ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಮಹಿಳೆಯರು ಸಂಘಟಕರಾಗಬೇಕು: ಹೆಚ್.ಸಿ ರುದ್ರಪ್ಪ

Update: 2018-03-16 17:19 GMT

ಕೋಲಾರ, ಮಾ.16: ಬಿಹಾರ ರಾಜ್ಯದಲ್ಲಿ ಮಹಿಳೆಯರೆಲ್ಲಾ ಸೇರಿ ಸಂಘಟನೆ ರೂಪಿಸಿಕೊಂಡು ಸರ್ಕಾರದ ಮೇಲೆ ಒತ್ತಡ ತಂದು ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧ ಮಾಡಿದರು. ಅದೇ ರೀತಿ ರಾಜ್ಯದಲ್ಲಿ ಮಹಿಳೆಯರು ಸಂಘಟಿತರಾದಲ್ಲಿ ಸಂಪೂರ್ಣವಾಗಿ ಮದ್ಯಪಾನ ನಿಷೇಧ ಮಾಡಿಸಬಹುದಾಗಿದೆ. ಮಹಿಳೆಯರು ಮನಸ್ಸು ಮಾಡಿದರೆ ಕುಟುಂಬ ಹಾಗೂ ಸಮಾಜವನ್ನು ಉತ್ತಮ ದಾರಿಯಲ್ಲಿ ನಡೆಸಬಹುದು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಹೆಚ್.ಸಿ. ರುದ್ರಪ್ಪ ಅಭಿಪ್ರಾಯಪಟ್ಟರು. 

ಇಂದು ಬಂಗಾರಪೇಟೆಯ ಶಮ್ಸ್ ಶಾದಿ ಮಹಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಿಲ್ಲಾಡಳಿತ ಕೋಲಾರ, ಡಾ. ಬಿಆರ್ ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ತಿಪಟೂರು ತುಮಕೂರು ಜಿಲ್ಲೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸು ಪರಿವರ್ತನೆ ಮಾಡುವ ಮೂಲಕ ಮದ್ಯಪಾನವನ್ನು ಬಿಡಿಸಬಹುದಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ 80 ಸಾವಿರ ಜನರನ್ನು ಮದ್ಯಪಾನದಿಂದ ಬಿಡಿಸಿದ್ದಾರೆ ಎಂದರು. 

ಬಂಗಾರಪೇಟೆ ವಿಧಾನಸಭೆಯ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿಯವರು ಮಾತನಾಡಿ, ಮದ್ಯಪಾನ ಹಾಗೂ ಧೂಮಪಾನದಿಂದ ಮನುಷ್ಯ ಹೆಚ್ಚು ಹೆಚ್ಚು ಖಾಯಿಲೆಗಳಿಗೆ ತುತ್ತಾಗಿ ಬೇಗ ಸಾವನ್ನಪ್ಪುತ್ತಾನೆ. ಇದು ಒಂದು ಸ್ವಯಂ ಕೃತ ಅಪರಾಧ. ಪ್ರತಿಯೊಬ್ಬ ಮನುಷ್ಯನಿಗೂ ನಿರ್ದಿಷ್ಟ ಆಯಸ್ಸು ಇರುತ್ತದೆ. ಆದರೆ ದುಷ್ಚಟಗಳಿಗೆ ಬಲಿಯಾಗಿ ಅವರ ಆಯಸ್ಸನ್ನು ಕಳೆದುಕೊಳ್ಳುತ್ತೇವೆ. ಇಂದು ಯುವಶಕ್ತಿ ಹೆಚ್ಚಾಗಿ ಈ ದುಷ್ಚಟಗಳಿಗೆ ದಾಸರಾಗುತ್ತಿರುವುದು ವಿಷಾದಕರ. ಹೆಣ್ಣು ಮಕ್ಕಳು ತಮ್ಮ ಮನೆಯ ಗಂಡಸರಿಗೆ ಕುಡಿಯದಂತೆ ತಾಕೀತು ಮಾಡಬೇಕು. ಕುಡಿತದಿಂದ ಕುಟುಂಬದ ನೆಮ್ಮದಿ ಹಾಳಾಗುವುದಲ್ಲದೆ ಆರ್ಥಿಕವಾಗಿ ಹಿಂದುಳಿಯುತ್ತಾರೆ. ಧೂಮಪಾನ ಮದ್ಯಪಾನ ಹಾಗೂ ಗುಟ್ಕಾ ಅಗೆಯುವುದರಿಂದ ಕಾನ್ಸರ್ ರೋಗಕ್ಕೆ ತುತ್ತಾಗುತ್ತಾರೆ ಎಂದು ಮಾಹಿತಿ  ನೀಡಿದರು. 

