ಕಾಂಗ್ರೆಸ್, ಬಿಜೆಪಿ ಬಿಡಿ, ಜೆಡಿಎಸ್‍ಗೆ ಮತ ನೀಡಿ: ಅಲ್ಪಸಂಖ್ಯಾತರಿಗೆ ಮಾಜಿ ಸಚಿವ ಬಿ.ಎ.ಜೀವಿಜಯ ಕರೆ

Update: 2018-03-20 17:53 GMT

ಮಡಿಕೇರಿ ಮಾ.20 :ಅಲ್ಪಸಂಖ್ಯಾತರನ್ನು ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಂಡು ಬಂದಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಟೀಕಿಸಿರುವ ಮಾಜಿ ಸಚಿವ ಬಿ.ಎ.ಜೀವಿಜಯ, ಅಲ್ಪಸಂಖ್ಯಾತರು ಈ ಬಾರಿ ಜೆಡಿಎಸ್‍ನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಜಾತ್ಯತೀತ ಜನತಾದಳದ  ಅಲ್ಪಸಂಖ್ಯಾತರ ಘಟಕದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆ ಸಂದರ್ಭ ಮಾತ್ರ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುತ್ತಿದ್ದು, ಓಲೈಕೆ ರಾಜಕಾರಣಕ್ಕೆ ಈ ಬಾರಿ ಅಲ್ಪಸಂಖ್ಯಾತರು ಸರಿಯಾದ ಉತ್ತರವನ್ನು ನೀಡಲಿದ್ದಾರೆ ಎಂದರು. ಒಂದೇ ನಾಣ್ಯದ ಎರಡು ಮುಖಗಳಂತ್ತಿರುವ ಎರಡು ಪಕ್ಷಗಳನ್ನು ತ್ಯಜಿಸಿ ಜೆಡಿಎಸ್‍ನ್ನು ಬೆಂಬಲಿಸುವ ಮೂಲಕ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ಸಹಕರಿಸುವಂತೆ ಜೀವಿಜಯ ಮನವಿ ಮಾಡಿದರು.

  ಜೆಡಿಎಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೆ.ಎಂ.ಗಣೇಶ್ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ, ಆದರೆ ಬಿಜೆಪಿ ಪ್ರಜೆಗಳ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡೂ ಒಂದೇ ರೀತಿಯಾಗಿ ನಡೆದುಕೊಳ್ಳುತ್ತಿದ್ದು, ಮತಗಳಿಸುವ ಪ್ರಯತ್ನವನ್ನಷ್ಟೇ ಮಾಡುತ್ತಿವೆ ಎಂದು ಟೀಕಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ನಾವು ಜಾತಿ, ಧರ್ಮ, ಭೇದವಿಲ್ಲದೆ ಒಗ್ಗಟ್ಟಿನಲ್ಲಿ ಬದುಕಬೇಕಾಗಿದೆ. ಈ ವಾತಾವರಣವನ್ನು ಜಾತ್ಯತೀತ ಜನತಾದಳ ಮಾತ್ರ ಸೃಷ್ಟಿಸಲು ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.

ಈ ಹಿಂದೆ ಟಿಪ್ಪುವನ್ನು ಹಾಡಿ ಹೊಗಳುತ್ತಿದ್ದ ಬಿಜೆಪಿ ಇಂದು ಟಿಪ್ಪು ಹೆಸರಿನಲ್ಲಿ ಅಶಾಂತಿಯನ್ನು ಮೂಡಿಸುತ್ತಿದೆ, ಇದು ಬಿಜೆಪಿಯ ಕ್ಷುಲ್ಲಕ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ಗಣೇಶ್ ಆರೋಪಿಸಿದರು. ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆಯನ್ನು ತರುವ ಮೂಲಕ ಜೆಡಿಎಸ್ ಪಕ್ಷಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು. 

 ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಸಾಕ್ ಖಾನ್ ಮಾತನಾಡಿ ಪ್ರತಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ರಾಜ್ಯದ ಅಲ್ಪಸಂಖ್ಯಾತರು ಈ ಬಾರಿ ಬದಲಾವಣೆಯನ್ನು ಬಯಸುತ್ತಿದ್ದು, ಜೆಡಿಎಸ್‍ಗೆ ಅಧಿಕಾರ ತಂದುಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕ್‍ನ್ನಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಬಿಜೆಪಿ ಅಲ್ಪಸಂಖ್ಯಾತರ ಹಿತವನ್ನು ಕಾಯದೆ ಅಶಾಂತಿಯನ್ನು ಸೃಷ್ಟಿಸುತ್ತಿದೆ ಎಂದು ಇಸಾಕ್ ಖಾನ್ ಆರೋಪಿಸಿದರು.

 ಜೆಡಿಎಸ್ ನಗರಾಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ರಾಜ್ಯ ಉಪಾಧ್ಯಕ್ಷರಾದ ಶರೀಫ್,  ಕಾರ್ಯದರ್ಶಿ ಮನ್ಸೂರ್ ಆಲಿ, ನಗರಸಭಾ ಸದಸ್ಯರಾದ ಲೀಲಾ ಶೇಷಮ್ಮ, ಮಾಜಿ ಸದಸ್ಯರಾದ ಅಶ್ರಫ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News