ನಿಧಿಯಾಸೆಗಾಗಿ ಕೈ-ಕಾಲು ಕತ್ತರಿಸಿ ವ್ಯಕ್ತಿಯ ಹತ್ಯೆ: ದೇವಾಲಯದ ಪೂಜಾರಿ ಸೇರಿದಂತೆ ನಾಲ್ವರ ಬಂಧನ

Update: 2018-03-19 13:14 GMT

ಶಿವಮೊಗ್ಗ, ಮಾ. 19: ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಗ್ರಾಮದಲ್ಲಿ ಇತ್ತೀಚೆಗೆ ವ್ಯಕ್ತಿಯೋರ್ವರ ರುಂಡ, ಕೈ-ಕಾಲು ಕತ್ತರಿಸಿ ಹತ್ಯೆ ಮಾಡಿದ್ದ ಪ್ರಕರಣ ಬೇಧಿಸುವಲ್ಲಿ ಶಿಕಾರಿಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ನಿಧಿಯಾಸೆಗಾಗಿ ನರಬಲಿ ನೀಡಿದ್ದ ಪ್ರಕರಣ ಇದಾಗಿದ್ದು, ದೇವಾಲಯದ ಅರ್ಚಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಪ್ರಕರಣದ ಪ್ರಮುಖ ಆರೋಪಿಯಾದ ಅಂಜನಾಪುರ ಗ್ರಾಮದ ಚೌಡಮ್ಮ ದೇವಾಲಯದ ಅರ್ಚಕ ಶೇಖರಪ್ಪ (55), ಅದೇ ಗ್ರಾಮಕ್ಕೆ ಸೇರಿದ ನಿವಾಸಿಗಳಾದ ರಂಗಪ್ಪ (31), ಗೌಸ್‍ಪೀರ್(46) ಹಾಗೂ ಮಂಜು ಯಾನೆ ಮಂಜುನಾಥ (25) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಶಿಕಾರಿಪುರ ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ಬಸವರಾಜ್, ಆಂಜನೇಯ, ಎಎಸ್‍ಐ ಆಜಪ್ಪ ಮತ್ತವರ ಸಿಬ್ಬಂದಿಗಳಾದ ಮಂಜುನಾಥ, ಶಿವಕುಮಾರ್, ರಾಘವೇಂದ್ರ, ಸಾದುದ್ದೀನ್‍ರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಘಟನೆ ಹಿನ್ನೆಲೆ: ಶೇಷನಾಯ್ಕ್ (65) ಬರ್ಬರವಾಗಿ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಕಳೆದ ಮಾ. 7 ರಂದು ಜಾನುವಾರುಗಳಿಗೆ ಹುಲ್ಲು ತರಲೆಂದು ಮನೆಯಿಂದ ತೆರಳಿದ್ದ ಅವರನ್ನು ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಲಾಗಿತ್ತು. ತಲೆ, ಕೈ ಕಾಲು ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯು ಇಡೀ ಗ್ರಾಮವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. 

ಈ ಹತ್ಯೆ ಪ್ರಕರಣ ಸಂಪೂರ್ಣ ನಿಗೂಢವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೂ ಈ ಕೇಸ್ ಸವಾಲಾಗಿ ಪರಿಣಮಿಸಿತ್ತು. ನಾನಾ ದಿಕ್ಕುಗಳಲ್ಲಿ ಮಾಹಿತಿ ಕಲೆ ಹಾಕಿದರೂ ಹಂತಕರ ಬಗ್ಗೆ ಸುಳಿವು ಲಭ್ಯವಾಗಿರಲಿಲ್ಲ. ಹತ್ಯೆ ಹಿಂದಿನ ಕಾರಣವೂ ತಿಳಿದುಬಂದಿರಲಿಲ್ಲ. 

ಹತ್ಯೆ ಪ್ರಕರಣದ ನಂತರ ಗ್ರಾಮದಲ್ಲಿ ನಡೆದ ಬೆಳವಣಿಗೆಗಳ ಮಾಹಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಪೊಲೀಸರಿಗೆ, ಘಟನೆಯ ನಂತರ ಆರೋಪಿ ಗೌಸ್ ಪೀರ್ ಊರಿನಲ್ಲಿ ಇರದಿದ್ದ ಅಂಶ ತಿಳಿದುಬಂದಿತ್ತು. ಅನುಮಾನದ ಮೇರೆಗೆ ಆತನಿರುವ ಪ್ರದೇಶ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆಯ ವೇಳೆ ಆರೋಪಿಯು ಹತ್ಯೆಯ ವೃತ್ತಾಂತ ಬಾಯ್ಬಿಟ್ಟಿದ್ದು, ಈತ ನೀಡಿದ ಮಾಹಿತಿಯ ಆಧಾರದ ಮೇಲೆ ಉಳಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. 

ನಿಧಿಯಾಸೆ: ಚೌಡಮ್ಮ ದೇವಾಲಯದ ಬಳಿ ನಿಧಿಯಿದ್ದು, ನರಬಲಿ ನೀಡಿ ದೇವರಿಗೆ ಮನುಷ್ಯರ ರಕ್ತ ತರ್ಪಣ ಮಾಡಿದರೆ ಗುಪ್ತ ನಿಧಿ ನಮ್ಮ ಕೈವಶವಾಗಲಿದೆ ಎಂದು ಮುಖ್ಯ ಆರೋಪಿ ಅರ್ಚಕ ಶೇಖರಪ್ಪ ತಿಳಿಸಿದ್ದ. ಅದರಂತೆ ನಾಲ್ವರು ಆರೋಪಿಗಳು ಒಟ್ಟುಗೂಡಿ ನರಬಲಿಗೆ ಯೋಜನೆ ರೂಪಿಸತೊಡಗಿದ್ದರು. ಯಾರನ್ನು ಬಲಿ ಕೊಡಬೇಕು ಎಂಬುವುದರ ಬಗ್ಗೆ ಚರ್ಚಿಸುತ್ತಿದ್ದರು. ಇದೆ ವೇಳೆ ಜಾನುವಾರುಗಳಿಗೆ ಹುಲ್ಲು ತರಲು ತೆರಳುತ್ತಿದ್ದ ಶೇಷನಾಯ್ಕ್ ರನ್ನು ಗಮನಿಸಿದ ಆರೋಪಿಗಳು, ಇವರನ್ನೆ ಹತ್ಯೆ ಮಾಡಲು ನಿರ್ಧರಿಸಿದ್ದರು. ಅದರಂತೆ ಅವರನ್ನು ಕೊಲೆ ಮಾಡಿದ್ದರು. ನಂತರ ಯಾರಿಗೂ ಅನುಮಾನ ಬಾರದೆಂಬ ಉದ್ದೇಶದಿಂದ ಊರಿನಲ್ಲಿಯೇ ಓಡಾಡಿಕೊಂಡಿದ್ದು, ಮತ್ತೊಂದೆಡೆ ಹತ್ಯೆಯ ನಂತರ ಭಯಭೀತನಾದ ಗೌಸ್‍ಪೀರ್ ಘಟನೆ ನಡೆದ ನಂತರ ಬೇರೆ ಊರಿಗೆ ತೆರಳಿದ್ದ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News