ಸೊರಬ: ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಉದ್ಘಾಟನೆ

Update: 2018-03-20 17:39 GMT

ಸೊರಬ, ಮಾ.20: ದೌರ್ಜನ್ಯಕೊಳಗಾದ ಮಹಿಳೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿಯಲ್ಲಿ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಪೊಲೀಸ್ ನೆರವು, ತಾತ್ಕಾಲಿಕ ಆಶ್ರಮ, ಸಮಾಲೋಚನೆ ಇವುಗಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ದೊರೆಯುವಂತೆ ಮಾಡಿರುವ ಸರಕಾರದ ಕಾರ್ಯಕ್ರಮ ಶ್ಲಾಘನೀಯ ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅದ್ಯಕ್ಷ ವೀರೇಶ್ ಕೊಟಗಿ ತಿಳಿಸಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಾರ್ವಜನಿಕ ಆಸ್ಪತ್ರೆ, ಕಾನೂನು ಸೇವಾ ಸಮಿತಿ, ರಕ್ಷಣಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಆಗುವ ದೌರ್ಜನ್ಯಗಳನ್ನು ತಡೆಗಟ್ಟಬೇಕೆಂದರೆ ಮಾನವನ ಮನ ಪರಿವರ್ತನೆ ಆಗಬೇಕು. ಇದೆ ಪ್ರಾಥಮಿಕ ಚಿಕಿತ್ಸೆ ಇದ್ದಂತೆ. ಸಮಾಜದಲ್ಲಿ ಮಹಿಳೆಯ ಶೋಷಣೆಯ ಹಿಂದೆ ಪುರುಷರು ಮಾತ್ರ ಕಾರಣರಲ್ಲ. ಮಹಿಳೆಯ ಪಾತ್ರವನ್ನು ಕೂಡ ಕಡೆಗಣಿಸುವಂತಿಲ್ಲ. ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಮಹಿಳೆಯ ಪಾಲು ಇರುವುದು ಹಲವಾರು ಬಾರಿ ಕಂಡು ಬರುತ್ತದೆ. ಆದ್ದರಿಂದ ಮಹಿಳೆ-ಪುರುಷ ಎಂಬ ಬೇಧವಿಲ್ಲದೆ ದೌರ್ಜನ್ಯವೆಸಗುವ ವ್ಯಕ್ತಿಗಳ ಮನಸ್ಸನ್ನು ಪರಿವರ್ತನೆ ಮಾಡಲು ಇಲಾಖೆಗಳು ಒಟ್ಟಾಗಿ ಕೆಲಸ ಮಾಡುವುದರ ಮೂಲಕ ಅವುಗಳನ್ನು ತಡೆಯುವಲ್ಲಿ ಮುಂದಾಗಬೇಕೆಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲೋಕೇಶ್ ಮಾತನಾಡಿ, ದೌರ್ಜನ್ಯಕ್ಕೊಳಗಾದ ಮಹಿಳೆಯ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಲು ಒಂದೇ ಸೂರಿನಡಿಯಲ್ಲಿ ಎಲ್ಲ ಇಲಾಖೆಗಳನ್ನು ಒಟ್ಟುಗೂಡಿಸಿ, ಒಂದು ಕಡೆ ಮಹಿಳೆಗೆ ಚಿಕಿತ್ಸೆ, ರಕ್ಷಣೆ, ನ್ಯಾಯ ದೊರೆಯುವಂತೆ ಮಾಡುವುದು ಸುಲಭವಾಗುತ್ತದೆ. ಆದ್ದರಿಂದ ನಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಆಶ್ರಯ ನೀಡುವುದಲ್ಲದೆ ಚಿಕಿತ್ಸೆ, ರಕ್ಷಣೆ ಮತ್ತು ಕಾನೂನಿನ ನೆರವನ್ನು ನೀಡಲಾಗುತ್ತದೆ. ಅದು ಇಂದಿನಿಂದಲೇ ಇದರ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.

ಉದ್ಘಾಟನೆಯನ್ನು ಜಿಪಂ ಸದಸ್ಯೆ ತಾರಾ ಶಿವಾನಂದ ನೆರವೇರಿಸಿದರು. ಸಾಂತ್ವನ ಕೇಂದ್ರದ ಪ್ರಶಾಂತ ಹುನವಳ್ಳಿ, ಸಾವಿತ್ರಿ ವಸಂತ, ರೇಣುಕಮ್ಮ, ವಿಜಯಲಕ್ಷ್ಮೀ, ದಿವ್ಯಾ, ಅನುಸೂಯಾ, ಮಹಿಳಾ ಸಂರಕ್ಷಣಾಧಿಕಾರಿ ನಾಗರತ್ನಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News