×
Ad

ಮಡಿಕೇರಿ: ಕಾವೇರಿ ಎಜುಕೇಷನ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳಿಗೆ ಸುವರ್ಣ ಸಂಭ್ರಮ

Update: 2018-03-21 17:06 IST

ಮಡಿಕೇರಿ, ಮಾ.21: ದಕ್ಷಿಣ ಕೊಡಗಿನ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡಿ ಶ್ಲಾಘನೀಯ ಕಾರ್ಯ ನಿರ್ವಹಿಸುತ್ತಿರುವ ಗೋಣಿಕೊಪ್ಪಲಿನ ಕಾವೇರಿ ಎಜುಕೇಷನ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳು 50 ವಸಂತಗಳನ್ನು ಪೂರೈಸುವ ಮೂಲಕ ಸುವರ್ಣ ಸಂಭ್ರಮಾಚರಣೆಯಲ್ಲಿವೆ.

ಸುದ್ದಿಗೋಷ್ಠಿಯಲ್ಲಿ ಕಾವೇರಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಡಾ. ಎ.ಸಿ. ಗಣಪತಿ ಈ ಕುರಿತು ಮಾಹಿತಿ ನೀಡಿದರು. ಕಳೆದ ಒಂದು ವರ್ಷದ ಅವಧಿಯುದ್ದಕ್ಕೂ ಸುವರ್ಣ ಮಹೋತ್ಸವದ ಹಿನ್ನೆಲೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದು, ಇದೇ ಮಾರ್ಚ್ 28 ರಂದು ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ ಸಮಾರಂಭ ನಡೆಯಲಿದೆಯೆಂದು ತಿಳಿಸಿದರು.

ಸುವರ್ಣ ಮಹೋತ್ಸವ ಸಮಾರಂಭ ಅಂದು ಬೆಳಗ್ಗೆ 10 ಗಂಟೆಗೆ ತನ್ನ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಪಾಲ್ಗೊಳ್ಳಲಿದ್ದಾರೆ. ಇವರು ಸುವರ್ಣ ಸಂಭ್ರಮದ ಕುರುಹಾಗಿ ಕಾಲೇಜಿನ ಪ್ರವೇಶ ದ್ವಾರದಲ್ಲಿ ಸ್ಥಾಪಿಸಲಾಗಿರುವ ಶಿಕ್ಷಣ ಸಂಸ್ಥೆಯ ಆರಂಭಕ್ಕೆ ಕಾರಣರಾದ ಚೆಕ್ಕೇರ ಬಿ.ಮುತ್ತಣ್ಣ ಅವರ ಪುತ್ಥಳಿಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ  ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾವೇರಿ ಶಿಕ್ಷಣ ಸಂಸ್ಥೆ ನಡೆದು ಬಂದ ಹಾದಿಯ ಕುರಿತ ‘ಕಾವೇರಿ ಪಥ’ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಲಿದ್ದಾರೆ. ಸಂಸದರಾದ ಪ್ರತಾಪ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದರು.

ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುವ ಉದಾತ್ತ ಚಿಂತನೆಯಡಿ 1968 ರಲ್ಲಿ ಆರಂಭಗೊಂಡ ಕಾವೇರಿ ಎಜುಕೇಷನ್ ಸೊಸೈಟಿಯ ಪಿಯುಸಿ ವಿಭಾಗದಲ್ಲಿ ಆರಂಭದಲ್ಲಿ 71 ವಿದ್ಯಾರ್ಥಿಗಳಿದ್ದರು. ಪ್ರಸ್ತುತ ಶಿಕ್ಷಣ ಸಂಸ್ಥೆ ಗೋಣಿಕೊಪ್ಪ ಮತ್ತು ವೀರಾಜಪೇಟೆಯಲ್ಲಿ ಪದವಿ ಪೂರ್ವ, ಪದವಿ ಕಾಲೇಜುಗಳನ್ನು ಹಾಗೂ ಗೋಣಿಕೊಪ್ಪಲಿನಲ್ಲಿ ಇಂಜಿನಿಯರಿಂಗ್ ಡಿಪ್ಲೋಮ, ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದ್ದು, ಒಟ್ಟು 2449 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 218 ಉದ್ಯೋಗಿಗಳಿರುವುದಾಗಿ ಡಾ.ಎ.ಸಿ. ಗಣಪತಿ ಮಾಹಿತಿ ನೀಡಿದರು.

ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗಿದೆಯೆಂದು ಗೋಣಿಕೊಪ್ಪಲು ಕಾವೇರಿ ಕಾಲೇಜು ಪ್ರಾಂಶುಪಾಲರಾದ ಪ್ರೊ. ಪಿ.ಎ. ಪೂವಣ್ಣ ತಿಳಿಸಿದರು.

ಕಳೆದ 2017ನೇ ಸಾಲಿನಲ್ಲಿ ಅಂತರಾಷ್ಟ್ರೀಯ ಯೋಗ ದಿನ, ನಾಯಕತ್ವ ಶಿಬಿರ ಸೇರಿದಂತೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ದಿ. ಸಿ.ಬಿ. ಮುತ್ತಣ್ಣ, ದಿ. ಕೆ.ಸಿ. ಮಂದಣ್ಣ, ದಿ. ಸಿ.ಪಿ. ಕುಶಾಲಪ್ಪ, ದಿ. ಸಿ.ಕೆ. ಪೂವಯ್ಯ ಅವರ ಕುರಿತಾದ ಉಪನ್ಯಾಸ ಕಾರ್ಯಕ್ರಮವನ್ನು ಕಳೆದ ಆಗಸ್ಟ್ 18 ರಂದು ನಡೆಸಲಾಯಿತಾದರೆ, ಸೆಪ್ಟೆಂಬರ್ 26 ರಂದು ದಿ. ಎ.ಎನ್. ಸೋಮಯ್ಯ, ಕ್ಯಾಪ್ಟನ್ ದಿ.ಮನೆಯಪಂಡ ನಂಜಪ್ಪ, ದಿ.ಎ.ಕೆ.ನಾಚಪ್ಪ, ದಿ. ಡಾ. ಎಂ.ಎಂ. ಚಂಗಪ್ಪ ಅವರ ಕುರಿತ ಉಪನ್ಯಾಸ ಕಾರ್ಯಕ್ರಮ,  ಡಿಸೆಂಬರ್ 20 ರಂದು ಬುಟ್ಟಿಯಂಡ ಎಂ. ಅಪ್ಪಾಜಿ, ಕೆ.ಎ. ಚಿಣ್ಣಪ್ಪ, ಸಿ.ಪಿ. ಬೆಳ್ಳಿಯಪ್ಪ, ಎ.ಟಿ. ಭೀಮಯ್ಯ ಮತ್ತು ಕೆ.ಎನ್. ಉತ್ತಪ್ಪ ಅವರ ಕುರಿತ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಯಿತೆಂದು ತಿಳಿಸಿದರು.

ಈ ಎಲ್ಲಾ ಕಾರ್ಯಕ್ರಮಗಳಿಗೆ ಕಳಶಪ್ರಾಯವಾಗಿ ಕಳೆದ ಸಾಲಿನ ನವೆಂಬರ್ 4 ರಂದು ಕಾಲೇಜು ಆವರಣದಲ್ಲಿ ಫೀ.ಮಾ.ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಅವರ ಪ್ರತಿಮೆಗಳ ಉದ್ಘಾಟನಾ ಕಾರ್ಯಕ್ರಮ ಜ.ಬಿಪಿನ್ ರಾವತ್ ಉಪಸ್ಥಿತಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದುದನ್ನು ಸ್ಮರಿಸಿಕೊಂಡ ಪ್ರೊ. ಪಿ.ಎ. ಪೂವಣ್ಣ, ಇವುಗಳೊಂದಿಗೆ ಕ್ರೀಡಾ ಚಟುವಟಿಕೆ, ಹಳೇ ವಿದ್ಯಾರ್ಥಿ ಸಂಘದ ಕಾರ್ಯಕ್ರಮ, ರಸಪ್ರಶ್ನೆ ಕಾರ್ಯಕ್ರಮ ಮೊದಲಾದವುಗಳನ್ನು ಸುವರ್ಣ ಮಹೋತ್ಸವ ಪ್ರಯುಕ್ತ ನಡೆಸಲಾಯಿತೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾವೇರಿ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷರಾದ ಸಿ.ಬಿ. ದೇವಯ್ಯ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News