ಮಾಜಿ ಮುಖ್ಯಮಂತ್ರಿಗಳ ಟ್ವಿಟರ್ ರಾಜಕಾರಣ

Update: 2018-03-17 04:26 GMT

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ವಿವಿಧ ಪಕ್ಷಗಳೊಳಗಿನ ಕಾವು ಬೇಸಿಗೆಯ ಬಿಸಿಲಿನ ಜೊತೆಗೆ ಸ್ಪರ್ಧೆಗಿಳಿಯ ತೊಡಗಿವೆ. ಈ ಬೇಗೆಗೆ ಪಕ್ಷಗಳ ನಾಯಕರು ಕುಳಿತಲ್ಲೇ ಕನಲತೊಡಗಿದ್ದಾರೆ. ಬಿಜೆಪಿಯೊಳಗಿನ ತಳಮಳಗಳು ಈಗಾಗಲೇ ಮಾಧ್ಯಮಗಳಲ್ಲಿ ಹರಾಜಾಗಿದ್ದರೆ, ಕಾಂಗ್ರೆಸ್‌ನ ಒಳಗಿನ ಒಳಕುದಿಗಳು ನಿಧಾನಕ್ಕೆ ಹೊರಬೀಳತೊಡಗಿವೆ. ಬಿಜೆಪಿಯ ಮುಖಂಡರಾದ ಯಡಿಯೂರಪ್ಪ ಗುರುವಾರ ಸಾಮಾಜಿಕ ತಾಣದಲ್ಲಿ ‘‘ನಾಳೆ ಸಂಜೆ ಕಾದು ನೋಡಿ-ಬ್ರೇಕಿಂಗ್ ಸುದ್ದಿಯನ್ನು ಕೊಡುವೆ’’ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದರು. ಭಾರೀ ಮಿಕವೊಂದು ಯಡಿಯೂರಪ್ಪರ ಬಲೆಗೆ ಬಿದ್ದಿದ್ದು, ಅದನ್ನು ಶುಕ್ರವಾರ ಸಂಜೆ ಬಹಿರಂಗಪಡಿಸುವ ಮೂಲಕ, ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಹೊಸ ತಿರುವು ನೀಡುತ್ತಾರೆ ಎಂದೇ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದರು. ಸ್ಫೋಟಿಸುವ ಬಾಂಬ್‌ಗೆ ಛಿದ್ರವಾಗಿ ಬೀಳಲಿರುವ ಕಾಂಗ್ರೆಸ್‌ನ ನಾಶ ನಷ್ಟಗಳನ್ನು ಬರೆಯಲು ಕೆಲವು ಪತ್ರಕರ್ತರೂ ತುದಿಗಾಲಲ್ಲಿ ಕಾಯುತ್ತಿದ್ದರು. ಆದರೆ ಶುಕ್ರವಾರ ಸಂಜೆ ಐದು ಗಂಟೆಯಾದರೂ ಯಡಿಯೂರಪ್ಪ ಬಾಂಬ್ ಸಿಡಿಯಲಿಲ್ಲ. ತೀರಾ ತಡವಾಗಿ ಯಡಿಯೂರಪ್ಪ ಕಡೆಯಿಂದ ‘ಟುಸ್’ ಎಂಬ ಶಬ್ದವಷ್ಟೇ ಹೊರಟಿತು.

