ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‍ನ ಇತಿಹಾಸ ಮರುಕಳಿಸಲಿದೆ: ಕೆ.ಸಿ ವೇಣುಗೋಪಾಲ್
ಚಿಕ್ಕಮಗಳೂರು, ಮಾ.19: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಹಿಂದಿನ ಇತಿಹಾಸ ಮರುಕಳಿಸಲಿದ್ದು, ಇಂದಿರಾ ಕುಟುಂಬದ ಕುಡಿ ರಾಹುಲ್ ಗಾಂಧಿ ಭೇಟಿಯಿಂದಾಗಿ ಜಿಲ್ಲೆಯ ಜನರಿಗೆ ಕಾಂಗ್ರೆಸ್‍ನ ಗತವೈಭವ, ಇಂದಿರಾಗಾಂಧಿಯ ನೆನಪಾಗಲಿದೆ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಮಾ.21ರಂದು ಬುಧವಾರ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಜಿಲ್ಲಾ ಪ್ರವಾಸದ ವೇಳೆ ನಗರದಲ್ಲಿ ನಡೆಯಲಿರುವ ಜನಾಶೀರ್ವಾದ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಬಿ.ಎಲ್.ಶಂಕರ್ ಮತ್ತಿತರ ಮುಖಂಡರೊಂದಿಗೆ ನಗರದ ಸುಭಾಶ್ ಚಂದ್ರಭೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದು, ಜಿಲ್ಲೆಯ ಐದೂ ಕ್ಷೇತ್ರಗಳಲ್ಲೂ ಈ ಬಾರಿ ಕಾಂಗ್ರೆಸ್ ಪರ ಅಲೆ ಇದೆ. ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಹಿಂದಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಕಾಣುವುದು ನಿಶ್ಚಿತ ಎಂದು ಅವರು ಭವಿಷ್ಯ ನುಡಿದರು.
ಜಿಲ್ಲೆಯಲ್ಲಿ ನಡೆಯಲಿರುವ ಜನಾಶೀರ್ವಾದ ಸಮಾವೇಶದಲ್ಲಿ ರಾಹುಲ್‍ಗಾಂಧಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದು, ಇದು ಒಂದು ಐತಿಹಾಸಿಕ ಸಮಾವೇಶವಾಗಲಿದೆ.ಎಪ್ರಿಲ್ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಸಿಎಂ ಸೇರಿದಂತೆ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಆಯ್ಕೆ ನಡೆಸಲಿದ್ದಾರೆ. ಅಂತಿಮವಾಗಿ ಸ್ಕ್ರೀನಿಂಗ್ ಕಮಿಟಿಯ ಪರಿಶೀಲನೆ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಅಭ್ಯರ್ಥಿಗಳ ಆಯ್ಕೆ ವರಿಷ್ಠರ ತೀರ್ಮಾನವಾಗಿದ್ದು, ಗೆಲ್ಲುವ ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಬಲ ಸ್ಪರ್ಧೆ ನೀಡುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆ ಬಳಿಕ ಟಿಕೆಟ್ ಆಕಾಂಕ್ಷಿಗಳು ಬಂಡಾಯವೆದ್ದಲ್ಲಿ, ವಿರೋಧಿಸಿದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದರು.
ಇದಕ್ಕೂ ಮೊದಲು ವೇಣುಗೋಪಾಲ್ ಹಾಗೂ ಜಿ.ಪರಮೇಶ್ವರ್ ಅವರು, ಚಿಕ್ಕಮಗಳೂರು ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಸಗೀರ್‍ಅಹ್ಮದ್, ಜಿಲ್ಲಾ ಮುಖಂಡರಾದ, ಎ.ಎನ್.ಮಹೇಶ್, ಎಂ.ಎಲ್.ಮೂರ್ತಿ, ಡಿ.ಎಲ್.ವಿಜಯ್‍ಕುಮಾರ್, ಸಂದೀಪ್, ಮುಹಮ್ಮದ್, ಸಚಿನ್‍ಮೀಗಾ, ಅಕ್ಮಲ್ ಮತ್ತಿತರ ಮುಖಂಡರೊಂದಿಗೆ ಸಮಾವೇಶಕ್ಕೆ ಅಳವಡಿಸಲಾಗಿರುವ ವೇದಿಕೆ, ವಾಹನ ಪಾರ್ಕಿಂಗ್ ಸ್ಥಳ, ಸಾರ್ವಜನಿಕರಗೆ ಹಾಕಲಾಗಿರುವ ಆಸನಗಳು, ಬಂದೋಬಸ್ತ್ ಮತ್ತಿತರ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬಸವ ಧರ್ಮ ಸ್ಥಾಪನೆ ಬಗ್ಗೆ ಕಾಂಗ್ರೆಸ್ ಹಸ್ತ ಕ್ಷೇಪವಿಲ್ಲ: ಕಾಂಗ್ರೆಸ್ ಪಕ್ಷ ಎಲ್ಲ ಧರ್ಮಗಳನ್ನು ಸಮಾನದೃಷ್ಟಿಯಿಂದ ನೋಡುವ ಪಕ್ಷವೇ ಹೊರತು ಧರ್ಮಾಧಾರಿತ ಪಕ್ಷವಲ್ಲ. ಬಸವಧರ್ಮ ಸ್ಥಾಪನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಹಸ್ತಕ್ಷೇಪ ಮಾಡಿಯೂ ಇಲ್ಲ, ಮಾಡುವುದೂ ಇಲ್ಲ. ಬಸವಧರ್ಮ ಹೋರಾಟಗಾರರ ಮನವಿಯನ್ನು ಸರಕಾರ ಪರಿಶೀಲಿಸುತ್ತಿದೆಯಷ್ಟೇ. ಈ ಬಗ್ಗೆ ಸಚಿವ ಸಂಪುಟ ಸೂಕ್ತ ನಿರ್ಧಾರ ತಳೆಯಲಿದೆ.
-ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