ಯುಗಾದಿ ಹಬ್ಬದ ಕೊಡುಗೆಯಾಗಿ ಕೆರೆಗಳಿಗೆ ನೀರು ಹರಿಸಿದ ಸರ್ಕಾರ: ಗೀತಾ ಮಹದೇವಪ್ರಸಾದ್

Update: 2018-03-16 17:26 GMT

ಗುಂಡ್ಲುಪೇಟೆ,ಮಾ.16: ತಾಲೂಕಿನ ರೈತರ ಕಷ್ಟ ಅರಿತಿದ್ದ ಮಹದೇವಪ್ರಸಾದ್ ಎಲ್ಲಾ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ ರೂಪಿಸಿ ಕೆಲವು ಯೋಜನೆಗಳಿಗೆ ಚಾಲನೆ ನೀಡಿದ್ದರು ಎಂದು ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಹೇಳಿದರು.

ತಾಲೂಕಿನ ಬೆಳಚಲವಾಡಿ ಕೆರೆಗೆ ಹರಿದುಬರುತ್ತಿರುವ ನದಿಮೂಲದ ನೀರಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಪ್ರತಿ ವರ್ಷವೂ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದರಿಂದ ತಾಲೂಕಿನ ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸುವ ಯೋಜನೆ ರೂಪಿಸಿ ಚಾಲನೆ ನೀಡಿದ್ದರೂ ಯೋಜನೆಯು ಪೂರ್ಣಗೊಳ್ಳುವ ಮೊದಲೇ ಮಹದೇವಪ್ರಸಾದ್ ಅಕಾಲಿಕ ನಿಧನಹೊಂದಿದರು. ಮೊದಲ ಹಂತದಲ್ಲಿ ಹುತ್ತೂರು ಕೆರೆಗೆ ನೀರು ತುಂಬಿಸಿ ಅಲ್ಲಿಂದ ವಡ್ಡಗೆರೆ ಮಾರ್ಗವಾಗಿ ಕರಕಲಮಾದಹಳ್ಳಿ, ಯರಿಯುರು, ಬೊಮ್ಮಲಾಪುರ, ವಡೆಯನಪುರ, ಕಲ್ಲುಕಟ್ಟೆಹಳ್ಳ, ವಿಜಯಪುರ ಕೆರೆಗಳಿಗೆ ನೀರು ತುಂಬಲಿದೆ. ಎರಡನೇ ಹಂತದಲ್ಲಿ  ಬೇಗೂರು ಹೋಬಳಿಯ ಕೆರೆಗಳಿಗೆ ಗಾಂಧೀ ಗ್ರಾಮದಿಂದ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ಇದರ ಅನುಷ್ಟಾನಕ್ಕೆ ಇದ್ದ ಅಡ್ಡಿಗಳನ್ನು ನಿವಾರಿಸಲು ಅಧಿಕಾರಿಗಳ ಜತೆಗೂಡಿ ಹಗಲಿರುಳು ಶ್ರಮಿಸಿದ್ದರು. ಇದರಿಂದ ನಂಜನಗೂಡು ತಾಲೂಕಿನ ಎಲಚಗೆರೆ, ಕೂಗಲೂರು, ಸಿಂಧವಳ್ಳಿಪುರ, ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ, ತೊಂಡವಾಡಿ, ಬೆಳಚಲವಾಡಿ, ಕಮರಹಳ್ಳಿ, ಎರಡನೇ ಹಂತದಲ್ಲಿ ರಾಘವಾಪುರ, ಹಳ್ಳದಮಾದಹಳ್ಳಿ, ಅಗತಗೌಡನಹಳ್ಳಿ, ಗರಗನಹಳ್ಳಿ,ಮಳವಳ್ಳಿ ಕೆರೆಗಳು ತುಂಬಲಿವೆ ಎಂದರು.

ಉಪಚುನಾವಣೆ ಸಂದರ್ಭದಲ್ಲಿ ತಾವು ಜನತೆಗೆ ನೀಡಿದ್ದ ಭರವಸೆಯಂತೆ ಗೆಲುವು ಸಾಧಿಸಿದ 300 ದಿನಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದು ನನಗೆ ತೃಪ್ತಿ ತಂದಿದೆ. ಬಹು ನಿರೀಕ್ಷಿತ ಯೋಜನೆಗಳ ಜಾರಿಗೆ ಎಲ್ಲಾ ಅಧಿಕಾರಿಗಳೂ ಹಗಲಿರುಳು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂಜನಗೂಡು ತಾಲೂಕಿನ ಹುರಾ ಏತ ನೀರಾವರಿ ಯೋಜನೆಯಿಂದ ಕಾಡಂಚಿನ ಚನ್ನವಡೆಯನಪುರ, ಕೋಟೆಕೆರೆ, ರಂಗೂಪುರ ಗ್ರಾಮದ ಕೆರೆಗಳಿಗೂ ನೀರು ತುಂಬಿಸಲು ಯೋಜನೆ ರೂಪಿಸಲಾಗಿದ್ದು ನಲ್ಲೂರು ಅಮಾನಿಕೆರೆಗೆ ನೀರು ತುಂಬಿಸಲು ಸರ್ವೇ ನಡೆಸಿ  ಡಿ.ಪಿ.ಆರ್. ಸಿದ್ದಪಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ, ತಾಪಂ ಅಧ್ಯಕ್ಷ ಜಗದೀಶ ಮೂರ್ತಿ, ಸದಸ್ಯರಾದ ಎಸ್.ಎಸ್.ಮಧುಶಂಕರ್, ತಾಯಮ್ಮ, ಗ್ರಾಮಪಂಚಾಯಿತಿ ಅಧ್ಯಕ್ಷ ಚೇತನ್, ಜಿಪಂ ಸದಸ್ಯರಾದ ರತ್ನಮ್ಮ ಶ್ರೀಕಂಠಪ್ಪ, ಬಿ.ಕೆ.ಬೊಮ್ಮಯ್ಯ, ಪಿ.ಚನ್ನಪ್ಪ, ಸಣ್ಣನೀರಾವರಿ ಇಲಾಖೆಯ ಎಂಜಿನಿಯರ್‍ಗಳಾದ ರಾಜೇಂದ್ರಪ್ರಸಾದ್, ಮರಿಸ್ವಾಮಿ ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News