ಆ ಸದ್ದಿನಿಂದ ಯಡಿಯೂರಪ್ಪರ ಬಾಂಬ್ ಟುಸ್ಸಾಗಿರುವುದು ಬಿಜೆಪಿ ಕಾರ್ಯಕರ್ತರಿಗೆ ಮನವರಿಕೆಯಾಯಿತು. ಬಿಜೆಪಿಯ ಪರಿವರ್ತನಾ ಯಾತ್ರೆಯ ವೈಫಲ್ಯದ ಹತಾಶೆಯ ಗಾಯಗಳಿಗೆ ಈ ಮೂಲಕ ಯಡಿಯೂರಪ್ಪ ಬರೆ ಎಳೆದಂತಾಗಿದೆ. ತಮ್ಮ ‘ಬ್ರೇಕಿಂಗ್ ನ್ಯೂಸ್’ ಮೂಲಕ ಯಡಿಯೂರಪ್ಪ ಸುದ್ದಿಯಾಗುತ್ತಿದ್ದಂತೆಯೇ ಅತ್ತ ಕಾಂಗ್ರೆಸ್‌ನಲ್ಲಿ ವೀರಪ್ಪ ಮೊಯ್ಲಿ ತಾನೇನು ಕಮ್ಮಿಯಿಲ್ಲ ಎಂದು ಪಕ್ಷದ ವಿರುದ್ಧ ಟ್ವೀಟಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಹಣದ ಅವ್ಯವಹಾರ ನಡೆಯುತ್ತಿದೆ ಎಂಬ ಅರ್ಥ ಬರುವ ಹೇಳಿಕೆಯನ್ನು ಟ್ವಿಟರ್‌ನಲ್ಲಿ ಹಾಕುವ ಮೂಲಕ ರಾಜ್ಯದ ನಾಯಕರನ್ನು ಮುಜುಗರಕ್ಕೆ ತಳ್ಳಿದರು. ತನ್ನ ಪುತ್ರ ಹರ್ಷ ಮೊಯ್ಲಿಗೆ ಟಿಕೆಟ್ ದೊರಕಿಸಲು ವಿಫಲರಾದ ಹತಾಶೆಯಲ್ಲಿ ವೀರಪ್ಪ ಮೊಯ್ಲಿ ಈ ಹೇಳಿಕೆಯನ್ನು ನೀಡಿ, ತನ್ನದೇ ಪಕ್ಷದ ಸಚಿವರೊಬ್ಬರ ವಿರುದ್ಧ ಟೀಕೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ವರಿಷ್ಠರ ಸೂಚನೆ ಬಂದ ಬಳಿಕ ಈ ಟ್ವಿಟರ್ ಹೇಳಿಕೆಯನ್ನು ನಿರಾಕರಿಸಿದ್ದಾರೆ, ಮಾತ್ರವಲ್ಲದೆ ತನ್ನ ಟ್ವಿಟರ್‌ನ್ನು ಹ್ಯಾಕ್ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಗುರುತಿಸಿಕೊಂಡಿರುವ ನಾಯಕರು ರಾಷ್ಟ್ರಮಟ್ಟದ ವರ್ಚಸ್ಸುಳ್ಳವರು. ಮಾಜಿ ಮುಖ್ಯಮಂತ್ರಿಗಳು ಬೇರೆ. ಗುರುವಾರ ಯಡಿಯೂರಪ್ಪ ದಿಲ್ಲಿಯ ವರಿಷ್ಠರನ್ನು ಭೇಟಿ ಮಾಡುವ ಸಂದರ್ಭದಲ್ಲಿ ‘ಬ್ರೇಕಿಂಗ್ ನ್ಯೂಸ್’ನ ಬೆದರಿಕೆಯನ್ನು ಹಾಕಿದ್ದರು. ಆದರೆ ಅವರು ಯಾರನ್ನು ಗುರಿಯಾಗಿಸಿ ಈ ಬೆದರಿಕೆಯನ್ನು ಹಾಕಿದ್ದಾರೆ ಎನ್ನುವುದು ಮತ್ತೆ ಚರ್ಚೆಗೊಳಗಾಗುತ್ತಿದೆ.

ಯಡಿಯೂರಪ್ಪ ಶುಕ್ರವಾರ ಸ್ಫೋಟಿಸಿದ ‘ಬ್ರೇಕಿಂಗ್ ನ್ಯೂಸ್’ನಲ್ಲಿ ಹೊಸತೇನೂ ಇದ್ದಿರಲಿಲ್ಲ. ಈ ಹಿಂದೆ ಬೇರೆ ಬೇರೆ ವೇದಿಕೆಗಳಲ್ಲಿ ಸಿದ್ದರಾಮಯ್ಯ ವಿರುದ್ಧ ಮಾಡಿದ್ದ ಟೀಕೆಗಳನ್ನೇ ಅವರು ಪುನರುಚ್ಚರಿಸಿದ್ದಾರೆ. ಹಾಗಾದರೆ ಯಡಿಯೂರಪ್ಪರ ಬಳಿಯಿದ್ದ ನಿಜವಾದ ‘ಬ್ರೇಕಿಂಗ್ ಸುದ್ದಿ’ ಏನಾಗಿದ್ದಿರಬಹುದು ಎನ್ನುವ ಪ್ರಶ್ನೆ ರೆಕ್ಕೆ ಪುಕ್ಕಗಳನ್ನು ಪಡೆದುಕೊಳ್ಳುತ್ತಿದೆ. ಅನಿವಾರ್ಯ ಎನ್ನುವ ಒಂದೇ ಕಾರಣಕ್ಕಾಗಿ ಯಡಿಯೂರಪ್ಪ ಬಿಜೆಪಿಯ ಪಾಲಿಗೆ ಇನ್ನೂ ಅಧ್ಯಕ್ಷರಾಗಿ ಉಳಿದಿದ್ದಾರೆ. ಯಡಿಯೂರಪ್ಪರನ್ನು ಕೈ ಬಿಟ್ಟರೆ, ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಸರಿಯಬಹುದು ಎನ್ನುವ ಆತಂಕ ದಿಲ್ಲಿಯ ವರಿಷ್ಠರದು. ಪಕ್ಷಾಧ್ಯಕ್ಷರಾಗಿದ್ದರೂ ರಾಜ್ಯದಲ್ಲಿ ಈಶ್ವರಪ್ಪ ಬಣ ಮತ್ತು ಆರೆಸ್ಸೆಸ್‌ನ ಮುಖಂಡ ಸಂತೋಷ್ ಬಣ ಯಡಿಯೂರಪ್ಪರ ಕಾಲೆಳೆಯುತ್ತಲೇ ಇವೆ.

