ಸಾರಾಯಿ ಅಂಗಡಿ ಆರಂಭಕ್ಕೆ ವಿರೋಧ: ವಿವಿಧ ಸಂಘಟನೆಗಳಿಂದ ಅಂಗಡಿ ಬಂದ್ ಮಾಡಿ ಪ್ರತಿಭಟನೆ
ಸಾಗರ, ಮಾ.20: ತಾಲೂಕಿನ ಕಾನ್ಲೆ ಗ್ರಾಮ ಪಂಚಾಯತ್‌ನ ಕೆಲವೆ ವೃತ್ತದಲ್ಲಿ ಎಂಎಸ್‌ಐಎಲ್ ಮದ್ಯದಂಗಡಿ ತೆರೆದಿರುವುದನ್ನು ವಿರೋಧಿಸಿ ಮಂಗಳವಾರ ಕೆಲವೆ-ಹಿಂಡ್ಲೆಕೊಪ್ಪದ ಗ್ರಾಮ ಸುಧಾರಣಾ ಸಮಿತಿ, ಸ್ವಸಹಾಯ ಮತ್ತು ಸ್ತ್ರೀಶಕ್ತಿ ಸಂಘಗಳು, ಸಾರಾಯಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಅಂಗಡಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ ಗಾಳಿಪುರ, ಈ ಹಿಂದಿನಿಂದಲೂ ತಮ್ಮ ಗ್ರಾಮಗಳಲ್ಲಿ ಮದ್ಯ ಸೇವನೆ ನಿಷೇದ ಮಾಡುವ ಕುರಿತು ಕಟ್ಟುನಿಟ್ಟಿನ ಪ್ರಯತ್ನ ನಡೆಸಲಾಗುತ್ತಿದೆ.
ಗ್ರಾಮ ವ್ಯಾಪ್ತಿಯಲ್ಲಿ ಎಂಎಸ್‌ಐಎಲ್ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಅಬಕಾರಿ ಇಲಾಖೆಗೆ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. ಆದರೂ ಇಲ್ಲಿ ಸರಕಾರಿ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಿರುವುದು ಖಂಡನೀಯ ಎಂದರು. ಪ್ರತಿಭಟನೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಅನಂತ ಕೆಲವೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಣ್ಣಪ್ಪಹಿಂಡ್ಲೆಕೊಪ್ಪ, ಪ್ರಮುಖರಾದ ದೇವರಾಜ್, ರಾಜಣ್ಣ, ನಾಗರಾಜ ಕೆಲವೆ, ಮಹಾಬಲೇಶ್ ಮಂಡಗಳಲೆ, ಮಂಜು ಮತ್ತಿತರರು ಪಾಲ್ಗೊಂಡಿದ್ದರು.
ಈ ಭಾಗದಲ್ಲಿ ಅತಿಹೆಚ್ಚು ಕೂಲಿಕಾರ್ಮಿಕರು, ಕೃಷಿಕರು ವಾಸಿಸುತ್ತಿದ್ದಾರೆ. ಜೊತೆಗೆ ಸಣ್ಣ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಕರೆಗೆ ಕನಿಷ್ಠ 10 ಚೀಲ ಭತ್ತ ಬೆಳೆಯುತ್ತಾರೆ. ಇಲ್ಲಿ ಮದ್ಯದಂಗಡಿ ತೆರೆದು ರೈತರನ್ನು ಕುಡಿತಕ್ಕೆ ದಾಸರಾಗಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಜೊತೆಗೆ ಯುವಕರು ಕೂಡ ಕುಡಿತದ ಚಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ತಕ್ಷಣ ಮದ್ಯದಂಗಡಿಗೆ ನೀಡಿರುವ ಪರವಾನಿಗೆಯನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಕೈಗೆತ್ತಿಕೊಳ್ಳಬೇಕಾಗುತ್ತದೆ.
ರಾಜಶೇಖರ ಗಾಳಿಪುರ, ಜಿಪಂ ಸದಸ್ಯ