×
Ad

ಸವರ್ಣೀಯರ ದೌರ್ಜನ್ಯದ ಬಗ್ಗೆ ದೂರು ನೀಡಿದರೂ ಪೊಲೀಸರ ನಿರ್ಲಕ್ಷ್ಯ: ಆರೋಪ

Update: 2018-03-21 17:27 IST

ಚಿಕ್ಕಮಗಳೂರು, ಮಾ.21: ಸವರ್ಣೀಯ ಸಮುದಾಯದ ವ್ಯಕ್ತಿಯೊಬ್ಬರು ವಿನಾಕಾರಣ ಹಲ್ಲೆ ಮಾಡಿದ್ದಲ್ಲದೇ ಜಾತಿನಿಂದನೆ ಮಾಡಿ, ಬಟ್ಟೆ ಹಿಡಿದು ಎಳೆದಾಡಿದ್ದು, ಘಟನೆ ಬಗ್ಗೆ ಬಾಳೂರು ಠಾಣೆಯಲ್ಲಿ ದೂರು ದಾಖಲಿಸಿದರೂ ಪೊಲೀಸರು ದೂರು ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಗ್ರಾಮದ ಲಕ್ಷ್ಮೀ ಎಂಬ ಮಹಿಳೆ ಆರೋಪಿಸಿದ್ದು, ತನಗೆ ಹಾಗೂ ತನ್ನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಕಳೆದ ಮಾ.17ರಂದು ಶನಿವಾರ ರಾತ್ರಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಹೊಸಳ್ಳಿ ಗ್ರಾಮದಲ್ಲಿ ಎಸ್.ಸವಿನ್‍ಗೌಡ ಎಂಬಾತ ವಿನಾಕಾರಣ ಗುಂಪು ಕಟ್ಟಿಕೊಂಡು ಏಕಾಏಕಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ಜಾತಿನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಮಾರಣಾಂತಿಕವಾಗಿ ಹಲ್ಲೆಮಾಡಿದ್ದಾನೆ. ಬಟ್ಟೆ ಹಿಡಿದು ಎಳೆದಾಡಿ ದೌರ್ಜನ್ಯ ಎಸಗಿದ್ದಾರೆ. ಸವಿನ್‍ಗೌಡ ನನ್ನ ಎಡಕೈಗೆ ದೊಣ್ಣೆಯಿಂದ ಹಲ್ಲೆ ಮಾಡಿರುವುದರಿಂದ ಎಡಕೈ ತುಂಡಾಗಿದೆ. ಘಟನೆ ಸಂಬಂಧ ಬಾಳೂರು ಠಾಣಾಧಿಕಾರಿಗೆ ದೂರು ನೀಡಿದ್ದರೂ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮವಹಿಸಿಲ್ಲ, ಯಾರನ್ನೂ ಬಂಧಿಸಿಲ್ಲ ಎಂದು ಆರೋಪಿಸಿರುವ ಮಹಿಳೆ ಹಾಗೂ ಕುಟುಂಬದವರು, ಈ ಬಗ್ಗೆ ಪೊಲೀಸರನ್ನು ವಿಚಾರಿಸಿದರೆ ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ತನಗೆ ಹಾಗೂ ತನ್ನ ಕುಟುಂಬಕ್ಕೆ ಸವಿನ್‍ಗೌಡ ಮತ್ತವನ ಕಡೆಯವರಿಂದ ಜೀವ ಬೆದರಿಕೆ ಇದ್ದು, ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡುವುದರೊಂದಿಗೆ ಹಲ್ಲೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷಗೆ ಗುರಿಪಡಿಸಬೇಕೆಂದು ಲಕ್ಷ್ಮೀ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ವೇಳೆ ಕೂದುವಳ್ಳಿ ಮಂಜುನಾಥ್, ಮಾವಿನಗುಣಿ ಲೋಕೇಶ್, ಹೊನ್ನೇಶ್, ಉಂಡೇದಾಸರಹಳ್ಳಿ, ವಸಂತ್, ನವೀನ್, ಪೂರ್ಣೇಶ್, ಚೇತನ್, ಅಣ್ಣಪ್ಪ, ಸುರೇಶ್, ಮಂಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News