ತುಮಕೂರು: ಭಿನ್ನಮತ ಮರೆತು ಒಂದಾದ ಬಿಜೆಪಿಯ ಜಿ.ಎಸ್.ಬಸವರಾಜು, ಎಸ್.ಶಿವಣ್ಣ

Update: 2018-03-16 16:36 GMT

ತುಮಕೂರು.ಮಾ.16: ಕಳೆದ ಐದು ವರ್ಷಗಳಿಂದ ತಮ್ಮೊಳಗಿನ ಭಿನ್ನಾಭಿಪ್ರಾಯದಿಂದ ಬಣಗಳಾಗಿ ವಿಂಗಡಿಸಲ್ಪಟ್ಟು ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ನಾಯಕರುಗಳಾದ ಜಿ.ಎಸ್.ಬಸವರಾಜು ಮತ್ತು ಸೊಗಡು ಶಿವಣ್ಣ ತಮ್ಮ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದು, ಚುನಾವಣೆ ಮುನ್ನ ನಡೆದಿರುವ ಒಗ್ಗಟ್ಟಿನ ಮಂತ್ರ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹರುಷ ತಂದಿದೆ.

ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು, ಎರಡು ಬಾರಿ ಸಂಸದರಾಗಿ ಅಧಿಕಾರ ಅನುಭವಿಸಿದ ನಂತರ 2008ರ ಚುನಾವಣೆ ವೇಳೆ ಜಾತಿಯ ಹೆಸರಿನಲ್ಲಿ ಬಿ.ಎಸ್.ವೈ ಆಶಯದಂತೆ ಬಿಜೆಪಿ ಸೇರಿ ಸಂಸದರಾಗಿದ್ದ ಜಿ.ಎಸ್.ಬಸವರಾಜು ಮತ್ತು ಮಾಜಿ ಸಚಿವ ಎಸ್.ಶಿವಣ್ಣ ಅವರ ನಡುವಿನ ಅಂತರಿಕ ಕಿತ್ತಾಟ ಇಂದುನಿನ್ನೆಯದಲ್ಲ. ಇಂದಿರಾಗಾಂಧಿ ಪ್ರಧಾನಿಯಾಗಿದ್ದ ವೇಳೆ ಜಾರಿಗೆ ತಂದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲಿಗೆ ಹೋಗಿದ್ದ ಮಾಜಿ ಸಚಿವ ಎಸ್.ಶಿವಣ್ಣ, ಅಂದಿನಿಂದಲೂ ಜಿ.ಎಸ್.ಬಸವರಾಜು ಅವರನ್ನು ವಿರೋಧಿಸುತ್ತಿದ್ದರು. ಇಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದ ಮುಖಂಡರಾದರೂ ಪರಸ್ವರ ಮಾತುಕತೆ ಇರಲಿಲ್ಲ. ಚುನಾವಣೆಗಳಲ್ಲಿ ಬದ್ದ ದ್ವೇಷಿಗಳಾಗಿದ್ದರು.

ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾದ ಕೂಡಲೇ ತಾನು ಕಾಂಗ್ರೆಸ್ ಪಕ್ಷದಲ್ಲಿ ಅನುಭವಿಸಿದ್ದ ಎಲ್ಲಾ ಅಧಿಕಾರವನ್ನು ಮರೆತು ಬಿಜೆಪಿ ಸೇರಿದ ಜಿ.ಎಸ್.ಬಸವರಾಜು, ನಂತರ ಬಿ.ಎಸ್.ವೈ ಅವರರೊಂದಿಗೆ ಕೆ.ಜೆ.ಪಿ ಸೇರಿದ ಪರಿಣಾಮ 2013ರ ಚುನಾವಣೆಯಲ್ಲಿ ಜಿ.ಎಸ್.ಬಿ ಅವರ ಮಗ ಜೋತಿ ಗಣೇಶ್ ಕೆ.ಜೆಪಿ ಅಭ್ಯರ್ಥಿಯಾಗಿ ಲಿಂಗಾಯತ ಮತಗಳು ವಿಭಜನೆಯಾಗಿ ಐದನೇ ಬಾರಿ ವಿಧಾನಸಭೆ ಪ್ರವೇಶಿಸುವ ಎಸ್.ಶಿವಣ್ಣ ಕನಸು ಭಗ್ನವಾಗಿತ್ತು. ನಂತರ ಜಿ.ಎಸ್.ಬಸವರಾಜು ಮತ್ತು ಎಸ್.ಶಿವಣ್ಣ ಇಬ್ಬರ ನಡುವಿನ ದ್ವೇಷ ಮತ್ತಷ್ಟು ಉಲ್ಬಣಿಸಿತ್ತು.