ಮದ್ಯಕ್ಕೆ ಮತ ಮಾರಿಕೊಳ್ಳಬೇಡಿ
ವಾರ್ತಾ ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಮಾತನಾಡಿ, ಇನ್ನೆರಡು ತಿಂಗಳಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆ ಬರುತ್ತಿದೆ. ಈ ಸಂದರ್ಭದಲ್ಲಿ ಮದ್ಯದ ಆಸೆಗೆ ನಿಮ್ಮ ಆಮೂಲ್ಯವಾದ ಮತವನ್ನು ಮಾರಿಕೊಳ್ಳಬೇಡಿ. ನಿಮ್ಮ ವಿವೇಚನೆ ಬಳಸಿ ಅಭಿವೃದ್ಧಿಪರ ಉತ್ತಮ ಆಡಳಿತಕ್ಕಾಗಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನಿಮ್ಮ ಮತವನ್ನು ನೀಡಿ. ಅರ್ಹ ಮತದಾರೆಲ್ಲರೂ ತಪ್ಪದೆ ಮತ ಚಲಾಯಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿ ನಿಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಮತ ಚಲಾಯಿಸಬೇಡಿ ಎಂದು ಕಿವಿಮಾತು ಹೇಳಿದ ಅವರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ಸುಮಾರು 200 ಜನ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿ ಪ್ರತಿಜ್ಞಾವಿಧಿಯಂತೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕೋರಿದರು. 

ಜೀವನದ ನಿಜವಾದ ಮೌಲ್ಯಗಳು ಕುಟುಂಬದಿಂದ ಆರಂಭವಾಗುತ್ತವೆ. ಕುಟುಂಬದಲ್ಲಿ ಉತ್ತಮ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಅವರನ್ನು ಸಮಾಜದ ಆಸ್ತಿಗಳನ್ನಾಗಿ ಮಾಡಬೇಕು. ಹದಿ ಹರೆಯವು ಚಂಚಲವಾದ ಮನಸ್ಸನ್ನು ಹೊಂದಿರುತ್ತದೆ. ಈ ವಯಸ್ಸಿನಲ್ಲಿ ಒಳ್ಳೆಯ ಅಥವಾ ಕೆಟ್ಟ ಹಾದಿಯನ್ನು ಹಿಡಿಯುವ  ಸಂಭವವಿರುತ್ತದೆ. ಈ ಸಂದರ್ಭದಲ್ಲಿ ಪೋಷಕರು, ಗುರುಗಳು ಉತ್ತಮ ಮಾರ್ಗದರ್ಶಗಳನ್ನು ನೀಡಿ ಒಳ್ಳೆಯ ಹಾದಿಯ ಆಯ್ಕೆಗೆ ಪ್ರೇರೆಪಿಸಬೇಕು. ಮನೆಯೊಳಗೆ ಉತ್ತಮ ವಾತಾವರಣ ಮೂಡಿಸಿದಲ್ಲಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕೋಲಾರದ ನಿರ್ದೇಶಕರಾದ ಸೈಯದ್ ರಫೀ, ಮಹಿಳಾ ದೌರ್ಜನ್ಯ ತಡೆ ಸಮಿತಿಯ ರಾಜ್ಯಾಧ್ಯಕ್ಷರಾದ ಅವನಿಕ ನಾಗರತ್ನ, ಧರ್ಮಸ್ಥಳ ಗ್ರಾಮೀಣಭಿವೃದ್ಧಿಯ ಯೋಜನಾಧಿಕಾರಿಗಳಾದ ರಾಮಕೃಷ್ಣ, ಪುರಸಭೆಯ ಉಪಾಧ್ಯಕ್ಷರಾದ ಆರೋಗ್ಯರಾದ್ಯನ್ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಯಾದ ಜಯದೇವಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News