ಹನೂರು: ಮಹಾರಥೋತ್ಸವ

Update: 2018-03-20 18:19 GMT

ಹನೂರು, ಮಾ.20: ಮಲೆ ಮಹದೇಶ್ವರನ ಯುಗಾದಿಯ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. ಸಾಲೂರು ಮಠದ ಬೃಹನ್ಮಠಾಧ್ಯಕ್ಷ ಗುರುಸ್ವಾಮೀಜಿ ಹಾಗೂ ಬೇಡಗಂಪಣ ಅರ್ಚಕರು ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಸೂಕ್ತ ಪೊಲೀಸ್ ಬಂದೋಬಸ್ತ್‌ನೊಂದಿಗೆ ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ, ಸೂರಿಪಾನಿ, ಛತ್ರಿ, ಚಾಮರ, ನಂದಿ ಧ್ವಜ ಹಾಗೂ ಮಂಗಳವಾದ್ಯದೊಂದಿಗೆ ದೇಗುಲದ ಸುತ್ತ ಒಂದು ಸುತ್ತು ತೇರನ್ನು ಪ್ರದಕ್ಷಿಣೆ ಹಾಕಲಾಯಿತು. ಇದೇ ವೇಳೆ ಹುಲಿವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನದ ಉತ್ಸವವನ್ನು ನೆರವೇರಿಸಲಾಯಿತು. ವೀರಗಾಸೆ ಕುಣಿತ ಭಕ್ತಾಧಿಗಳ ಗಮನ ಸೆಳೆಯಿತು. ರಥೋತ್ಸವದಲ್ಲಿ ನೆರೆದಿದ್ದ ಭಕ್ತರು ತೇರಿಗೆ ಹಣ್ಣು ಧವನ, ಧನ, ಧಾನ್ಯ ಎಸೆದು ನಮಿಸುವುದರ ಮೂಲಕ ಮಾದಪ್ಪನ ಕೃಪೆಗೆ ಪಾತ್ರರಾದರು. ಸೂಕ್ತ ಪೊಲೀಸ್ ಬಂದೋಬಸ್ತ್:

ಮಹಾರಥೋತ್ಸವದ ಹಿನ್ನೆಲೆ ದೇಗುಲದ ಆವರಣದಲ್ಲಿ ಬೆಳಗ್ಗೆ ಯಿಂದಲೇ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದರು. ಈ ಹಿನ್ನೆಲೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸಿತ್ತು. ರಥೋತ್ಸವದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಸಹಾಯಕ ಕಾರ್ಯದರ್ಶಿ ಬಸವರಾಜು, ಪ್ರಾಧಿಕಾರದ ನೌಕರರು, ದೇಗುಲದ ಅರ್ಚಕ ವೃಂದ ಹಾಗೂ ಸಿಬ್ಬಂದಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News