ಚುನಾವಣೆ ಹತ್ತಿರವಾಗುತ್ತಿದಂತೆಯೇ ತನಗೆ ಟಿಕೆಟ್ ದೊರಕುವುದಿಲ್ಲ ಎಂಬ ವಾಸನೆ ಈಶ್ವರಪ್ಪರಿಗೆ ಬಡಿದಿದೆ. ಪರಿಣಾಮವಾಗಿ ಅವರು ಒಳಗೊಳಗೆ ಮತ್ತೆ ಬಿಜೆಪಿಯೊಳಗಿನ ಹಿಂದುಳಿದ ವರ್ಗಗಳನ್ನು ಯಡಿಯೂರಪ್ಪ ವಿರುದ್ಧ ಸಂಘಟಿಸತೊಡಗಿದ್ದಾರೆ. ಆರೆಸ್ಸೆಸ್ ಇದಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಿದೆ. ಇದೆಲ್ಲದರಿಂದ ರೊಚ್ಚಿಗೆದ್ದಿರುವ ಯಡಿಯೂರಪ್ಪ ದಿಲ್ಲಿಯ ವರಿಷ್ಠರಿಗೆ ಕೊನೆಯ ಅವಕಾಶ ನೀಡಿದ್ದಾರೆ. ಜೊತೆಗೆ ಪರೋಕ್ಷ ಬೆದರಿಕೆಯನ್ನು ಹಾಕಿದ್ದಾರೆ. ‘‘ಸಂತೋಷ್ ಮತ್ತು ಈಶ್ವರಪ್ಪ ಬಣದ ವಿರುದ್ಧ ಕಟ್ಟು ನಿಟ್ಟಾದ ಕ್ರಮ ಕೈಗೊಳ್ಳದೇ ಇದ್ದರೆ, ಶುಕ್ರವಾರ ಸಂಜೆ ತಾನು ಬಹಿರಂಗವಾಗಿ ಲಿಂಗಾಯತ ಸ್ವತಂತ್ರ ಧರ್ಮವನ್ನು ಬೆಂಬಲಿಸಲಿದ್ದೇನೆ. ಈಶ್ವರಪ್ಪ ಹಿಂದುಳಿದ ವರ್ಗವನ್ನು ಮುಂದಿಟ್ಟು ಕಿರುಕುಳ ನೀಡಿದರೆ ನಾನು ಲಿಂಗಾಯತ ಧರ್ಮದ ಜೊತೆಗೆ ನಿಲ್ಲಬೇಕಾಗುತ್ತದೆ’’ಎಂದು ವರಿಷ್ಠರಿಗೆ ಕೊನೆಯ ಎಚ್ಚರಿಕೆ ನೀಡಿದ್ದಾರೆ ಮಾತ್ರವಲ್ಲದೆ, ಟ್ವಿಟರ್‌ನಲ್ಲಿ ‘ಬ್ರೇಕಿಂಗ್ ನ್ಯೂಸ್’ ನೀಡಲಿದ್ದೇನೆ ಎಂದು ಹೇಳುವ ಮೂಲಕ ವರಿಷ್ಠರನ್ನು ಪೂರ್ಣ ಪ್ರಮಾಣದಲ್ಲಿ ಬೆವರಿಳಿಸಿದ್ದಾರೆ. ‘ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೆಂಬಲ’ ನೀಡುವುದೇ ಯಡಿಯೂರಪ್ಪ ಬ್ರೇಕಿಂಗ್ ನ್ಯೂಸಾಗಿತ್ತು ಎನ್ನುವುದು ಸದ್ಯಕ್ಕೆ ಬಿಜೆಪಿಯೊಳಗೆ ಹರಿದಾಡುತ್ತಿರುವ ವದಂತಿ. ಪರಿಸ್ಥಿತಿ ತೀರಾ ಕೈಜಾರುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ದಿಲ್ಲಿಯ ಮತ್ತು ರಾಜ್ಯದ ವರಿಷ್ಠರು, ಆರೆಸ್ಸೆಸ್ ಮುಖಂಡರು ಎಚ್ಚೆತ್ತುಕೊಂಡಿದ್ದಾರೆ.

