ಸಂಪುಟದ ನಿರ್ಧಾರವನ್ನು ಮಹಾಸಭಾ ಒಪ್ಪಲ್ಲ: ಶಾಸಕ ಶಾಮನೂರು

Update: 2018-03-20 17:12 GMT

ದಾವಣಗೆರೆ, ಮಾ.20: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಸೋಮವಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ಮಹಾಸಭಾ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪತಿಳಿಸಿದ್ದಾರೆ.

ನಗರದಲ್ಲಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಪುಟದಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಕೂಲಂಕಶವಾಗಿ ಪರಿಶೀಲನೆ ನಡೆಸದೇ ಅವಸರದಲ್ಲಿ ನಿರ್ಣಯ ಸ್ವಾಗತಾರ್ಹವೆಂದು ಹೇಳಿಕೆ ನೀಡಿದ್ದೇ. ಆದರೆ, ಸಚಿವ ಸಂಪುಟದ ಸಭೆ ನಿರ್ಧಾರ ಒಮ್ಮುಖವಾಗಿದ್ದು, ವೀರಶೈವ ಲಿಂಗಾಯತ ಎರಡೂ ಒಂದೇ ಎಂಬ ಅಚಲವಾದ ನಿಲುವಿಗೆ ಮಹಾಸಭಾ ಬದ್ಧವಾಗಿದೆ ಎಂದು ಸ್ಪಷ್ಟನೆ ನೀಡಿದ ಅವರು, ವೀರಶೈವ ಧರ್ಮ 12ನೇ ಶತಮಾನದ ಲಿಂಗಾಯತ ಧರ್ಮಕ್ಕಿಂತಲೂ ಮೊದಲೇ ಇತ್ತು. ಹಾಗಾಗಿ, ಅದು ವೀರಶೈವ ಲಿಂಗಾಯಿತ ಎಂದಿರಬೇಕೆ ವಿನಃ ಲಿಂಗಾಯತ ವೀರಶೈವ ಎಂದು ತಾವು ಒಪ್ಪುವುದಿಲ್ಲ ಎಂದು ಅವರು ನುಡಿದರು.

ಸರಕಾರ ಕೈಗೊಂಡಿರುವ ತೀರ್ಮಾನ ತಮಗೆ ಒಪ್ಪಿತವಾಗಿಲ್ಲ. ವೀರಶೈವ ಲಿಂಗಾಯತ ಎಂದಿಗೂ ಒಂದೇ. ಮುಂದೆಯೂ ಕೂಡಾ ಇದೇ ಪ್ರತಿಪಾದನೆ ಶಾಶ್ವತವಾಗಿರುತ್ತದೆ ಎಂದು ಅವರು ವಿವರಿಸಿದರು.

 ಈ ಸಂದರ್ಭ ರಂಭಾಪುರಿ ಶ್ರೀ, ಉಜ್ಜಯಿನಿ ಶ್ರೀ, ಯಡಿಯೂರು ರೇಣುಕಾಶ್ರೀ, ಮುಕ್ತಿಮಂದಿರ ಶ್ರೀ, ಅಥಣಿ ವೀರಣ್ಣ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News