×
Ad

ಮೈಸೂರು: ಕೇಂದ್ರ ಸರ್ಕಾರದ ಉದ್ದೇಶಿತ ನ್ಯಾಷನಲ್ ಮೆಡಿಕಲ್ ಕಮಿಷನ್ ಬಿಲ್ ವಿರೋಧಿಸಿ ರ‍್ಯಾಲಿ

Update: 2018-03-16 21:56 IST

ಮೈಸೂರು,ಮಾ.16: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನ್ಯಾಷನಲ್ ಮೆಡಿಕಲ್ ಕಮಿಷನ್ ಬಿಲ್ ಅನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ದವರು ನಗರದಲ್ಲಿ ಸೈಕಲ್ ಹಾಗೂ ಬೈಕ್ ರ್ಯಾಲಿ ನಡೆಸಿದರು.

ನಗರದ ಜೆ.ಕೆ.ಮೈದಾನದಿಂದ ಶುಕ್ರವಾರ ಹೊರಟ ಬೈಕ್ ರ್ಯಾಲಿ, ರೈಲ್ವೆ ನಿಲ್ದಾಣದ ವೃತ್ತ, ದಾಸಪ್ಪ ವೃತ್ತ, ಮೆಟ್ರೋಫೋಲ್ ವೃತ್ತದ ಮೂಲಕ ನಗರದ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ರ್ಯಾಲಿಯಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು.

ಅವೈಜ್ಞಾನಿಕ ಕಳಪೆ ಚಿಕಿತ್ಸೆಗೆ ಕಾರಣವಾಗುವ, ಜನರಿಗೆ ಇನ್ನು ಮುಂದೆ ಕಾದಿದೆ ಕಳಪೆ ಚಿಕಿತ್ಸೆ, ನಮ್ಮ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಇನ್ನು ಮುಂದೆ ಗಗನ ಕುಸುಮವಾಗಬಹುದು ಎಂದು ನ್ಯಾಷನಲ್ ಮೆಡಿಕಲ್ ಕಮಿಷನ್ ಬಿಲ್ ವಿರುದ್ಧವಾಗಿ ಘೋಷಣಾ ಫಲಕಗಳನ್ನು ಹಿಡಿದು ರ್ಯಾಲಿಯಲ್ಲಿ ಭಾಗವಹಿಸಿದ್ದರು. 

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಭಾರತೀಯ ವೈದ್ಯಕೀಯ ಸಂಘದವರು ವೈದ್ಯಕೀಯ ಕ್ಷೇತ್ರದ ವಿರುದ್ಧವಾಗಿರುವ ಎನ್‍ಎಂಸಿ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಹೊರಟಿದೆ. ಇದರಿಂದ ವೈದ್ಯರು ಬಹಳ ಸಂಕಷ್ಟದ ಪರಿಸ್ಥಿತಿ ಎದುರಿಸಲಿದ್ದಾರೆ. ಮಸೂದೆಯಲ್ಲಿರುವ ಕೆಲ ಅಂಶಗಳು ವೈದ್ಯರ ಮೇಲಿರುವ ಸಮಾಜದ ನಂಬಿಕೆ ಅಲ್ಲಗಳೆಯುವಂತೆ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಮಸೂದೆ ಮಂಡಿಸಬಾರದು. ಆಧುನಿಕ ವೈದ್ಯಕೀಯ ವೃತ್ತಿಯಲ್ಲಿ ಗುಣಮಟ್ಟದ ಕೌಶಲ ಮತ್ತು ಜ್ಞಾನದ ಅವಶ್ಯಕತೆ ಇರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಅನುಗುಣವಾಗಿ ಉನ್ನತ ಮಟ್ಟದ ಜ್ಞಾನ ಕೌಶಲ, ಹೆಚ್ಚಿನ ಸಂಕೀರ್ಣತೆಯಿಂದ ವೈದ್ಯಕೀಯ ವೃತ್ತಿಯು ಸ್ವಯಂ ನಿಯಂತ್ರಣಕ್ಕೆ ಅವಕಾಶ ಮಾಡಿ ಕೊಡುತ್ತದೆ. ಎನ್‍ಎಂಸಿ ಮಸೂದೆ ಇದರ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಆಧುನಿಕ ವೈದ್ಯಕೀಯ ವೃತ್ತಿ ಮತ್ತು ಜನರ ಜೀವನ ಈ ಮಸೂದೆ ಹಾಳು ಮಾಡುತ್ತದೆ. ಎನ್‍ಎಂಸಿ ಮಸೂದೆ ಭಾರತದ ಆಧುನಿಕ ವೈದ್ಯಕೀಯ ವೃತ್ತಿಯ ನಿಯಂತ್ರಣದ ಪಾತ್ರವನ್ನು ಬದಲಾಯಿಸುತ್ತದೆ. ಆಧುನಿಕ ವೈದ್ಯಕೀಯ ವೃತ್ತಿಯ ಪ್ರತಿಯೊಂದು ಕ್ಷೇತ್ರಕ್ಕೂ ನಷ್ಟ ಉಂಟು ಮಾಡುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರದ ಅಡಿಯಲ್ಲಿ ವೈದ್ಯಕೀಯ ರಂಗದ ಅಧಿಕಾರ ಕೇಂದ್ರೀಕರಣವಾಗುತ್ತದೆ. ಆಯುಷ್ ವೈದ್ಯರನ್ನು ಎನ್‍ಎಂಸಿ ಅಡಿಯಲ್ಲಿ ನೋಂದಾಯಿಸಲು ಅನುವು ಮಾಡಿಕೊಡುವ ಪ್ರಸ್ತಾವನೆ ಆಘಾತಕಾರಿ ಬೆಳವಣಿಗೆ. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು ಮಸೂದೆ ಶ್ರೀಮಂತರ ಪರವಾಗಿದೆ. ರೋಗಿಯ ಸುರಕ್ಷತೆಗೆ ಧಕ್ಕೆ ಬರುವ ಸಾಧ್ಯೆಯಿದೆ. ಯಾವುದೇ ಕಾರಣಕ್ಕೂ ಮಸೂದೆ ಮಂಡಿಸಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಾ.ಎಂ.ಎಸ್.ವಿಶ್ವೇಶ್ವರ, ಡಾ.ಸುಜಾತ ರಾವ್, ಡಾ.ಜಯಂತ್, ಡಾ.ಯೋಗಣ್ಣ ಇತರರು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News