‘ಲಿಂಗಾಯತ ಪ್ರತ್ಯೇಕ ಧರ್ಮ’ಕ್ಕೆ ಯಡಿಯೂರಪ್ಪ ಏನಾದರೂ ಬೆಂಬಲಕೊಟ್ಟರೆ ಅದು ಬಿಜೆಪಿಯ ಹಿಂದುತ್ವಕ್ಕೆ ಭಾರೀ ಆಘಾತ ನೀಡುತ್ತದೆ. ಆದುದರಿಂದ ವರಿಷ್ಠರು ತಕ್ಷಣ ಮಧ್ಯಪ್ರವೇಶಿಸಿ ಯಡಿಯೂರಪ್ಪರ ಮನವೊಲಿಸಿದ್ದಾರೆ ಮತ್ತು ಯಡಿಯೂರಪ್ಪ ವಿರೋಧಿ ಬಣಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ತನ್ನ ಕಾರ್ಯ ಸಾಧಿಸಿದ ಯಡಿಯೂರಪ್ಪ ಕೊನೆಯ ಕ್ಷಣದಲ್ಲಿ ಬ್ರೇಕಿಂಗ್ ನ್ಯೂಸನ್ನು ಬದಲಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಈ ಹಿಂದೆ ಮಾಡಿದ ಹಳೆ ಆರೋಪಗಳನ್ನೇ ಪುನರುಚ್ಚರಿಸಿ ಮಾಧ್ಯಮಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಇತ್ತ ವೀರಪ್ಪ ಮೊಯ್ಲಿಯ ಟ್ವಿಟರ್ ಕೂಡ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಹರ್ಷ ಮೊಯ್ಲಿಗೆ ಕಳೆದ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಕೊಡಿಸಲು ವೀರಪ್ಪ ಮೊಯ್ಲಿ ಭಾರೀ ಸಾಹಸಗಳನ್ನು ಮಾಡಿದ್ದರು. ತಳಸ್ತರದ ಜನರಿಗಾಗಲಿ, ಕಾಂಗ್ರೆಸ್‌ನ ಕಾರ್ಯಕರ್ತರಿಗಾಗಲಿ ಯಾವ ರೀತಿಯಲ್ಲೂ ಹತ್ತಿರವಿಲ್ಲದ ಹರ್ಷ ಮೊಯ್ಲಿಯನ್ನು ಮಂಗಳೂರಿನ ಜನರ ಮೇಲೆ ಹೇರಲು ಹವಣಿಸಿ ತೀವ್ರ ಮುಖಭಂಗಕ್ಕೆ ಒಳಗಾಗಿದ್ದರು. ಇದೀಗ ಆ ಕಾರ್ಯವನ್ನು ಅವರು ಮತ್ತೆ ಮುಂದುವರಿಸುತ್ತಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಪುತ್ರನಿಗೆ ಟಿಕೆಟ್ ಸಿಗುವಂತೆ ಮಾಡಲು ಅವರು ದಿಲ್ಲಿಯಲ್ಲಿ ಕುಳಿತು ರಾಜ್ಯದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ಸಚಿವರೊಬ್ಬರು ಅದಕ್ಕೆ ತಡೆಯಾಗಿದ್ದಾರೆನ್ನಲಾಗಿದೆ.

