ಭೂ ಮಂಜೂರಾತಿ ಅವ್ಯವಹಾರದಲ್ಲಿ ಶಾಸಕ ವರ್ತೂರ್ ಪ್ರಕಾಶ್ ಭಾಗಿ: ಆರೋಪ

Update: 2018-03-16 17:20 GMT

ಕೋಲಾರ,ಮಾ.16: ಕೋಲಾರ ವಿಧಾನಸಭಾ ಕ್ಷೇತ್ರದ ಪಕ್ಷೇತ್ರ ಶಾಸಕ ವರ್ತೂರ್ ಪ್ರಕಾಶ್ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಹಣ ಪಡೆದು ಸರ್ಕಾರಿ ಜಮೀನುಗಳನ್ನು ಉಳ್ಳವರಿಗೆ ಮಂಜೂರು ಮಾಡಿಸಿದ್ದಾರೆ. ಈ ಅಕ್ರಮ ಅವ್ಯವಹಾರದಲ್ಲಿ ಭಾರಿ ಮೊತ್ತದ ಹಣವನ್ನು ತಮ್ಮ ಪಟಾಲಮ್‍ಗಳ ಮೂಲಕ ಪಡೆದಿದ್ದು ಈ ಹಗರಣದಲ್ಲಿ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆಂದು ಕೆಪಿಸಿಸಿ ಕಾರ್ಯದರ್ಶಿ ಅನಿಲ್ ಕುಮಾರ್ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾಗೋಷ್ಟಿ ನಡೆಸಿದ ಅನಿಲ್‍ಕುಮಾರ್, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಭೂ ಮಂಜೂರಾತಿಯಲ್ಲಿ ಕಾನೂನು ಬಾಹಿರ ಮಂಜೂರಾತಿ ನಡೆದಿದೆ. ಶಾಸಕ ವರ್ತೂರ್ ಪ್ರಕಾಶ್ ಆಪ್ತ ಬೆಗ್ಲಿ ಸೂರ್ಯ ಪ್ರಕಾಶ್ ಬುಗರ್ ಹುಕ್ಕುಂ ಸಾಗುವಳಿ ಮಂಜೂರಾತಿಯ ಅಧ್ಯಕ್ಷರಾಗಿ ಅಕ್ರಮ ನಡೆಸಿದ್ದಾರೆಂದು ಆರೋಪಿಸಿದರು. ಬಡವರಿಗೆ ಹಾಗೂ ಭೂಮಿ ಇಲ್ಲದವರಿಂದ ಕಾನೂನಿನ ಪ್ರಕಾರ ಅರ್ಜಿ ಪಡೆದು ಭೂಮಿ ಮಂಜೂರು ಮಾಡಬೇಕು. ಆದರೆ ಕೋಲಾರ ತಾಲ್ಲೂಕಿನ ನರಸಾಪುರ, ವೇಮಗಲ್, ಕೋಲಾರ ಗ್ರಾಮಾಂತರ ಹೋಬಳಿಯ ಹತ್ತಾರು ಗ್ರಾಮಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಜಮೀನನ್ನು ಮಂಜೂರು ಮಾಡಲಾಗಿದೆ. ಜಮೀನು ಮಂಜೂರು ಮಾಡುವಾಗ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದು, ಈ ಅಕ್ರಮ ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದಾರೆಂದು ಆರೋಪಿಸಿದರು. ಈ ಅಕ್ರಮದಲ್ಲಿ ಕೋಲಾರದ ಹಿಂದಿನ ತಹಸೀಲ್ದಾರ್ ವಿಜಯಣ್ಣ ಸಹ ಶಾಮೀಲಾಗಿದ್ದಾಋಎ ಎಂದು ಆರೋಪಿಸಿ ಕೂಡಲೇ ಅಕ್ರಮ ಮಂಜೂರಾತಿಯನ್ನು ರದ್ದು ಪಡಿಸಬೇಕು ಹಾಗೂ ಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಮೊದಲು ಕೋಲಾರ ತಹಸೀಲ್ದಾರ್ ಆಗಿದ್ದ ವಿಜಯಣ್ಣ ಗ್ರೇಡ್-2 ವರ್ಗಕ್ಕೆ ಸೇರಿದವರಾಗಿದ್ದು, ಅವರು ಗ್ರೇಡ್-1 ತಹಸೀಲ್ದಾರ್ ಅಧಿಕಾರವನ್ನು ಚಲಾಯಿಸಿದ್ದಾರೆ. ವಿಜಯಣ್ಣ ನವರಿಗಿಂತ ಗ್ರೇಡ್-2 ತಹಸೀಲ್ದಾರ್ ನಾಗವೇಣಿ ಸೇವಾ ಹಿರಿತನ ಹೊಂದಿದ್ದಾರೆ. ಆದರೆ ಅಕ್ರಮಗಳನ್ನು ಮಾಡುವ ಉದ್ದೇಶದಿಂದ ವಿಜಯಣ್ಣನವರನ್ನು ತಹಶೀಲ್ದಾರರನ್ನಾಗಿ ನೇಮಕಾತಿ ಮಾಡಲಾಗಿತ್ತು. ಶಾಸಕ ವರ್ತೂರ್ ಪ್ರಕಾಶ್ ತಮ್ಮ ಪ್ರಭಾವ ಬೀರಿ ವಿಜಯಣ್ಣನವರನ್ನು ತಹಸೀಲ್ದಾರರನ್ನಾಗಿ ನೇಮಕ ಮಾಡಿಸಿದರು. ಶಾಸಕ ವರ್ತೂರ್ ಪ್ರಕಾಶ್ ಮತ್ತು ಬೆಗ್ಲಿಸೂರ್ಯ ಪ್ರಕಾಶ್ ನಡೆಸಿದ ಈ ಅಕ್ರಮದಲ್ಲಿ ವಿಜಯಣ್ಣ ನೇರವಾಗಿ ಭಾಗಿಯಾಗಿದ್ದಾರೆ. ಎಲ್ಲಾ ಭೂ ಮಂಜೂರಾತಿಯನ್ನು ರದ್ದುಪಡಿಸುವ ಜೊತೆಗೆ ಕಡತಗಳನ್ನು ಕೂಡಲೇ ವಶ ಪಡಿಸಿಕೊಳ್ಳುವಂತೆ ಅನಿಲ್‍ಕುಮಾರ್ ಒತ್ತಾಯಿಸಿದರು.

ಈ ಸಂಬಂಧ ದಾಖಲೆಗಳನ್ನು ನೀಡುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಇದುವರೆಗೂ ದಾಖಲೆ ನೀಡಿಲ್ಲ ಎನ್ನಲಾಗಿದೆ.  ರಾಜಕೀಯ ಪಕ್ಷಗಳ ಕೆಸರೆರೆಚಾಟ ಪ್ರಾರಂಭಗೊಂಡಿದ್ದು, ಇದರಲ್ಲಿ ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News