×
Ad

ಶಿವಮೊಗ್ಗ: 6 ಸರಗಳ್ಳಿಯರು ಸೇರಿ 8 ಜನ ಕಳ್ಳರ ಬಂಧನ; ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

Update: 2018-03-19 21:51 IST

ಶಿವಮೊಗ್ಗ, ಮಾ. 19: ಜಿಲ್ಲೆಯ ಶಿಕಾರಿಪುರ ಉಪ ವಿಭಾಗದ ಶಿರಾಳಕೊಪ್ಪ ಹಾಗೂ ಶಿಕಾರಿಪುರ ಪಟ್ಟಣ ಠಾಣಾ ಪೊಲೀಸರು ನಡೆಸಿದ ಮೂರು ಪ್ರತ್ಯೇಕ ಕಾರ್ಯಾರಣೆಗಳಲ್ಲಿ ಮೂವರು ಅಂತಾರಾಜ್ಯ ಸರಗಳ್ಳಿಯರು ಸೇರಿದಂತೆ ಎಂಟು ಕಳ್ಳರನ್ನು ಬಂಧಿಸಿದ್ದಾರೆ. ಅವರಿಂದ ಲಕ್ಷಾಂತರ ರೂ. ಮೌಲ್ಯದ ಕಳವು ಮಾಲು ವಶಕ್ಕೆ ಪಡೆದುಕೊಂಡಿದ್ದಾರೆ. 

ಈ ಕುರಿತಂತೆ ಸೋಮವಾರ ಶಿವಮೊಗ್ಗ ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರಕರಣಗಳ ವಿವರ ನೀಡಿದರು. ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. 

ವಿವರ: ಶಿರಾಳಕೊಪ್ಪ ಠಾಣೆ ಪೊಲೀಸರು ಮೂವರು ಅಂತಾರಾಜ್ಯ ಸರಗಳ್ಳಿಯರನ್ನು ಬಂಧಿಸಿದ್ದಾರೆ. ಒಟ್ಟಾರೆ 12 ಪ್ರಕರಣ ಪತ್ತೆ ಹಚ್ಚಿ, 10.86 ಲಕ್ಷ ರೂ. ಮೌಲ್ಯದ 393 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಮೂಲದ ತಿಪ್ಪವ್ವ (48), ಮೀನಾ (45) ಹಾಗೂ ಉಷಾ ಶಿವಾಜಿ ಖಂಡೇಕರ್ (55) ಬಂಧಿತ ಆಪಾದಿತೆಯೆರೆಂದು ಗುರುತಿಸಲಾಗಿದೆ. 

ಆಪಾದಿತೆಯರು ತೋಗರ್ಸಿ, ತೀರ್ಥಹಳ್ಳಿ, ಭದ್ರಾವತಿ, ಬಾದಾಮಿ, ಸವದತ್ತಿ, ವಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ, ಮೈಲಾರ ಜಾತ್ರೆ, ಬನಶಂಕರಿ ಜಾತ್ರೆ, ಸಿದ್ದಾರೂಢ ಜಾತ್ರೆ, ನಾಯಕನಹಟ್ಟಿ ಜಾತ್ರೆ, ಸಿರ್ಸಿ ಮಾರಿಕಾಂಬ, ದಾವಣಗೆರೆ ದುಗ್ಗಮ್ಮನ ಜಾತ್ರೆ ಸೇರಿದಂತೆ ರಾಜ್ಯದ ಹಲವೆಡೆ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. 

ಹಾಗೆಯೇ ಮಹಾರಾಷ್ಟ್ರದ ತುಳಜಾಪುರ ಅಂಬಭವಾನಿ ಜಾತ್ರೆ ಮತ್ತಿತರೆಡೆಯೂ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನ್ನು ಆಪಾದಿತೆಯರು ಪೊಲೀಸರ ವಿಚಾರಣೆಯ ವೇಳೆ ತಿಳಿಸಿದ್ದಾರೆ. ಇವರ ತಂಡದ ಇಬ್ಬರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. 

ಮತ್ತೊಂದು ತಂಡ: ಶಿರಾಳಕೊಪ್ಪ ಠಾಣೆ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಮೂವರು ಸರಗಳ್ಳಿಯರನ್ನು ಬಂಧಿಸಿದ್ದಾರೆ. ಹುಬ್ಬಳ್ಳಿ ಪಟ್ಟಣದ ಸೆಟ್ಲ್‍ಮೆಂಟ್ ಏರಿಯಾದ ನಿವಾಸಿಗಳಾದ ಮಲ್ಲವ್ವ (58), ದೇವಕ್ಕ (50) ಹಾಗೂ ಯಲ್ಲವ್ವ (55) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಬಳ್ಳಿಗಾವಿ ಗ್ರಾಮದ ಜಾತ್ರೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ಕಳ್ಳತನ ಕೃತ್ಯಗಳು ಬೆಳಕಿಗೆ ಬಂದಿದೆ. 

ಬಂಧಿತ ಆರೋಪಿಗಳಿಂದ ಒಟ್ಟಾರೆ 5 ಪ್ರಕರಣಗಳಿಂದ 119 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 3.47 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಆರೋಪಿಗಳು ತೋಗರ್ಸಿ, ಸವದತ್ತಿ, ಉಕ್ಕಡಗಾತ್ರಿ, ರಿಪ್ಪನ್‍ಪೇಟೆಯ ಕೆಂಚನಾಳು ಸೇರಿದಂತೆ ವಿವಿಧ ಕಡೆಗಳಲ್ಲಿ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. 

ಮೊಬೈಲ್ ಕಳ್ಳತನ: ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪದ ಮೇರೆಗೆ ಶಿಕಾರಿಪುರ ಪಟ್ಟಣ ಠಾಣೆ ಪೊಲೀಸರು ಶೌಕತ್ ಆಲಿ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳೇನಹಳ್ಳಿಯ ನಿವಾಸಿ ರವಿ ಎಂಬಾತ ತಲೆಮರೆಸಿಕೊಂಡಿದ್ದಾನೆ. 

ಆರೋಪಿಗಳು ಕಳವು ಮಾಡಿ ತರುತ್ತಿದ್ದ ಮೊಬೈಲ್‍ಗಳನ್ನು ಖರೀದಿಸಿ, ಮಾರಾಟ ಮಾಡುತ್ತಿದ್ದ ಶಿಕಾರಿಪುರ ಪಟ್ಣದ ನಿವಾಸಿ ಜಾಫರ್ (22) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳಿಂದ 1.55 ಲಕ್ಷ ರೂ. ಮೌಲ್ಯದ 26 ಮೊಬೈಲ್ ಪೋನ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಪೊಲೀಸ್ ತಂಡದ ವಿವರ
ಶಿಕಾರಿಪುರ ಡಿವೈಎಸ್‍ಪಿ ಸುಧಾಕರ ನಾಯ್ಕ್, ಸರ್ಕಲ್ ಇನ್ಸ್ ಪೆಕ್ಟರ್ ಬಸವರಾಜ್, ಸಬ್ ಇನ್ಸ್ ಪೆಕ್ಟರ್ ಜಯಪ್ಪನಾಯ್ಕ್ ಮತ್ತವರ ಸಿಬ್ಬಂದಿಗಳು ಈ ಮೂರು ಕಳ್ಳತನ ಪ್ರಕರಣ ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚಿ ಕಳವು ಮಾಲು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಮೆಚ್ಚುಗೆ ವ್ಯಕ್ತಪಡಿಸಿ, ಕಾರ್ಯವನ್ನು ಶ್ಲಾಘಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News