ಬಿಜೆಪಿಯಲ್ಲಿ ನಾಯಕತ್ವಕ್ಕೆ ದರಿದ್ರ ಹಿಡಿದಿದೆ: ವಿಕಾಸ ಪರ್ವ ಸಮಾವೇಶದಲ್ಲಿ ಕುಮಾರಸ್ವಾಮಿ

Update: 2018-03-20 16:15 GMT

ಚಿಕ್ಕಮಗಳೂರು, ಮಾ.20: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ದೇಶದ ರೈತರ, ಬಡವರ, ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎರಡೂ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ಮುಳುಗಿವೆ. ಚಿಕ್ಕಮಗಳೂರಿಗೆ ಬರುತ್ತಿರುವ ರಾಹುಲ್‍ಗಾಂದಿಯೂ ಜಿಲ್ಲೆಯ, ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ, ಅವರು ಕೇಂದ್ರ ಸರಕಾರದ ವಿರುದ್ಧ ಮಾತ್ರ ಭಾಷಣ ಮಾಡುತ್ತಾರೆ. ಈ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಸಿಎಂ ವಾಗ್ದಾಳಿ ನಡೆಸಿದ್ದಾರೆ.

ನಗರದ ಸುಭಾಶ್ಚಂದ್ರಭೋಸ್ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ನಡೆದ ಜೆಡಿಎಸ್ ವಿಕಾಸಪರ್ವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಬಿಜೆಪಿಯವರು ಚುನಾವಣಾ ಸಂದರ್ಭದಲ್ಲಿ ಅಧಿಕಾರಕ್ಕಾಗಿ ಪರಿವರ್ತನಾ ಯಾತ್ರೆ ಹೆಸರಿನಲ್ಲಿ ಸಮಾವೇಶಗಳನ್ನು ನಡೆಸಿದರೇ, ಕಾಂಗ್ರೆಸ್‍ನವರು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರಕಾರದ ದುಡ್ಡಿನಲ್ಲಿ ಸಾಧನಾ ಸಂಭ್ರಮದ ಹೆಸರಿನಲ್ಲಿ ಸಮಾವೇಶ ನಡೆಸಿದರು.  ರಾಜ್ಯದ ಕಾಂಗ್ರೆಸ್ ಸರಕಾರ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿಸುತ್ತಿದೆ ಎಂದು ಆರೋಪಿಸಿದ ಬಿಜೆಪಿ ಮುಖಂಡರು ಜನಸುರಕ್ಷಾ ಯಾತ್ರೆ ನಡೆಸಿ ಕನ್ನಡಿಗರ ಸುರಕ್ಷತೆಯ ಬಗ್ಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥೈ ಅವರನ್ನು ಕರೆತಂದಿದ್ದು, ಇದು ಬಿಜೆಪಿಯಲ್ಲಿ ನಾಯಕತ್ವಕ್ಕೆ ದರಿದ್ರ ಬಂದಿರುವುದಕ್ಕೆ ಸಾಕ್ಷಿ. ಯುಪಿಯಲ್ಲಿ 150 ಮಕ್ಕಳು ಸಾವನ್ನಪ್ಪಿದ್ದಾರೆ. ಉತ್ತಮ ಆಸ್ಪತ್ರೆಗಳಿಲ್ಲ, ಮಕ್ಕಳಿಗೆ ಸುರಕ್ಷತೆ ಇಲ್ಲ. ಈ ಬಗ್ಗೆ ಚಿಂತಿಸಬೇಕಾಗಿದ್ದ ಸಿಎಂ ಯೋಗಿ ಅವರನ್ನು ಬಿಜೆಪಿ ಮುಖಂಡರು ಇಲ್ಲಿಗೆ ಕರೆತಂದು ಕನ್ನಡಿಗರಿಗೆ ಪಾಠ ಹೇಳಿಸುವಂತಹ ನಿರ್ಲಜ್ಜ ಸ್ಥಿತಿಗೆ ತಲುಪಿದ್ದಾರೆಂದು ಟೀಕಿಸಿದರು.

