ತೆರಿಗೆ ಇಲಾಖೆಗೆ ಹೊಸ ತಲೆನೋವು: ತಾಳೆಯಾಗದ ಜಿಎಸ್ ಟಿ ರಿಟರ್ನ್ಸ್

Update: 2018-03-18 17:14 GMT

ಹೊಸದಿಲ್ಲಿ, ಮಾ.18: ಸರಕು ಮತ್ತು ಸೇವಾ ತೆರಿಗೆ ಅನ್ವಯ ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಸಲ್ಲಿಕೆಯಾಗಿರುವ ಮಾರಾಟ ಸಾರಾಂಶದ ರಿಟರ್ನ್ಸ್ ಹಾಗೂ ಅಂತಿಮ ರಿಟರ್ನ್ಸ್ ಪರಸ್ಪರ ತಾಳೆಯಾಗದಿರುವುದು ಕಂದಾಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದೊಡ್ಡ ಪ್ರಮಾಣದ ಅಂತರ ಇರುವ ಪ್ರಕರಣ ವಿಶ್ಲೇಷಣೆಯನ್ನು ಇಲಾಖೆ ಆರಂಭಿಸಿದ್ದು, ತೆರಿಗೆ ಕಳ್ಳತನದ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತಿದೆ.

ಜಿಎಸ್‍ಟಿ ರಿಟರ್ನ್ಸ್ ಅಂಕಿ ಅಂಶಗಳ ಪ್ರಕಾರ, ಆರಂಭಿಕ ರಿಟರ್ನ್ಸ್ (ಜಿಎಸ್‍ಟಿಆರ್-3ಬಿ) ಸಲ್ಲಿಸುವಾಗ ಜುಲೈನಿಂದ ಡಿಸೆಂಬರ್ ಅವಧಿಯಲ್ಲಿ ಶೇಕಡ 34ರಷ್ಟು ವಹಿವಾಟುದಾರರು 34,400 ಕೋಟಿ ರೂಪಾಯಿ ಕಡಿಮೆ ತೆರಿಗೆಯನ್ನು ಪಾವತಿಸಿದ್ದಾರೆ. ಶೇಕಡ 34ರಷ್ಟು ವ್ಯಾಪಾರಿಗಳು ಸರ್ಕಾರಿ ಬೊಕ್ಕಸಕ್ಕೆ ಜಿಎಸ್‍ಟಿಆರ್-3ಬಿ ಸಲ್ಲಿಕೆ ಮೂಲಕ 8.16 ಲಕ್ಷ ಕೋಟಿ ರೂಪಾಯಿ ಪಾವತಿಸಿದ್ದಾರೆ. ಆದರೆ ಜಿಎಸ್‍ಟಿಆರ್-1 ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ, ಇವರ ತೆರಿಗೆ ಹೊಣೆಗಾರಿಕೆ 8.50 ಲಕ್ಷ ಕೋಟಿ ಇರಬೇಕು.

ಕಂದಾಯ ಇಲಾಖೆಯ ವಿಶ್ಲೇಷಣೆ ಪ್ರಕಾರ, ಶೇಕಡ 16.36ರಷ್ಟು ವಹಿವಾಟುದಾರರು ಸಲ್ಲಿಸಿದ ಆರಂಭಿಕ ರಿಟರ್ನ್ಸ್, ಅವರ ಅಂತಿಮ ರಿಟರ್ನ್ಸ್ ಹಾಗೂ ತೆರಿಗೆ ಹೊಣೆಗಾರಿಕೆ ಜತೆ ತಾಳೆಯಾಗುತ್ತದೆ. ಇವರು ಒಟ್ಟು 22,014 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ.

ಅಂತೆಯೇ ಶೇಕಡ 9.36ರಷ್ಟು ಮಂದಿ ವಹಿವಾಟುದಾರರು ಈ ಅವಧಿಯಲ್ಲಿ 91,072 ಕೋಟಿ ರೂಪಾಯಿಗಳನ್ನು ಅಧಿಕವಾಗಿ ಪಾವತಿಸಿರುವುದು ಕೂಡಾ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಇವರು ಒಟ್ಟು 6.5 ಲಕ್ಷ ಕೋಟಿ ರೂಪಾಯಿ ಜಿಎಸ್‍ಟಿ ಪಾವತಿಸಬೇಕಿದ್ದು, ಜಿಎಸ್‍ಟಿಆರ್-1 ಪ್ರಕಾರ ಇವರು ಸಲ್ಲಿಸಬೇಕಾದ ಪ್ರಮಾಣ 5.59 ಲಕ್ಷ ಕೋಟಿ ರೂ.ಗಳಾಗಿವೆ. 2017ರ ಜುಲೈನಿಂದ ಡಿಸೆಂಬರ್ ಅವಧಿಯಲ್ಲಿ ಜಿಎಸ್‍ಟಿ ರಿಟರ್ನ್ಸ್ ಸಲ್ಲಿಸಿದ 51.96 ಲಕ್ಷ ಉದ್ಯಮಿಗಳ ಅಂಕಿ ಅಂಶಗಳನ್ನು ಕಂದಾಯ ಇಲಾಖೆ ವಿಶ್ಲೇಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News