ಮಾ.21 ರಂದು ಇಂದಿರಾ ಕ್ಯಾಂಟೀನ್, ನೂತನ ಬಸ್ ನಿಲ್ದಾಣ, ಮಾರುಕಟ್ಟೆ ಉದ್ಘಾಟನೆ

Update: 2018-03-20 16:43 GMT

ಮಡಿಕೇರಿ ಮಾ.20 : ನಗರದಲ್ಲಿ ನಿರ್ಮಾಣಗೊಂಡಿರುವ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಇಂದಿರಾ ಕ್ಯಾಂಟೀನ್, ನೂತನ ಖಾಸಗಿ ಬಸ್ ನಿಲ್ದಾಣ ಹಾಗೂ ಹೈಟೆಕ್ ಮಾರುಕಟ್ಟೆ ಸಂಕೀರ್ಣದ ಉದ್ಘಾಟನಾ ಸಮಾರಂಭ ಮಾ.21 ರಂದು ನಡೆಯಲಿದೆ.

ತಲಾ ಮೂರು ಕೋಟಿ ರೂ.ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ಹಾಗೂ ಹೈಟೆಕ್ ಮಾರುಕಟ್ಟೆ ಸಂಕೀರ್ಣ ನಿರ್ಮಾಣಗೊಂಡಿದೆ. ಇಂದಿರಾ ಕ್ಯಾಂಟೀನ್ ಮೂಲಕ ರಿಯಾಯಿತಿ ದರದಲ್ಲಿ ಊಟ, ಉಪಹಾರ ಗುರುವಾರದಿಂದಲೇ ಸಿಗಲಿದೆ. ಬಸ್ ನಿಲ್ದಾಣ ಮತ್ತು ಮಾರುಕಟ್ಟೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸರಕಾರದ ಈ ಕ್ರಮವನ್ನು ಆಡಳಿತ ಪಕ್ಷ ಕಾಂಗ್ರೆಸ್ ಸ್ವಾಗತಿಸಿದ್ದರೆ, ವಿರೋಧ ಪಕ್ಷ ಬಿಜೆಪಿ ತೀವ್ರವಾಗಿ ವಿರೋಧಿಸಿದೆ.   

ಸಚಿವರಿಂದ ಉದ್ಘಾಟನೆ

ಮಾ.22 ರಂದು ಇಂದಿರಾ ಕ್ಯಾಂಟಿನ್, ನೂತನ ಖಾಸಗಿ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಉದ್ಘಾಟಿಸಲಿದ್ದಾರೆ. ನಗರದ ಎಫ್.ಎಂ.ಕೆ.ಎಂ.ಸಿ ಕಾಲೇಜು ಬಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಿರುವ ಬಾಲಕಿಯರ ಬಾಲಮಂದಿರ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಕ್ಕೆ ನೀಡಿರುವ ಸವಿರುಚಿ ಮೊಬೈಲ್ ಕ್ಯಾಂಟಿನ್, ಕುಶಾಲನಗರದ ಬಿ.ಜಿ.ಎಸ್. ಸರ್ಕಲ್ ಬಳಿ ಆಯುರ್ವೇದ ಮತ್ತು ಹೊಮಿಯೋಪತಿ ಸಂಯುಕ್ತ ಆಸ್ಪತ್ರೆ, ಕೂಡಿಗೆ-ಕೋವರ್‍ಕೊಲ್ಲಿ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News