ತನ್ನ ಪುತ್ರ ಪ್ರೇಮದ ಮುಂದೆ ಪಕ್ಷ ದೊಡ್ಡದಲ್ಲ ಎನ್ನುವ ಸಂದೇಶವನ್ನು ಟ್ವಿಟರ್ ಮೂಲಕ ಕಾಂಗ್ರೆಸ್ ನಾಯಕರಿಗೆ ರವಾನಿಸಿದ್ದಾರೆ. ಆದರೆ ವರಿಷ್ಠರಿಂದ ತೀವ್ರ ಒತ್ತಡ ಬಂದ ಬಳಿಕ ರಾಗ ಬದಲಿಸಿದ್ದಾರೆ. ಒಂದು ವೇಳೆ ಮೊಯ್ಲಿಯವರ ಟ್ವಿಟರ್ ಹ್ಯಾಕ್ ಆಗಿದ್ದೇ ನಿಜವಾಗಿದ್ದರೆ ಅದಕ್ಕಾಗಿ ಅವರು ಮೊದಲು ವಿಚಾರಣೆ ನಡೆಸಬೇಕಾಗಿರುವುದು ತಮ್ಮ ಪುತ್ರನನ್ನೇ ಆಗಿದೆ. ಕೆಲವೊಮ್ಮೆ ಕಳ್ಳ ಅಡುಗೆಮನೆಯಲ್ಲೇ ಬಚ್ಚಿಟ್ಟುಕೊಂಡಿರುತ್ತಾನೆ. ಮೇಲಿನ ಎರಡೂ ಪ್ರಕರಣಗಳು ರಾಷ್ಟ್ರೀಯ ಪಕ್ಷಗಳ ಸಮಯ ಸಾಧಕ ರಾಜಕಾರಣಗಳನ್ನು ಎತ್ತಿ ತೋರಿಸಿದೆ. ಕಾಂಗ್ರೆಸ್ ಪಕ್ಷದ ವಿಷಯಕ್ಕೆ ಬರುವುದಾದರೆ ರಾಜ್ಯದಲ್ಲಿ ಇಂದು ಕಾಂಗ್ರೆಸ್ ಉಸಿರಾಡುತ್ತಿರುವುದು ಸಿದ್ದರಾಮಯ್ಯ ವರ್ಚಸ್ಸಿನ ಬಲದಿಂದ. ಮೊಯ್ಲಿ, ಪೂಜಾರಿ, ಆಸ್ಕರ್‌ರಂತಹ ನಾಯಕರಿಂದ ತಳಮುಟ್ಟಿದ್ದ ಪಕ್ಷವನ್ನು ಮೇಲೆತ್ತಿದ ಹೆಗ್ಗಳಿಕೆ ಸಿದ್ದರಾಮಯ್ಯರಿಗೆ ಸಲ್ಲಬೇಕು. ಆದರೆ ತೀರಾ ವೈಯಕ್ತಿಕ ಹಿತಾಸಕ್ತಿಗಾಗಿ ಇಡೀ ಪಕ್ಷದ ವರ್ಚಸ್ಸಿಗೇ ಕಳಂಕ ತರುವಂತಹ ಕೃತ್ಯಕ್ಕೆ ನಾಯಕರು ಇಳಿಯುತ್ತಾರೆ ಎಂದ ಮೇಲೆ, ಮುಂದೊಂದು ದಿನ ಈ ಹಿರಿಯ ನಾಯಕರು, ‘‘ಮೋದಿಯ ಆಡಳಿತವನ್ನು ಹೊಗಳಿ’’ ಬಿಜೆಪಿ ಸೇರಿದರೆ ಅದರಲ್ಲಿ ಅಚ್ಚರಿಯೇನಿದೆ? ಈಗಾಗಲೇ ಇದಕ್ಕೆ ಅತಿ ದೊಡ್ಡ ಉದಾಹರಣೆಯಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಶ್ರೀನಿವಾಸ ಪ್ರಸಾದ್ ನಮ್ಮ ಮುಂದಿದ್ದಾರೆ. ಕಾಂಗ್ರೆಸ್ ಎನ್ನುವ ಪಿತ್ರಾರ್ಜಿತ ಆಸ್ತಿಯ ಸರ್ವ ಪ್ರಯೋಜನಗಳನ್ನು ಪಡೆದು ಕೊನೆಗೊಂದು ದಿನ ‘ಪಕ್ಷ ನನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’ ಎಂದು ಗಂಟು ಮೂಟೆಕಟ್ಟುವವರು ಪಕ್ಷದೊಳಗೆ ಇನ್ನೂ ಹಲವರಿದ್ದಾರೆ ಎನ್ನುವುದನ್ನು ಈ ಬೆಳವಣಿಗೆ ಬಹಿರಂಗಪಡಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News