ರೈತರ ಸಾಲ ಮನ್ನಾ ಮಾಡಿ ಎಂದು ಕೇಂದ್ರಕ್ಕೆ ರೈತರು ಮನವಿ ಮಾಡಿದರೇ ಸರಕಾರ ದಿವಾಳಿಯಾಗುತ್ತದೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ರೈತರನ್ನು ವಂಚಿಸುತ್ತಿದೆ. ಸಾಲ ಮನ್ನಾ ಘೋಷಣೆಯಾಗಿ 9 ತಿಂಗಳು ಕಳೆದಿದ್ದರೂ ರೈತರ ಸಾಲ ಇನ್ನೂ ಮನ್ನಾ ಆಗಿಲ್ಲ. 8 ಸಾವಿರ ಕೋ.ರೂ. ಸಾಲ ಮನ್ನಾ ಘೋಷಣೆ ಪೈಕಿ ರಾಜ್ಯ ಸರಕಾರ ಇನ್ನೂ 6322 ಕೋ. ರೂ. ಸಾಲ ಮನ್ನಾ ಬಾಕಿ ಉಳಿಸಿಕೊಂಡಿದ್ದು,  ಇದನ್ನು ಜೂನ್ ತಿಂಗಳಲ್ಲಿ ಮನ್ನಾ ಮಾಡುವುದಾಗಿ ಸಿಎಂ ಹೇಳುತ್ತಿದ್ದಾರೆ. ಆದರೆ ಜೂನ್‍ನಲ್ಲಿ ಸರಕಾರವೇ ಅಸ್ತಿತ್ವದಲ್ಲಿರುವುದಿಲ್ಲ. ಚುನಾವಣೆ ಸಂದರ್ಬದಲ್ಲಿ ರಾಜ್ಯ ಸರಕಾರ ಸಾಲ ಮನ್ನಾದ ಬಗ್ಗೆ ಸುಳ್ಳು ಹೇಳಿ ರೈತರನ್ನು ವಂಚಿಸುತ್ತಿದೆ ಎಂದ ಅವರು, ಜೂನ್ ತಿಂಗಳ ನಂತರದಲ್ಲಿ ರಾಜ್ಯದಲ್ಲಿ ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬಂದಲ್ಲಿ ಅಧಿಕಾರ ವಹಿಸಿಕೊಂಡ 24 ಗಂಟೆಯೊಳಗಾಗಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು.

ನಾನು ಸಿಎಂ ಆಗಿದ್ದಾಗ ಕರಗಡ ಏತ ನೀರಾವರಿ ಜಾರಿಗಾಗಿ ಮೂರೂವರೆ ಕೋ. ರೂ. ಅನುದಾನ ನೀಡಿದ್ದೆ. ಅಂದು ಚಾಲನೆಗೊಂಡ ಕರಗಡ ಯೋಜನೆಯನ್ನು ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಸಚಿವರಾದರೂ ಇನ್ನೂ ಪೂರ್ಣಗೊಂಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನಾಲ್ಕೂವರೆ ವರ್ಷಗಳಿಂದ ಅಧಿಕಾರಲ್ಲಿದ್ದರೂ ಈ ಯೋಜನೆ ಮುಕ್ತಿ ನೀಡಲಿಲ್ಲ. ಜಿಲ್ಲೆಯ ನೀರಾವರಿ ಸಮಸ್ಯೆಗಳೂ ಸೇರಿದಂತೆ, ಒತ್ತುವರಿಯಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎರಡೂ ಪಕ್ಷಗಳು ನಿರ್ಲಕ್ಷ್ಯ ವಹಿಸಿವೆ. ನಾನು ಪುನಃ ಸಿಎಂ ಆದರೆ ಆದ್ಯತೆ ಮೇರೆಗೆ ಕರಗಡ ಯೋಜನೆ ಸೆರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಅವರು, ಚಿಕ್ಕಮಗಳೂರು ಜಿಲ್ಲೆಗೆ ಜೆಡಿಎಸ್‍ನ ಕೊಡುಗೆ ಸಾಕಷ್ಟಿದೆ. ನಗರಕ್ಕೆ ರೈಲ್ವೆ ಯೋಜನೆ ಹಾಗೂ ಯಗಚಿ ಕುಡಿಯುವ ನೀರಿನ ಯೋಜನೆ ಜಾರಿಗೆ ಎಚ್.ಡಿ.ದೇವೇಗೌಡ ಕಾರಣ ಎಂದರು.

