ಮನುಷ್ಯನಲ್ಲಿ ಪ್ರೀತಿ ವಿಶ್ವಾಸ ಇಲ್ಲದಿದ್ದರೆ ಧರ್ಮಗಳ ಬಗ್ಗೆ ಮಂದಹಾಸ ಮೂಡಲು ಸಾಧ್ಯವಿಲ್ಲ: ನಿರ್ಮಲಾನಂದನಾಥ ಸ್ವಾಮೀಜಿ
ಮಂಡ್ಯ, ಮಾ.16: ಮನುಷ್ಯನಲ್ಲಿ ಪ್ರೀತಿ ವಿಶ್ವಾಸ ಇಲ್ಲದಿದ್ದರೆ ಧರ್ಮಗಳ ಬಗ್ಗೆ ಮಂದಹಾಸ ಮೂಡಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಹೇಳಿದ್ದಾರೆ.
ಮದ್ದೂರು ತಾಲೂಕು ಹನುಮಂತನಗರದ ಆತ್ಮಲಿಂಗೇಶ್ವರ ಕ್ಷೇತ್ರದ ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ ಶುಕ್ರವಾರ ನಡೆದ ಸರ್ವಧರ್ಮ ಸಮ್ಮೇಳನದ ದಿವ್ಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯನು ತಪ್ಪು ಕಲ್ಪನೆಯಿಂದ ಹೊರಬರಬೇಕು. ಪ್ರೀತಿ ವಿಶ್ವಾಸವನ್ನು ಗಳಿಸಬೇಕು. ಅಂತರಾಳದಲ್ಲಿರುವ ಕಲ್ಮಶವನ್ನು ಶುದ್ಧೀಕರಣಗೊಳಿಸಬೇಕು. ಶಾಂತಿ ಮತ್ತು ಸಹಬಾಳ್ವೆಯಿಂದ ಎಲ್ಲರೂ ಬದುಕಬೇಕು ಎಂದು ಅವರು ಕರೆ ನೀಡಿದರು.
ಜಗತ್ತಿನಲ್ಲಿ ಯಾವುದೇ ಪ್ರತ್ಯೇಕ ಧರ್ಮವಿಲ್ಲ. ಎಲ್ಲವೂ ಮನುಷ್ಯ ಸೃಷ್ಠಿಮಾಡಿಕೊಂಡಿದ್ದಾನೆ. ಪ್ರಪಂಚದಲ್ಲಿ ಇರುವುದು ಒಂದೇ ಧರ್ಮ. ಮಾಜಿ ಸಂಸದ ಜಿ.ಮಾದೇಗೌಡರು ಸರ್ವ ಧರ್ಮ ಸಮ್ಮೇಳನ ಮಾಡಿರುವುದು ಶ್ಲಾಘನೀಯ ಎಂದರು.
ಮೈಸೂರಿನ ಉರಿಲಿಂಗ ಪೆದ್ದಿ ಮಹಾಸಂಸ್ಥಾನ ಮಠದ ಜ್ಞಾನಪ್ರಕಾಶ್ ಮಹಾಸ್ವಾಮಿ ಮಾತನಾಡಿ, ಆಕಾರದಲ್ಲಿ ಮನುಷ್ಯರಾಗದೇ ಆಚಾರಗಳಲ್ಲಿ ಮನುಷ್ಯರಾಗಬೇಕು. ಮನುಷ್ಯನಿಗೆ ಯಾವುದೇ ಜಾತಿ ಧರ್ಮವಿಲ್ಲ. ಆದರೂ ಸಹ ಸ್ವಾಥಕ್ಕಾಗಿ ಅವುಗಳು ಕಾರ್ಯರೂಪದಲ್ಲಿವೆ ಎಂದು ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ ಡಾ.ಜಿಮಾದೇಗೌಡ ಮಾತನಾಡಿ, ಜಾತಿ, ಧರ್ಮಗಳಲ್ಲಿ ವಿಷ ಬೀಜ ಬಿತ್ತುವ ಕೆಲಸದಿಂದ ಜಗತ್ತು ವಿನಾಶದ ಅಂಚಿಗೆ ತಲುಪುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯಾದಗಿರಿ ಜಿಲ್ಲೆಯ ಸಹಪುರದ ವಿಶ್ವಕರ್ಮ ಏಕದಂಡಿಗ ಮಠದ ಸರಸ್ವತಿ ಪೀಠದ ಕಾಳಅತ್ಯೇಂದ್ರ ಮಹಾಸ್ವಾಮಿ, ಬೆಂಗಳೂರು ಮಹಾಭೋದಿ ಬ್ರಹ್ಮತಿಷ್ಠಾಚಾರ್ಯ, ಹಿರಿಯೂರು ಆದಿಜಾಂಬವ ಮಠದ ಷಡಕ್ಷರಮುನಿ ಮಹಾಸ್ವಾಮಿ, ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮದ್ ಕುನ್ಹಿ ಮಾತನಾಡಿದರು. ವಿವಿಧ ಮಠಾಧೀಶರು ಹಾಗೂ ಮಾಜಿ ಶಾಸಕ ಮಧು ಜಿ.ಮಾದೇಗೌಡ ಉಪಸ್ಥಿತರಿದ್ದರು.