ಆಲ್ದೂರು: ದಲಿತರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ; ಆರೋಪ

Update: 2018-03-19 13:07 GMT

ಚಿಕ್ಕಮಗಳೂರು, ಮಾ.19: ಯುಗಾದಿ ಹಬ್ಬದ ದಿನದಂದು ಪೂಜೆಗೆಂದು ದೇಗುಲಕ್ಕೆ ಹೋದ ಯುವಕರನ್ನು ತಡೆದ ಸವರ್ಣೀಯರು ದೇಗುವದ ಒಳ ಪ್ರವೇಶಕ್ಕೆ ನಿರ್ಬಂದಿಸಿದ್ದಲ್ಲದೇ ಜಾತಿಯ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ತಾಲೂಕಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.

ಆಲ್ದೂರು ಹೋಬಳಿಯ ಅಗಳ ಗ್ರಾಮದಲ್ಲಿರುವ ದಲಿತ ಕಾಲನಿಯ ಸಚಿನ್, ಗೌತಮ್ ಸೇರಿದಂತೆ ಕೆಲ ಯುವಕರು ರವಿವಾರ ಬೆಳಗ್ಗೆ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ದೇವಿರಮ್ಮ ದೇಗುಲಕ್ಕೆ ಹಣ್ಣುಕಾಯಿ ಪೂಜೆಗೆಂದು ತೆರಳಿದ್ದರು. ಈ ವೇಳೆ ಯುವಕರು ದೇಗುಲದ ಒಳಗೆ ಹೋಗಲು ಮುಂದಾದಾಗ ದೇಗುಲದಲ್ಲೇ ಇದ್ದ ಚಂದ್ರೇಗೌಡ, ಮಹೇಶ್‍ಗೌಡ ಮತ್ತಿತರರು ಯುವಕರನ್ನು ತಡೆದು ದೇಗುಲ ಪ್ರವೇಶಿಸದಂತೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಘಟನೆಯಿಂದ ಅವಮಾನಿತರಾದ ಯುವಕರು ಸವರ್ಣೀಯರ ನಿರ್ಬಂಧವನ್ನು ಪ್ರಶ್ನಿಸಿದಾಗ, ಜಾತಿ ನೆಪ ಮಾಡಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, 'ನಿಮ್ಮ ತಂದೆ-ತಾಯಿ ಸೇರಿದಂತೆ ಕಾಲನಿಯವರು ದೇವಾಲಯದ ಹೊರಗೆ ನಿಂತು ದರ್ಶನ ಪಡೆದು ಹೋಗುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ನೀವೂ ಅದನ್ನೇ ಪಾಲಿಸಬೇಕು. ಯಾವುದೇ ಕಾರಣಕ್ಕೂ ದೇವಾಲಯದ ಒಳಗೆ ಬರಬಾರದು' ಎಂದು ಹೇಳಿ ಜಾತಿಯ ಹೆಸರಿನಲ್ಲಿ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿದ್ದಾರೆಂದು ತಿಳಿದು ಬಂದಿದೆ.

ಈ ವೇಳೆ ಸವರ್ಣೀಯ ಸಮುದಾಯದವರು ದೇಗುಲ ಪ್ರವೇಶಿಸಲು ಬಿಡದೆ ದಲಿತ ಯುವಕರನ್ನು ತಡೆದು ನಿಂದಿಸುತ್ತಿರುವ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡಿದ್ದು, ಈ ಘಟನೆಯಿಂದ ಅವಮಾನಿತರಾದ ಯುವಕರು ಕಾಲನಿಯಲ್ಲಿ ತಿಳಿಸಿ, ದಲಿತ ಸಂಘಟನೆಗಳ ಮುಖಂಡರ ಗಮನಕ್ಕೂ ತಂದಿದ್ದರಿಂದ ಅವರು ಈ ವಿಷಯವನ್ನು ಆಲ್ದೂರು ಪೊಲೀಸರಿಗೆ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಲ್ದೂರು ಠಾಣಾಧಿಕಾರಿ ನೇತೃತ್ವದ ಪೊಲೀಸರ ತಂಡ ಅಗಳ ಗ್ರಾಮದ ದೇವಿರಮ್ಮ ದೇಗುಲದ ಬಳಿಗೆ ತೆರಳಿದ್ದು, ಅದರೆ ದೇಗುಲದ ಬಾಗಿಲು ಹಾಕಿದ್ದರಿಂದ ಸ್ಥಳೀಯ ಮುಖಂಡರಿಂದ ಹೇಳಿಕೆ ಪಡೆದು ಸೋಮವಾರ ಠಾಣೆಗೆ ಎರಡೂ ಕಡೆಯವರನ್ನು ವಿಚಾರಣೆಗೆ ಬರಲು ಹೇಳಿ ತೆರಳಿದ್ದರು ಎಂದು ಕಾಲನಿ ನಿವಾಸಿಗಳು ವಾರ್ತಾಭಾರತಿಗೆ ತಿಳಿಸಿದ್ದಾರೆ.