ಮುಖ್ಯಮಂತ್ರಿ ಬಗ್ಗೆ ಅಭಿಮಾನ ತೋರುವ ಜಿಲ್ಲೆಯ ಕುರುಬ ಸಮಾಜಕ್ಕೆ ಸಿಎಂ ಸಿದ್ದರಾಮಯ್ಯ ದ್ರೋಹ ಬಗೆದಿದ್ದಾರೆ. ಕುರುಬ ಸಮುದಾಯದ ದಕ್ಷ ಪೊಲೀಸ್ ಅಧಿಕಾರಿ ಕಲ್ಲಪ್ಪ ಹಂಡಿಬಾಗ್ ಇಲ್ಲಿನ ಮಟ್ಕಾ, ಮರಳು ದಂಧೆ, ಕ್ರಿಕೆಟ್ ಬೆಟ್ಟಿಂಗ್ ದಂಧೆಗಳನ್ನು ಮಟ್ಟಾ ಹಾಕಲು ಮುಂದಾಗಿದ್ದರು. ಆದರೆ ಬಿಜೆಪಿಯ ಪ್ರಭಾವಿಗಳು ಅವರಿಗೆ ಬೆದರಿಕೆ ಹಾಕಿದ್ದರು. ಇದನ್ನು ತಡೆಯಬೇಕಾದ ಸರಕಾರ ದಕ್ಷ ಅಧಿಕಾರಿಯ ಸಾವಿಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಮಟ್ಕಾ, ಮರಳು, ಬೆಟ್ಟಿಂಗ್ ದಂಧೆಗೆ ಕಾರಣ ಯಾರೆಂದು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರೇ ಉತ್ತರಿಸಬೇಕೆಂದರು.

 ಚಿಕ್ಕಮಗಳೂರು ಕ್ಷೇತ್ರದಲ್ಲಿ ವೀರಶೈವ ಸಮಾಜದ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಎಸ್.ಎಲ್.ಭೋಜೇಗೌಡ, ಧರ್ಮೇಗೌಡ ಸಹೋದರರು ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ತ್ಯಾಗ ಮಾಡಿದ್ದಾರೆ. ತಾನು ಸಿಎಂ ಆದಲ್ಲಿ ಅವರ ತಂದೆ, ದೇವೇಗೌಡ ಅವರ ಒಡನಾಡಿ ಲಕ್ಷ್ಮಯ್ಯ ಅವರಿಗೆ ನೀಡಿದ ಭರವಸೆಯಂತೆ ಮಂತ್ರಿ ಸ್ಥಾನ ನೀಡುತ್ತೇನೆಂದ ಅವರು, ಜೆಡಿಎಸ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಆದರೆ ಅಧಿಕಾರ ಮಾತ್ರ ನೀಡುತ್ತಿಲ್ಲ. ಈ ಬಾರಿಯಾದರೂ ಪಕ್ಷಕ್ಕೆ ಅಧಿಕಾರ ನೀಡಿ ನೋಡಿ, ವಿಧಾನಸೌಧವನ್ನೇ ಮನೆ ಬಾಗಿಲಿಗೆ ತರುತ್ತೇನೆ, ರಾಜ್ಯದ ಅವಿದ್ಯಾವಂತರಿಗೂ ಕೆಲಸ ನೀಡುತ್ತೇನೆ, ಕೃಷಿ ನೀತಿಯನ್ನೇ ಬದಲಾಯಿಸುತ್ತೇನೆಂದು ಭರವಸೆ ನೀಡಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಯುವಕರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ ಮುಖಂಡರ ಬಗ್ಗೆ ಕುಮಾರಸ್ವಾಮಿ ಟೀಕಿಸಿದ್ದೇನ್ನೇ ನೆಪ ಮಾಡಿಕೊಂಡು ಅವರು ಹಿಂದೂ ವಿರೋಧಿ ಎಂದು ಬಿಂಬಿಸಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಎಸ್.ಎಲ್,ಧರ್ಮೇಗೌಡ, ಕರಗಡ ನೀರಾವರಿ ಯೋಜನೆ ಜಾರಿ ಹಾಗೂ ಮದಗದ, ಅಯ್ಯನಕೆರೆ ಕೆರೆಗಳಿಗೆ ನೀರು ತುಂಬಿಸುವುದು ಈ ಭಾಗದ ಜನರ ಬೇಡಿಕೆಯಾಗಿದೆ. ಕುಮಾರಸ್ವಾಮಿ ಸಿಎಂ ಆದಲ್ಲಿ ಇದರ ಜಾರಿಗೆ ಆದ್ಯತೆ ನೀಡಲಿದ್ದಾರೆ. ಇದು ಬೂಟಾಟಿಕೆಯ ಮಾತಲ್ಲ ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿದರು. ಸಮಾವೇಶಕ್ಕೂ ಮುನ್ನಾ ನಗರದ ಜೆಡಿಎಸ್ ಕಚೇರಿಯಿಂದ ಎಂಜಿ ರಸ್ತೆ ಮಾರ್ಗವಾಗಿ ಜಿಲ್ಲಾ ಆಟದ ಮೈದಾನದ ವರೆಗೂ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿದರು.

