ನಂಬಿದವರನ್ನು ಮುಗಿಸುವುದೇ ದೇವೇಗೌಡ, ಕುಮಾರಸ್ವಾಮಿಯ ಕೆಲಸ: ಶಾಸಕ ಝಮೀರ್ ಅಹ್ಮದ್

Update: 2018-03-21 16:22 GMT

ಮೈಸೂರು,ಮಾ.21: ನಂಬಿದವರನ್ನು ಮುಗಿಸುವುದೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕೆಲಸ ಎಂದು ಜೆಡಿಎಸ್ ಬಂಡಾಯ ಶಾಸಕ ಝಮೀರ್ ಅಹ್ಮದ್ ಆರೋಪಿಸಿದರು.

ಮೈಸೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸುದ್ದಿಗೋಷ್ಠಿಯಲ್ಲಿ ನನಗೆ ಬೇರೆಯವರಿಂದ ಬೆದರಿಕೆ ಹಾಕಿಸುತ್ತಿದ್ದಾರೆ. ಅವರ ಬೆದರಿಕೆಗೆ ನಾನು ಬಗ್ಗುವುದಿಲ್ಲ. ಪುನಃ ಪಕ್ಷಕ್ಕೆ ಬರುವಂತೆ ಹೇಳುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಮತ್ತೆ ಜೆಡಿಎಸ್ ಗೆ ಹೋಗುವುದಿಲ್ಲ. ನಾನು ಈಗಾಗಲೇ ಕಾಂಗ್ರೆಸ್ ಜೊತೆ ಇದ್ದೇನೆ. ಇದೇ ತಿಂಗಳು 25 ರಂದು ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ನವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ ಎಂದರು.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಬಾಗುತ್ತೇವೆ. ಈ ಸಂದರ್ಭದಲ್ಲಿ ಈ ಹೋರಾಟದ ಅವಶ್ಯಕತೆ ಇರಲಿಲ್ಲ. ಅದರ ಜೊತೆಗೆ ವಿಪ್ ಜಾರಿ ಮಾಡಿದ್ದಾರೆ. ಈಗಾಗಲೇ ನಮ್ಮನ್ನು ಜೆಡಿಎಸ್ ವರಿಷ್ಠರು ಪಕ್ಷ ಸೇರಲು ಒತ್ತಡ ಹೇರಿದ್ದಾರೆ. ನಮ್ಮ ಬಂಡಾಯ ಶಾಸಕರಿಗೆ ಬ್ಲಾಕ್ ಮೇಲ್ ತಂತ್ರ ರೂಪಿಸುತ್ತಿದ್ದಾರೆ. ಜೆಡಿಎಸ್  ವರಿಷ್ಠರು ನನ್ನನ್ನು ಸೋಲಿಸಲು ಯಾವ ತಂತ್ರ ರೂಪಿಸಿದರೂ ಪ್ರಯೋಜನವಿಲ್ಲ ಎಂದು ಹೇಳಿದರು.

ಈ ತಿಂಗಳ 25 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಮೈಸೂರಿನಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ. ರಾಜ್ಯ ಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲ್ಲುವ ಅವಕಾಶ ಇಲ್ಲ. ಬಂಡಾಯ ಶಾಸಕರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬರುತ್ತದೆ ಎಂಬ ವಿಶ್ವಾಸವಿದೆ. ನನ್ನ ಬೆಂಬಲಿಗರೂ ಕೂಡ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News