ಮರದಲ್ಲಿ ನೇತಾಡುತ್ತಿತ್ತು ಆರರ ಬಾಲೆಯ ಮೃತದೇಹ!

Update: 2018-03-19 04:18 GMT
ಸಾಂದರ್ಭಿಕ ಚಿತ್ರ

ಲಕ್ನೋ,ಮಾ.19: ನಗರದ ಹೊರವಲಯದ ಮಾಳ್ ಎಂಬ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೃತದೇಹ ಮರದಲ್ಲಿ ನೇತಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಮಡಿಯಾನ್‍ನಲ್ಲಿ ಖಾಸಗಿ ಶಾಲೆಗೆ ಹೋಗುತ್ತಿದ್ದ ಬಾಲಕಿ ಮಾರ್ಚ್ 15ರಂದು ಶಾಲೆಗೆ ಹೋದವಳು ವಾಪಸ್ಸಾಗಿರಲಿಲ್ಲ. ಆ ದಿನ ರಾತ್ರಿ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿ ನೆರೆಮನೆಯ ವ್ಯಕ್ತಿ ಹಾಗೂ ಆತನ ಪತ್ನಿ ಸೇರಿ ಮಗುವನ್ನು ಅಪಹರಿಸಿದ್ದಾರೆ ಎಂದು ಆಪಾದಿಸಿದ್ದರು. ಇದೀಗ  ಮಾಳ್ ಗ್ರಾಮದ ಕೊಲ್ವಾ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇತುಹಾಕಿರುವುದು ಪತ್ತೆಯಾಗಿದೆ. ಈ ಜಾಗ ನೆರೆಮನೆಯ ವ್ಯಕ್ತಿಗೆ ಸೇರಿದ್ದು ಎನ್ನಲಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

"ಬಾಲಕಿಯ ಕುಟುಂಬದವರು ಮತ್ತು ಪೊಲೀಸರು ಶೋಧ ನಡೆಸುತ್ತಿದ್ದಾಗ, ಕೊಳೆತ ಶವ ರವಿವಾರ ಪತ್ತೆಯಾಗಿದೆ. ಬಾಲಕಿ ಶಾಲಾ ಸಮವಸ್ತ್ರದಲ್ಲಿದ್ದು, ಆಕೆಯ ಕುತ್ತಿಗೆಗೆ ಬೆಲ್ಟ್ ಬಿಗಿಯಲಾಗಿತ್ತು. ಆಕೆ ಕಣ್ಮರೆಯಾದ ದಿನವೇ ಆಕೆಯನ್ನು ಹತ್ಯೆ ಮಾಡಿರಬೇಕು ಎಂದು ಶಂಕಿಸಲಾಗಿದೆ.

ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂದು ಬಾಲಕಿಯ ತಂದೆ ಆಪಾದಿಸಿದ್ದಾರೆ. ಆದರೆ ಅತ್ಯಾಚಾರದ ಸಾಧ್ಯತೆಯನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಬಾಲಕಿಯ ಕಣ್ಮರೆ ಪ್ರಕರಣದ ಬಗ್ಗೆ ಲಕ್ನೋ ಎಸ್‍ಎಸ್ಪಿ ದೀಪಕ್ ಕುಮಾರ್ ಅವರು, ಮಡಿಯಾನ್ ಪೊಲೀಸ್ ಠಾಣಾಧಿಕಾರಿ ಅಮರನಾಥ್ ಯಾದವ್ ಅವರನ್ನು ವರ್ಗಾವಣೆ ಮಾಡಿ, ಠಾಣೆಯ ಸಬ್‍ ಇನ್ ಸ್ಪೆಕ್ಟರ್ ವೀರ್‍ಪಾಲ್ ಅವರನ್ನು ನಿರ್ಲಕ್ಷ್ಯದ ಆರೋಪದಲ್ಲಿ ಅಮಾನತು ಮಾಡಿದ್ದರು.

ಬಾಲಕಿಯ ತಂದೆಯ ಆರೋಪದ ಮೇರೆಗೆ ನೆರೆಮನೆಯ ಬ್ರಿಜೇಶ್ ಹಾಗೂ ಪತ್ನಿ ಆಶಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ತನ್ನ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದೂ ಬಾಲಕಿಯ ತಂದೆ ಆಪಾದಿಸಿದ್ದಾರೆ. ಪೊಲೀಸರು ಮಾರ್ಚ್ 16ರಂದು ಆರೋಪಿ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಿಡುಗಡೆಗೊಳಿಸಿದ್ದರು. ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯವನ್ನು ನೆರೆಮನೆಯವರು ಎಸಗಿದ್ದಾರೆ ಎನ್ನುವುದು ಬಾಲಕಿಯ ತಂದೆಯ ಆರೋಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News