ಸಮಾವೇಶದ ವೇದಿಕೆಯಲ್ಲಿ ಶಾಸಕರಾದ ಬಿ.ಬಿ.ನಿಂಗಯ್ಯ, ವೈಎಸ್‍ವಿ ದತ್ತ, ಜೆಡಿಎಸ್ ಅಭ್ಯರ್ಥಿಗಳಾದ ವೆಂಕಟೇಶ್, ಹರೀಶ್,ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಭೈರೇಗೌಡ, ಮುಖಂಡರಾದ ಪದ್ಮಾ ತಿಮ್ಮೇಗೌಡ, ಪಟೇಲ್‍ಶಿವರಾಮ್, ಮಾಜಿ ಶಾಸಕ ಶಿವಶಂಕರಪ್ಪ, ನಿಸಾರ್, ಮೊಯಿಸಿನ್ ಮತ್ತಿತರರು ಉಪಸ್ಥಿತರಿದ್ದರು.

ಸಿಎಂಗೆ ತಾಕತ್ತಿದ್ದರೇ ಪಕ್ಷೇತರವಾಗಿ ಗೆದ್ದು ಬರಲಿ: ಎಚ್.ಡಿ.ಕುಮಾರಸ್ವಾಮಿ

ಸಿಎಂ ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಹಾಗೂ ಮುಖಂಡರ ಬೆನ್ನಿಗೆ ಚೂರಿ ಹಾಕಿದವರು. ಅವರಿಗೆ ಅಸ್ತಿತ್ವವೇ ಇಲ್ಲವಾದಾಗ ಕಾಂಗ್ರೆಸ್‍ನ ಬಾಗಿಲು ತಟ್ಟಿದವರು. ಅವರಿಗೆ ತಾಕತ್ತಿದ್ದರೇ ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರಲಿ ನೋಡೋಣ ಎಂದು ಸವಾಲು ಹಾಕಿದ ಎಚ್ಡಿಕೆ, ಸಿಎಂ ದೇವೇಗೌಡರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು, ತನ್ನೊಂದಿಗೆ ಆಟ ಬೇಡ, ನನಗೂ ನಿಮಗೂ ವೆತ್ಯಾಸವಿದೆ. ಸಿದ್ದರಾಮಯ್ಯ ರಾಜ್ಯವನ್ನು ಲೂಟಿ ಮಾಡಿದ ಹಣದ ಮಧದಿಂದ ಮಾತನಾಡುತ್ತಿದ್ದಾರೆ. ಆಕ್ರೋಶ ವ್ಯಕ್ತಪಡಿಸಿ 100 ಜನ ಸಿದ್ದರಾಮಯ್ಯ ಬಂದರೂ ದೇವೇಗೌಡರ ಮಕ್ಕಳನ್ನು ಏನೂ ಮಾಡಲಾಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News