂಪರೆಯನ್ನು ನೆನಪಿಸುತ್ತವೆ. ನಮ್ಮ ಪಾರಂಪರಿಕ ಗ್ರಾಮೀಣ ಸೊಗಡನ್ನು ಉಳಿಸುವಲ್ಲಿ ಹಾಗೂ ಇಂತಹ ಜಾತ್ರೆಗಳ ಮೂಲಕ ಪಕ್ಷದ ಸಂಘಟನೆ ಮಾಡಿ ಪಕ್ಷವನ್ನು ಸದೃಡಗೊಳಿಸುತ್ತ ಹಾಗೂ ಅಧಿಕಾರದತ್ತ ಬಿಜೆಪಿಯನ್ನು ತರೋಣ ಎಂದು ಕರೆ ನೀಡಿದರು. 

ಬಿಜೆಪಿ ರಾಜ್ಯ ಸಮಿತಿ ಸದಸ್ಯ ದತ್ತಾತ್ರೇಯ ಮಾತನಾಡಿ ಬಿ.ಜೆ.ಪಿ ಪಕ್ಷ ಆಡಳಿತ, ನಡೆ ಹಾಗೂ ಅವಕಾಶಗಳಲ್ಲಿ ತನ್ನದೇ ಆದ ವೈಶಿಷ್ಠ ಪೂರ್ಣ ಕಾರ್ಯಕ್ರಮಗಳನ್ನು ಹೊಂದಿದೆ. ಇದರ ಪರಿಣಾಮವೆ ಕಮಲ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರೆಯ ಮೂಲಕ ಬಾಲ್ಯಾವಸ್ಥೆಯಿಂದ ವಯೋವೃದ್ಧರವರೆಗೆ ಮನರಂಜನೆ ನೀಡಿ ಮನಸ್ಸನ್ನು ಮುದಗೊಳಿಸಿ ಜನರನ್ನು ಸೆಳೆದು ಪಕ್ಷದ ಸಂಘಟನೆಗೆ ಹೊಸ ಪರಂಪರೆಗೆ ನಾಂದಿ ಹಾಡಿದೆ. ಕೇಂದ್ರ ಹಾಗೂ ಬಿ.ಜೆ.ಪಿ ನೇತೃತ್ವದ ಯಡಿಯೂರಪ್ಪನವರ ಸರ್ಕಾರದ ಸೌಲಭ್ಯಗಳ ಬಗ್ಗೆ ಜಾತ್ರೆಯಲ್ಲಿ ಜನರಿಗೆ ತಿಳುವಳಿಕೆ ನೀಡಲಾಗುವುದು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಒಂದು ಕೊಲೆಗಡುಕ ಸರ್ಕಾರ. ಇಲ್ಲಿ ಜನರಿಗೆ ರಕ್ಷಣೆ ಇಲ್ಲ. ಹಿಂದೂಗಳ ನಿರಂತರ ಕೊಲೆಯಾಗುತ್ತಿದೆ. ರೈತರು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. 2500 ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆಗೆ ಮೊರೆ ಹೋಗಿದ್ದರೂ ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ದಾರೆ ಎಂದು ಹೇಳಿದರು. 

ತಾಲೂಕಿನಲ್ಲಿ ಸಿ.ಆರ್.ಪಿ ಫಂಡ್ ನಿಂದ ರಸ್ತೆಗಳ ನಿರ್ಮಾಣವಾಗುತ್ತಿವೆ ಹೊರೆತು ಶಾಸಕರ ಪ್ರಯತ್ನ ಏನು ಇಲ್ಲ.  ಬಾಯಿಯಲ್ಲಿ ಬಡಾಯಿ ಕೊಚ್ಚಿಕೊಳ್ಳುವ ಶಾಸಕ ಮಧುಬಂಗಾರಪ್ಪ ತಮ್ಮ ಶಿಷ್ಯರ ಮೂಲಕ ಬಗರ್ ಹುಕುಂ ಹಕ್ಕು ಪತ್ರ ಫಲಾನುಭವಿಗಳಿಂದ ಲಕ್ಷಗಟ್ಟಲೆ ಹಣ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊರಬ ಬಿ.ಜೆ.ಪಿ ಅಧ್ಯಕ್ಷ ಎ.ಎಲ್ ಅರವಿಂದ ವಹಿಸಿದ್ದರು. ರಾಮಣ್ಣ ಬಜಂತ್ರಿಯವರಿಂದ ಸ್ವರ ಸಂಗೀತ ಹಾಗೂ ಬನದಕೊಪ್ಪದ ಡೊಳ್ಳು ತಂಡವರಿಂದ ಜಾನಪದ ಸಂಗೀತ ಕಾರ್ಯಕ್ರಮ ನೆರವೇರಿದವು.

ಮಾಜಿ ಶಾಸಕ ನಾರಾಯಣಪ್ಪ, ಜಿ.ಪಂ ಸದಸ್ಯ ಸತೀಶ್, ತಾ.ಪಂ ಅಧ್ಯಕ್ಷೆ ನಯನ ಹೆಗಡೆ, ಸದಸ್ಯರಾದ ಪಿ.ಹನುಮಂತಪ್ಪ, ಪುರುಷೋತ್ತಮ್, ಮಾಜಿ ಜಿ.ಪಂ ಅಧ್ಯಕ್ಷೆ ಗೀತಾ ಮಲ್ಲೀಕಾರ್ಜುನ್, ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀಪಾದ ಹೆಗಡೆ, ಮಲ್ಲಿಕಾರ್ಜುನ್ ಬಿ, ಗ್ರಾ.ಪಂ ಸದಸ್ಯ ಕೃಷ್ಣಮೂರ್ತಿ, ಮಂಜಪ್ಪ ಮರಬದ್ರ, ಪಿ.ಎಸ್ ಗಿರೀಶ್, ಗಜಾನನ್ ರಾವ್, ಈಶ್ವರ್ ಚನ್ನಪಟ್ಟಣ, ಮಲ್ಲಿಕಾರ್ಜುನ್ ಗುತ್ತೇರ್, ಪರಮೇಶ್, ಕೇಶವ್ ರಾಯ್ಕರ್ ಜಡೆ, ಮಲ್ಲಿಕಾರ್ಜುನ್ ವೃತ್ತಿಕೊಪ್ಪ, ಚಾಂದ್ ಸಾಬ್, ಶಬ್ಬೀರ್ ಖಿಲ್ಲೇದಾರ್,ದಿನಕರ್ ಭಾವೆ, ಶಿವಪ್ರಸಾದ್ ಕುಬಸದ್, ಚಂದ್ರಗೌಡ ತುಡ್ನೂರು ಮತ್ತಿತರರು ಹಾಜರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News