ತನ್ನನ್ನು ರಾಜಕೀಯವಾಗಿ ಮುಗಿಸಲು ಲಂಚದ ಕತೆ ಕಟ್ಟಲಾಗಿದೆ: ಮೂಡಿಗೆರೆ ಪಪಂ ಅಧ್ಯಕ್ಷೆ ರಮೀಝಾಭಿ ಸ್ಪಷ್ಟನೆ
ಮೂಡಿಗೆರೆ ಮಾ.16: ತನ್ನ ಅಭಿವೃದ್ಧಿ ಕೆಲಸ ಸಹಿಸದ ಪಪಂ ವಿರೋಧ ಪಕ್ಷಗಳ ಮುಖಂಡರು ತನ್ನ ವಿರುದ್ಧ ಪಿತೂರಿ ನಡೆಸಿದ್ದು, ಗುತ್ತಿಗೆದಾರನಿಂದ ಲಂಚ ಪಡೆದಿದ್ದೇನೆಂದು ಆರೋಪ ಹೊರಿಸಿರುವುದು ಈ ಪಿತೂರಿಯ ಭಾಗವಾಗಿದೆ. ವಿರೋಧ ಪಕ್ಷದವರ ಆರೋಪ ಸುಳ್ಳಿನ ಕಂತೆಯಾಗಿದ್ದು, ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಪ.ಪಂ.ಅಧ್ಯಕ್ಷೆ ರಮೀಝಾಭಿ ತಿಳಿಸಿದ್ದಾರೆ.
ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಕಳೆದ ಒಂದೂವರೆ ವರ್ಷದಿಂದ ಪಟ್ಟಣ ಪಂಚಾಯತ್ ಅಧ್ಯಕ್ಷೆಯಾಗಿ ಪ್ರಾಮಾಣಿಕತೆಯಿಂದ ಪಟ್ಟಣದ ಅಭಿವೃದ್ಧಿಗೆ ವಿವಿಧ ರೀತಿಯ ಕ್ರಮ ಕೈಗೊಂಡಿದ್ದೇನೆ. ಇದನ್ನು ಸಹಿಸದ ವಿರೋಧ ಪಕ್ಷದ ಸದಸ್ಯರು ತನ್ನ ವಿರುದ್ಧ ಲಂಚದ ಆರೋಪ ಹೊರಿಸಿದ್ದಾರೆ. ತನ್ನ ಅಧ್ಯಕ್ಷತೆಯಲ್ಲಿ ಪಟ್ಟಣವನ್ನು ಸುಂದರಗೊಳಿಸಲು ಹಾಗೂ ಪಟ್ಟಣ ವಾಸಿಗಳ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಿದ್ದೇನೆ. ಇದರಿಂದ ಪಟ್ಟಣದ ಜನತೆಯಲ್ಲಿ ತನ್ನ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಈ ಕಾರಣಕ್ಕೆ ವಿರೋಧ ಪಕ್ಷಗಳ ಮುಖಂಡರು ತನ್ನನ್ನು ರಾಜಕೀಯವಾಗಿ ಮುಗಿಸಲು ಪಿತೂರಿ ನಡೆಸುತ್ತಿದ್ದಾರೆ. ಇದಕ್ಕೆ ತಾನು ಅಂಜುವುದಿಲ್ಲ. ಪಟ್ಟಣದ ಅಭಿವೃದ್ಧಿಯಷ್ಟೇ ತನ್ನ ಗುರಿಯಾಗಿದೆ ಎಂದ ಅವರು, ವಿರೋಧ ಪಕ್ಷದ ಸದಸ್ಯರು ಹಾಗೂ ಅವರ ಹಿಂಬಾಲಕರು ಸ್ವಚ್ಛಭಾರತ್ ಯೋಜನೆಯ ಹಣ ದುರುಪಯೋಗ ಹಾಗೂ ಲಂಚದ ಕಟ್ಟುಕತೆ ಕಟ್ಟಿ, ತನ್ನ ತೇಜೋವಾಧೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಸ್ವಚ್ಛಭಾರತ್ ಅಭಿಯಾನಕ್ಕಾಗಿ ಸರಕಾರದಿಂದ 1.86 ಲಕ್ಷ ರೂ. ಹಣ ಬಿಡುಗಡೆಯಾಗಿತ್ತು. ಇದನ್ನು ಮೈಸೂರಿನ ಗ್ರೀನ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆ 98.785 ರೂ. ಟೆಂಡರ್ ಪಡೆದಿತ್ತು. ಹಿಂದಿನ ಮುಖ್ಯಾಧಿಕಾರಿ ಮತ್ತು ಸದಸ್ಯರು ಸಾರ್ವಜನಿಕರಿಗೆ ಅರಿವು ಮೂಡಿಸಲು ಎಲ್ಲ ವಾರ್ಡ್‍ಗಳಲ್ಲಿ ಬೀದಿ ನಾಟಕ ಹಮ್ಮಿಕೊಂಡಿದ್ದರು. ಇದರ ಬಾಪ್ತು 79 ಸಾವಿರ ರೂ. ಈ ಮೊದಲೇ ಪಾವತಿಯಾಗಿದೆ. ಆ ಸಂದರ್ಭದಲ್ಲಿ ಗ್ರೀನ್ ಸಂಸ್ಥೆಯ 25 ಮಂದಿ ಕಲಾವಿದರಿಗೆ 3 ದಿನದ ಎರಡು ಹೋಟೆಲ್‍ಗಳ ಊಟದ ಬಾಪ್ತು ಮತ್ತು ಬಕೇಟ್ ಸೇರಿದಂತೆ ವಿವಿಧ ಸಲಕರಣೆಗಳಿಗೆ 30 ಸಾವಿರ ಖರ್ಚಾಗಿತ್ತು. ಇದನ್ನು ಆ ಸಂಸ್ಥೆ ಪಾವತಿಸಬೇಕಾಗಿತ್ತು. ಮುಂದಿನ ಬಿಲ್ ನೀಡಿದಾಗ ಹೋಟೆಲ್ ಮತ್ತಿತರ ಬಿಲ್ ಪಾವತಿಸುವುದಾಗಿ ಸಂಸ್ಥೆಯ ಕೆಲಸಗಾರ ಮಹದೇವಸ್ವಾಮಿ ತಿಳಿಸಿದ್ದರಿಂದ ಆ ಹಣವನ್ನು ತನ್ನ ಪತಿ ಇಮ್ತಿಯಾಝ್ ಪಾವತಿಸಿದ್ದರು. ಆ 30 ಸಾವಿರ ರೂ. ಹಣದಲ್ಲಿ 10 ಸಾವಿರ ಮುಂಗಡವಾಗಿ ಚೆಕ್ ಮೂಲಕ ಕೊಡುವುದಾಗಿ ಸಂಸ್ಥೆಯವರು ತಿಳಿಸಿದಾಗ, ಚೆಕ್ ಬೇಡ. ಹಣವೇ ನೀಡುವಂತೆ ತಿಳಿಸಿದ್ದೆ. ಅದನ್ನೇ ಸಂಸ್ಥೆಯ ಕೆಲಸಗಾರ ಮಹದೇವಸ್ವಾಮಿ ವೀಡಿಯೋ ಮತ್ತು ದೂರವಾಣಿ ಕರೆ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಮಾಧ್ಯಮಗಳಿಗೆ ಒಪ್ಪಿಸಿದ್ದಾರೆ. ಅವರಿಂದ ನಾನು ಅಥವಾ ನನ್ನ ಪತಿ ಇಮ್ತಿಯಾಜ್ ಲಂಚ ಪಡೆದಿಲ್ಲ ಎಂದು ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದರು.
ಕೆಲ ತಿಂಗಳ ಹಿಂದೆ ಪಟ್ಟಣದ ಕುಡಿಯುವ ನೀರು ಕಲುಷಿತಗೊಂಡಿದೆ ಎಂಬ ದೂರಿನ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನೀಡಿದ ಆದೇಶದಂತೆ ಬೀಜವಳ್ಳಿಯ ಸುಂಡೆಕೆರೆ ಹಳ್ಳದ ಬದಿಯ ಪ.ಪಂ.ಯ ಕುಡಿಯುವ ನೀರಿನ ಬಾವಿಯಲ್ಲಿ ತುಂಬಿದ್ದ 9 ಅಡಿ ಹೂಳು ತೆಗೆಯಲು ಸ್ವಚ್ಛ ಅಭಿಯಾನದ ಹಣ ಬಳಸಲು ತೀರ್ಮಾನಿಸಲಾಗಿತ್ತು. ಆದರೆ ಅದನ್ನು ಬಳಸಿಲ್ಲ. ಕೆಲ ಸಣ್ಣಪುಟ್ಟ ಪರಿಕರಿಗಳಿಗಷ್ಟೆ ಹಣವನ್ನು ವ್ಯಯಿಸಲಾಗಿದೆ. ತನ್ನ ಏಳಿಗೆಯನ್ನು ಸಹಿಸದ ವಿಪಕ್ಷದ ಸದಸ್ಯರ ಆರೋಪದಲ್ಲಿ ಹುರುಳಿಲ್ಲ. ವಿಪಕ್ಷಗಳ ತಾಳಕ್ಕೆ ತಕ್ಕಂತೆಮೈಸೂರಿನ ಗ್ರೀನ್ ಸಂಸ್ಥೆ ಕೆಲಸಗಾರ ಮಹದೇವಸ್ವಾಮಿ ಕುಣಿದಿದ್ದಾರೆ. ಆತನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ ಅವರು, ಇಂತಹ ಆರೋಪದಿಂದ ತಾನು ಕುಂದುವುದಿಲ್ಲ. ಪಟ್ಟಣದ ಅಭಿವೃದ್ಧಿ ಕೆಲಸ ಮುಂದುವರೆಸುತ್ತೇನೆ. ಸ್ವಚ್ಛತೆ ಬಗ್ಗೆ ತಾನು ಹಾಗೂ ಪತಿ ಇಂತಿಯಾಜ್ ಬೆಳಗ್ಗೆ 5 ಗಂಟೆಯಿಂದ ಪಟ್ಟಣದಾಧ್ಯಂತ ತಿರುಗಾಡಿ ಕಾರ್ಮಿಕರಿಗೆ ಸಾಥ್ ನೀಡುತ್ತಿದ್ದೇವೆ. ಈಗಾಗಲೇ ಪ.ಪಂ.ಗೆ 3 ಆಟೋ, 1 ಜೆಸಿಬಿ ಖರೀದಿಸಿ ಸ್ವಚ್ಛತೆಗೆ ಬಳಸಲಾಗಿದೆ. ಅಲ್ಲದೆ ಟಿಪ್ಪರ್ ಖರೀದಿಗೆ ಮುಂದಾಗಿದ್ದೇವೆ. ಪಟ್ಟಣದ ಎಲ್ಲಾ ರಸ್ತೆಗಳಿಗೆ ಕಾಂಕ್ರೆಟೀಕರಣ ಮಾಡಲಾಗಿದೆ. ಕುಡಿಯುವ ನೀರು, ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಪಟ್ಟಣದ ಜನತೆಗೆ ತಾನು ಯಾವುದೇ ಮೋಸ ಮಾಡಿಲ್ಲ ಎಂದು ತಿಳಿಸಿದರು.