ಜಿ.ಎಸ್.ಬಸವರಾಜು ಬಿ.ಎಸ್.ವೈ ಬಣದೊಂದಿಗೆ ಗುರುತಿಸಿಕೊಂಡರೆ, ಎಸ್.ಶಿವಣ್ಣ ಈಶ್ವರಪ್ಪ ಬಣದಲ್ಲಿ ಗುರುತಿಸಿಕೊಂಡು  
ಪರಸ್ವರ ಬದ್ದ ವೈರಿಗಳಂತೆ ಬದುಕುತಿದ್ದರು. ಇದರ ಫಲವಾಗಿ ತುಮಕೂರು ನಗರಪಾಲಿಕೆ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರದಿಂದ ದೂರ ಉಳಿಯಬೇಕಾಯಿತು. ಇದು ಒಂದು ರೀತಿಯಲ್ಲಿ ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಬೇಸರ ಮೂಡಿಸಿತ್ತು. ಇಬ್ಬರು ನಾಯಕರನ್ನು ಒಂದುಗೂಡಿಸುವ ಪ್ರಯತ್ನ ನಡೆಸಿದ್ದರು ಫಲ ನೀಡಿರಲಿಲ್ಲ.

ಆದರೆ ಗುರುವಾರ ನಗರದ ವೀರಶೈವ ಸಮಾಜದ ಏರ್ಪಡಿಸಿದ್ದ ಮುಖಂಡರ ಸಭೆಯಲ್ಲಿ ಇಬ್ಬರು ನಾಯಕರು ಭಾಗವಹಿಸಿದ್ದರು. ಈ ವೇಳೆ ಸಮಾಜದ ಮುಖಂಡರಾದ ಟಿ.ಬಿ.ಶೇಖರ್,ಚಂದ್ರಮೌಳಿ ಸೇರಿದಂತೆ ಹಿರಿಯ ಮುಖಂಡರು ಇಬ್ಬರು ನಾಯಕರು ತಮ್ಮ ವೈಮನಸ್ಸು ಮರೆತು ಒಂದಾದರೆ ಮಾತ್ರ ಅಧಿಕಾರ ಹಿಡಿಯಲು ಸಾಧ್ಯ. ಇಲ್ಲದಿದ್ದರೆ ಅಧಿಕಾರ ಕೈತಪ್ಪಲಿದೆ. ಟಿಕೆಟ್ ಯಾರಿಗೆ ನೀಡಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ. ಹಲವು ವರ್ಷಗಳಿಂದ ಎಂ.ಪಿ, ಎಂ.ಎಲ್.ಎ. ಎರಡು ಸ್ಥಾನಗಳು ವೀರಶೈವ, ಲಿಂಗಾಯತ ಸಮುದಾಯಕ್ಕೆ ಮೀಸಲಾಗಿದ್ದವು. ನಿಮ್ಮಿಬ್ಬರ ವೈಮನಸ್ಸಿನಿಂದ ಎರಡನ್ನು ಕಳೆದುಕೊಳ್ಳಬೇಕಾಗಿತ್ತು. ಈಗಲಾದರೂ ಒಂದಾಗದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ ಪರಿಣಾಮ ಇಬ್ಬರು ನಾಯಕರು ಪರಸ್ವರ ಹಸ್ತಲಾಗವ ಮಾಡಿ, ಸಮಾಜದ ಮುಖಂಡರು ನೀಡಿದ ಹಾರವನ್ನು ಬದಲಾಯಿಸಿಕೊಳ್ಳುವ ಮೂಲಕ ತಮ್ಮ ನಡುವಿನ ದ್ವೇಷಕ್ಕೆ ಇತಿಶ್ರಿ ಹಾಡಿದ್ದಾರೆ.

ಹಾವು, ಮುಂಗುಸಿಯಂತಿದ್ದ ಇಬ್ಬರು ನಾಯಕರು ಒಂದಾಗಿರುವುದು ವೀರಶೈವ, ಲಿಂಗಾಯತ ಸಮುದಾಯದಲ್ಲಿ ಹೊಸ ಹುಮ್ಮಸ್ಸು ತಂದಿದ್ದು, ಮುಂದಿನ ದಿನದಲ್ಲಿ ಇದು ಯಾವ ರೀತಿ ಫಲಿತಾಂಶ ನೀಡಲಿದೆ ಎಂಬುದು ಕುತೂಹಲದ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News