ಆಲ್ದೂರು ಠಾಣೆಯಲ್ಲಿ ಸಂದಾನ ಸಭೆ: ಈ ಘಟನೆಯ ಆರೋಪದ ಮೇರೆಗೆ ಆಲ್ದೂರು ಠಾಣಾಧಿಕಾರಿ ಅಗಳ ಗ್ರಾಮದ ದಲಿತ ಕಾಲನಿ ನಿವಾಸಿಗಳು ಸವರ್ಣೀಯ ಸಮುದಾಯದ ಮುಖಂಡರನ್ನು ಸೋಮವಾರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರು, ಸವರ್ಣೀಯ ಸಮುದಾಯದ ಮುಖಂಡರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದು, ದಲಿತರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರುವುದು ಅಪರಾಧ ಎಂಬ ಬಗ್ಗೆ ತಿಳುವಳಿಕೆ ಹೇಳಿ, ಭವಿಷ್ಯದಲ್ಲಿ ದಲಿತರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧಿಸುವುದಿಲ್ಲ ಎಂದು ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆಂದು ನಿವಾಸಿಗಳು ಪತ್ರಿಕೆಗೆ ತಿಳಿಸಿದ್ದು, ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ.

ಶಾಸಕರನ್ನೂ ದೇಗುಲದ ಒಳಗೆ ಬಿಟ್ಟಿರಲಿಲ್ಲ: ನಿವಾಸಿಗಳು

ಗ್ರಾಮದಲ್ಲಿದ್ದ ಹಳೆಯ ದೇವಿರಮ್ಮ ದೇವಾಲಯವನ್ನು ಈಗ್ಗೆ ಎರಡು ವರ್ಷಗಳ ಹಿಂದೆ ನವೀಕರಿಸಲಾಗಿದೆ. ಪ್ರತೀ ಶುಕ್ರವಾರದಂದು ದೇಗುಲದಲ್ಲಿ ಪೂಜೆ ನಡೆಯುತ್ತದೆ. ಪ್ರತೀ ವಿಶೇಷ ಹಬ್ಬದ ದಿನದಂದು ದೇಗುಲದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ರವಿವಾರ ಯುಗಾದಿ ಹಬ್ಬವಾಗಿದ್ದರಿಂದ ಪೂಜೆಗೆಂದು ಕಾಲನಿಯ ಕೆಲ ಯುವಕರು ದೇಗುಲಕ್ಕೆ ಹೋಗಿದ್ದಾರೆ. ಈ ವೇಳೆ ಅಲ್ಲಿದ್ದ ಮೇಲ್ಜಾತಿ ಮುಖಂಡರು ಯುವಕರನ್ನು ದೇಗುಲದ ಒಳಗೆ ಹೋಗಲು ಬಿಡದೆ ತಡೆದಿದ್ದಾರೆ. ಹಿಂದಿನಿಂದಲೂ ಈ ದೇಗುಲದ ಒಳಗೆ ನಮ್ಮನ್ನು ಬಿಡುವುದಿಲ್ಲ. ಹೊರಗೆ ನಿಂತು ದೇವರ ದರ್ಶನ ಪಡೆದು ಬರಬೇಕು. ಎರಡು ವರ್ಷಗಳ ಹಿಂದೆ ದೇಗುಲದ ಉದ್ಘಾಟನೆಗಾಗಿ ಮೂಡಿಗೆರೆ ಮೀಸಲು ವಿಧಾನಸಭೆ ಕ್ಷೇತ್ರದ ಶಾಸಕ ಬಿ.ಬಿ.ನಿಂಗಯ್ಯ ಅಗಳ ಗ್ರಾಮಕ್ಕೆ ಬಂದಿದ್ದರು. ದೇವಾಲಯದ ಉದ್ಘಟನೆಯ ಬಳಿಕ ಶಾಸಕರನ್ನೂ ದೇವಾಲಯದ ಒಳಗೆ ಬಿಟ್ಟಿರಲಿಲ್ಲ. ಶಾಸಕರು ಅಂದೇ ಇದರ ವಿರುದ್ಧ ಕ್ರಮಕೈಗೊಂಡಿದ್ದರೆ ನಮಗೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಾಲನಿಯ ಮಹಿಳೆಯರು ವಾರ್ತಾಭಾರತಿಗೆ ತಿಳಿಸಿದ್ದಾರೆ.

ರವಿವಾರ ದೇಗುಲ ಒಳ ಪ್ರವೇಶಕ್ಕೆ ಬಿಡದ ಬಗ್ಗೆ ಆಲ್ದೂರು ಪೊಲೀಸರಿಗೆ ದೂರು ನೀಡಿದ್ದೆವು. ಪೊಲೀಸರು ರವಿವಾರ ಸಂಜೆ ಗ್ರಾಮಕ್ಕೆ ಬಂದು ಸ್ಥಳ ಪರಿಶೀಲಿಸಿದ್ದಾರೆ. ಎರಡೂ ಸಮುದಾಯದವರನ್ನು ಸೋಮವಾರ ಠಾಣೆಗೆ ಕರೆಸಿ ವಿಚಾರಿಸಿದ್ದಾರೆ. ಈ ವೇಳೆ ಸವರ್ಣೀಯರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೇ ಮುಂದೆ ಗ್ರಾಮದಲ್ಲಿ ಇಂತಹ ಘಟನೆ ಮರುಕಳಿಸದಂತೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಸದ್ಯ ಗ್ರಾಮದಲ್ಲಿ ಕಾಲನಿ ನಿವಾಸಿಗಳಿಗೆ ಭಯ, ಭೀತಿ ಇಲ್ಲ. ಎರಡೂ ಸಮುದಾಯದವರು ಸೌಹಾರ್ದವಾಗಿ ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ. ಗ್ರಾಮದಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸುವುದಿಲ್ಲ ಎಂಬ ವಿಶ್ವಾಸವಿದೆ.

- ಸಚಿನ್, ಸವರ್ಣೀಯರಿಂದ ನಿಂದನೆಗೊಳಗಾದ ಯುವಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News