ಪ್ರತ್ಯುತ್ತರ ನೀಡಿದ್ದಾರೆಯೇ ಹೊರತು ಟೀಕಿಸಿಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಚೆಲುವರಾಯಸ್ವಾಮಿ ಸಮರ್ಥನೆ
ಮದ್ದೂರು, ಮಾ.16: ಯಡಿಯೂರಪ್ಪ ಅವರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದ್ದಾರೆಯೇ ಹೊರತು, ಅನಾವಶ್ಯಕವಾಗಿ ಯಡಿಯೂರಪ್ಪ ಅವರನ್ನು ಟೀಕಿಸಿಲ್ಲವೆಂದು ಜೆಡಿಎಸ್ ಬಂಡಾಯ ಶಾಸಕ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂಬ ಪದ ಬಳಕೆ ಕುರಿತಂತೆ ಹೈಕೋರ್ಟ್ ಸಿದ್ದರಾಮಯ್ಯ ಅವರಿಗೆ ನೀಡಿರುವ ನೊಟೀಸ್ ಬಗ್ಗೆ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಚಲುವರಾಯಸ್ವಾಮಿ ಈ ರೀತಿ ಪ್ರತಿಕ್ರಿಯಸಿದರು. ಆಧಾರವಿಲ್ಲದೆ, ಅನಾವಶ್ಯಕವಾಗಿ ಯಡಿಯೂರಪ್ಪ ಸಿದ್ದರಾಮಯ್ಯ ಅವರನ್ನು ಭ್ರಷ್ಟರು ಎಂದು ಟೀಕೆ ಮಾಡಿದ್ದಕ್ಕೆ ಅಷ್ಟೇ ತೀಷ್ಣವಾಗಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡದಂತೆ ಜೆಡಿಎಸ್ ಬಂಡಾಯ ಶಾಸಕರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಎಚ್.ಡಿ.ದೇವೇಗೌಡರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ದೊಡ್ಡವರು ಅವರಿಗಿಷ್ಟ ಬಂದಂತೆ ಮಾಡಿಕೊಳ್ಳಲಿ ಎಂದರು.
ಶಾಸಕನಾಗಿ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಂಡಿದ್ದು ಮುಂಬರುವ ಚುನಾವಣೆಯಲ್ಲಿ ಮತ್ತೆ ಜನರು ಆಯ್ಕೆ ಮಾಡಲಿದ್ದಾರೆಂಬ ವಿಶ್ವಾಸವಿದೆ. ಮಾ.25 ರಂದು ಜಿಲ್ಲೆಗೆ ಬರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತೇನೆ ಎಂದು ಅವರು ತಿಳಿಸಿದರು.