ಶಿವಮೊಗ್ಗ: ಈಶ್ವರಪ್ಪ, ಎಸ್.ರುದ್ರೇಗೌಡ ಜೊತೆ ಚರ್ಚಿಸಿದ ಬಿಜೆಪಿ ನಾಯಕರು
ಶಿವಮೊಗ್ಗ, ಮಾ. 19: ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಷಿ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರವರು ಸೋಮವಾರ ನಗರಕ್ಕೆ ದಿಢೀರ್ ಭೇಟಿಯಿತ್ತು, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿರುವ ಕೆ.ಎಸ್.ಈಶ್ವರಪ್ಪ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಈ ವಿದ್ಯಮಾನ ಸ್ಥಳೀಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ. ಬಿಜೆಪಿ ಪಾಳೇಯದಲ್ಲಿ ನಾನಾ ರೀತಿಯ ಚರ್ಚೆಗೂ ಎಡೆ ಮಾಡಿಕೊಟ್ಟಿದೆ. ಸಮಾಲೋಚನೆಯ ವೇಳೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‍ಗೆ ಸಂಬಂಧಿಸಿದಂತೆ ಏನಾದರೂ ಚರ್ಚೆಗಳು ನಡೆದಿವೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ನಗರಕ್ಕೆ ದಿಢೀರ್ ಭೇಟಿ ನೀಡಿ ಟಿಕೆಟ್ ಆಕಾಂಕ್ಷಿ ನಾಯಕರ ಜೊತೆ ನಡೆಸಿದ ರಹಸ್ಯ ಸಮಾಲೋಚನೆಯ ಬಗ್ಗೆ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರಹ್ಲಾದ್ ಜೋಷಿ, 'ಇದೊಂದು ಸೌಜನ್ಯದ ಭೇಟಿ. ಯಾವುದೇ ರಹಸ್ಯ ಸಭೆ ನಡೆದಿಲ್ಲ' ಎಂದಷ್ಟೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತ್ಯೇಕ ಮಾತುಕತೆ: ಎಸ್.ರುದ್ರೇಗೌಡರನ್ನು ಅವರ ನಿವಾಸದಲ್ಲಿ ಹಾಗೂ ಕೆ.ಎಸ್.ಈಶ್ವರಪ್ಪರನ್ನು ಹೋಟೆಲ್‍ವೊಂದರಲ್ಲಿ ಭೇಟಿಯಾಗಿ ಪ್ರಹ್ಲಾದ್ ಜೋಷಿ ಹಾಗೂ ರವಿಕುಮಾರ್ ಚರ್ಚೆ ನಡೆಸಿದರು. ಈ ವೇಳೆ ಇಬ್ಬರು ನಾಯಕರ ಆಪ್ತರು ಉಪಸ್ಥಿತರಿದ್ದರು. ಪಕ್ಷದ ವರಿಷ್ಠರ ಸೂಚನೆಯಂತೆ ಈ ಮುಖಂಡರು ಶಿವಮೊಗ್ಗಕ್ಕೆ ಆಗಮಿಸಿ, ಈ ಇಬ್ಬರು ನಾಯಕರ ಜೊತೆ ಸಮಾಲೋಚಿಸಿ ಹಿಂದಿರುಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಇದನ್ನು ಬಿಜೆಪಿಯ ಕೆಲ ಮೂಲಗಳು ನಿರಾಕರಿಸಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಈ ನಾಯಕರು ನಗರಕ್ಕೆ ಆಗಮಿಸಿದ್ದಾರೆ ಎಂದು ಹೇಳುತ್ತಿವೆ.
ಆಕಾಂಕ್ಷಿಗಳು: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕೆ.ಎಸ್.ಈಶ್ವರಪ್ಪ ಹಾಗೂ ಎಸ್.ರುದ್ರೇಗೌಡ ಪೈಪೋಟಿ ನಡೆಸುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಸ್.ರುದ್ರೇಗೌಡರ ಪರವಾಗಿ ಬ್ಯಾಟಿಂಗ್ ನಡೆಸುತ್ತಿರುವುದರಿಂದ, ಬಣ ರಾಜಕಾರಣಕ್ಕೂ ಆಸ್ಪದವಾಗುವಂತೆ ಮಾಡಿದೆ. ಟಿಕೆಟ್ ಫೈಟ್ ಬಿರುಸುಗೊಂಡಿದೆ. ಇದೆಲ್ಲದರ ನಡುವೆ ಪ್ರಹ್ಲಾದ್ ಜೋಷಿ ಹಾಗೂ ರವಿಕುಮಾರ್ ರವರು ಟಿಕೆಟ್ ಆಕಾಂಕ್ಷಿಗಳೊಂದಿಗೆ ಮಾತುಕತೆ ನಡೆಸಿ ಹಿಂದಿರುಗುವುದು ಸಹಜವಾಗಿಯೇ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
'ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಭೇಟಿ'
ಇಷ್ಟರಲ್ಲಿಯೇ ಶಿವಮೊಗ್ಗ ನಗರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸಲಿದ್ದು, ಹಲವು ಸಭೆ - ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ. ಈ ಕಾರಣದಿಂದ ಸಂಸದ ಪ್ರಹ್ಲಾದ್ ಜೋಷಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರವರು ತಮ್ಮನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಉಳಿದಂತೆ ಇತರೆ ಯಾವುದೇ ರಾಜಕೀಯ ವಿಷಯಗಳು ಚರ್ಚೆಯಾಗಿಲ್ಲ' ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡರವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.