ಚಳ್ಳಕೆರೆ: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Update: 2018-03-20 17:17 GMT

 ಚಳ್ಳಕೆರೆ,ಮಾ.20: ಸಾಲ ಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ರೇಣುಕಾಪುರದಲ್ಲಿ ಮಂಗಳವಾರ ನಡೆದಿದೆ.

 ರೇಣುಕಾಪುರದ ರಂಗಪ್ಪ(38) ಮೃತಪಟ್ಟಿರುವ ದುರ್ದೈವಿ. ಮಂಗಳವಾರ ತನ್ನ ಜಮೀನಿನಲ್ಲಿ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರಂಗಪ್ಪನಿಗೆ ಪತ್ನಿ, ಒಬ್ಬ ಪುತ್ರಿ, ಇಬ್ಬರು ಪುತ್ರರಿದ್ದು, ಮೂವರು ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ.

ಐಸಿಐಸಿಐ ಬ್ಯಾಂಕ್‌ನಿಂದ 2016ರಲ್ಲಿ 1ಲಕ್ಷ ಸಾಲವನ್ನು ಪಡೆದಿದ್ದು ಬಡ್ಡಿಯನ್ನು ಸಹ ಕಟ್ಟಲಾರದ ಸ್ಥಿತಿ ಎದುರಿಸುತ್ತಿದ್ದರು ಎನ್ನಲಾಗಿದೆ. ಜತೆಗೆ ಖಾಸಗಿಯಾಗಿ ರೂ.4ಲಕ್ಷ ಸೇರಿದಂತೆ ಸೇರಿದಂತೆ 5 ಲಕ್ಷಕ್ಕೂ ಹೆಚ್ಚಿನ ಸಾಲ ಇದ್ದುದಾಗಿ ತಿಳಿದು ಬಂದಿದೆ.

ರಂಗಪ್ಪತನ್ನ 3 ಎಕರೆ ನೀರಾವರಿ ಆಧಾರಿತ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದರು. ರಾಗಿ, ಈರುಳ್ಳಿ ಬೆಳೆ ಹಾಕಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಕಳೆದ ಹಲವು ವರ್ಷಗಳಿಂದ ಕೃಷಿಯಲ್ಲಿ ನಷ್ಟ ಅನುಭವಿಸಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಮೃತ ರೈತನ ಸಂಬಂಧಿ ರೇಣುಕಾಪುರ ಗ್ರಾಮದ ವೀರಣ್ಣ ಹೇಳಿದ್ದಾರೆ.

 ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಅತ್ಯಂತ ಹಿಂದುಳಿದ ಮತ್ತು ಬರಗಾಲ ಪೀಡಿತ ಪ್ರದೇಶ ಎನಿಸಿರುವ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕುಗಳಲ್ಲಿ ರೈತರ ಗೋಳನ್ನು ಕೇಳುವವರಿಲ್ಲ. ತುಂಬು ಕುಟುಂಬದ ರಂಗಪ್ಪ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಕುಟುಂಬ ಬೀದಿಗೆ ಬೀಳುವಂತಾಗಿದೆ ಎಂದರು.

ಮಕ್ಕಳ ವಿದ್ಯಾಭ್ಯಾಸ, ಶುಭಕಾರ್ಯ ನೆರವೇರಿಸಲಾಗದ ಪರಿಸ್ಥಿತಿ ಎದುರಾಗಿದ್ದು, ಭವಿಷ್ಯ ಮಸುಕಾಗಿದೆ. ನಿರಂತರವಾಗಿ ಸಮಸ್ಯೆ ಎದುರಿಸುತ್ತಿರುವ ರೈತರನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೃತ ರೈತ ಕುಟುಂಬದ ಬ್ಯಾಂಕ್ ಸಾಲವನ್ನು ಮನ್ನಾ ಮಾಡಬೇಕು. ಖಾಸಗಿಯಾಗಿ ಪಡೆದ ರೈತನ ಎಲ್ಲಾ ಸಾಲವನ್ನು ತೀರಿಸಲು ಇವರ ಕುಟುಂಕ್ಕೆ ನೆರವು ಕಲ್ಪಿಸಬೇಕು ಮತ್ತು ಸರಕಾರದಿಂದ ಅಗತ್ಯ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ದಿಕ್ಕು ತೋಚುತ್ತಿಲ್ಲ.....

ಮೃತ ರೈತ ರಂಗಪ್ಪನ ಪತ್ನಿ ಸಾವಿತ್ರಮ್ಮ ಉಮ್ಮಳಿಸಿ ಬರುತ್ತಿದ್ದ ದು:ಖದ ನಡುವೆ ಮಾತನಾಡಿ, ಜೀವನಕ್ಕೆ ಆಧಾರವಾಗಿದ್ದ ತನ್ನ ಯಜಮಾನರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಗೆ ದಿಕ್ಕು ತೋಚದಂತಾಗಿದೆ. ಮಗಳಿಗೆ ಮದುವೆಯ ವಯಸ್ಸು ಸಮೀಪಿಸುತ್ತಿದ್ದು, ಭವಿಷ್ಯದ ದಾರಿ ಕಾಣದಂತಾಗಿದೆ ಎಂದು ಅಳಲು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News